Advertisement

ಮೋದಿ ಶಿವಲಿಂಗದ ಮೇಲೆ ಕುಳಿತ ಚೇಳು

12:06 PM Oct 29, 2018 | Team Udayavani |

ಬೆಂಗಳೂರು: “ಆರೆಸ್ಸೆಸ್‌ ಪಾಲಿಗೆ ಪ್ರಧಾನಿ ನರೇಂದ್ರ ಮೋದಿ ಶಿವಲಿಂಗದ ಮೇಲೆ ಕುಳಿತ ಚೇಳು. ಕೈಯಿಂದ ಅದನ್ನು ತೆಗೆಯಲಿಕ್ಕೂ ಆಗದು; ಚಪ್ಪಲಿಯಿಂದ ಅದಕ್ಕೆ ಹೊಡೆಯಲಿಕ್ಕೂ ಆಗದಂತಾಗಿದೆ’ ಎಂದು ಸಾಹಿತಿ ಮತ್ತು ಸಂಸದ ಶಶಿ ತರೂರ್‌ ತೀಕ್ಷ್ಣವಾಗಿ ಹೇಳಿದರು. ನಗರದ ಲಲಿತ್‌ ಅಶೋಕ ಹೋಟೆಲ್‌ನಲ್ಲಿ ಭಾನುವಾರ ಹಮ್ಮಿಕೊಂಡ ಬೆಂಗಳೂರು ಸಾಹಿತ್ಯೋತ್ಸವದಲ್ಲಿ ತಾವು ರಚಿಸಿದ “ದಿ ಪ್ಯಾರಾಡಾಕ್ಸಿಕಲ್‌ ಪ್ರೈಮ್‌ ಮಿನಿಸ್ಟರ್‌’ ಕೃತಿ ಕುರಿತ ಉಪನ್ಯಾಸದಲ್ಲಿ ಅವರು ಮಾತನಾಡಿದರು. 

Advertisement

ತಮಗೆ ವಹಿಸಿದ ಜವಾಬ್ದಾರಿಗಳಿಂದ ನರೇಂದ್ರ ಮೋದಿ ನುಣುಚಿಕೊಳ್ಳುತ್ತಿರುವ ಬಗ್ಗೆ ಆರೆಸ್ಸೆಸ್‌ನಲ್ಲಿ ಹತಾಶೆ ಉಂಟಾಗಿದೆ. ಅಷ್ಟೇ ಅಲ್ಲ, ಮೋದಿ ಪ್ಲಸ್‌ ಹಿಂದುತ್ವದ ಸಮ್ಮಿಲನ “ಮೋದಿತ್ವ’ವು ಆರೆಸ್ಸೆಸ್‌ ಮೀರಿ ಬೆಳೆಯಲು ಹವಣಿಸುತ್ತಿದೆ. ಹಾಗಾಗಿ, ಇದು ಶಿವಲಿಂಗದ ಮೇಲೆ ಚೇಳು ಕುಳಿತಂತೆ ಆಗಿದೆ. ಆ ಚೇಳನ್ನು ಕೈಯಿಂದ ತೆಗೆಯಲಿಕ್ಕೂ ಆಗುತ್ತಿಲ್ಲ. ಚಪ್ಪಲಿಯಿಂದ ಹೊಡೆಯುವಂತೆಯೂ ಇಲ್ಲ. ಇಂತಹ ಸಂದಿಗ್ಧತೆಯಲ್ಲಿ ಸಿಲುಕಿದಂತಾಗಿದೆ ಎಂದು ಸೂಚ್ಯವಾಗಿ ಹೇಳಿದರು.

ನರೇಂದ್ರ ಮೋದಿ ಹಿಂದುತ್ವ ಚಳವಳಿ ಹಿನ್ನೆಲೆಯಿಂದಲೇ ಬಂದಿದ್ದರೂ ಅದರ ಬಂಧನದಲ್ಲಿ ಅವರು ಸಿಲುಕಿಕೊಳ್ಳಲು ಇಚ್ಛಿಸದೆ, ತಮ್ಮದೇ ಆದ ವರ್ಚಸ್ಸು ಮತ್ತು ವ್ಯಕ್ತಿತ್ವವನ್ನು ಪ್ರಾಜೆಕ್ಟ್ ಮಾಡಿಕೊಳ್ಳಲು ಹೆಚ್ಚು ಇಷ್ಟಪಡುತ್ತಾರೆ. ಇದೇ ಕಾರಣಕ್ಕೆ ಅವರು ಸಾಂಪ್ರದಾಯಿಕ ಖಾದಿ ಹಾಕಿಕೊಂಡ ವಿಶಿಷ್ಟವಾದ ಸಮಾಜವಾದಿ ರಾಜಕಾರಣಿಯೂ ಆಗಿರದೆ, ಮತ್ತೂಂದೆಡೆ ಖಾಕಿ ಚಡ್ಡಿ ತೊಟ್ಟು ಲಾಠಿ ಹಿಡಿದ ಆರೆಸ್ಸೆಸ್‌ ಕಾರ್ಯಕರ್ತರೂ ಆಗಿರದೆ ಹಿಂದುತ್ವದ ಮೌಲ್ಯಗಳನ್ನು ಒಳಗಿಟ್ಟುಕೊಂಡು, ಜಾಗತಿಕವಾಗಿ ಮುಂದುವರಿದ ವ್ಯಕ್ತಿಯಂತೆ ಬಿಂಬಿಸಿಕೊಳ್ಳುತ್ತಾರೆ ಎಂದು ವಿಶ್ಲೇಷಿಸಿದರು. 

ಗುಣಮುಖವಾಗಲು “ಕಿಚಡಿ’: ದೇಶ ಈಗ “ಮೋದಿತ್ವ’ದಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದು, ಗುಣಮುಖವಾಗಲು ಸಮ್ಮಿಶ್ರ ಸರ್ಕಾರವೆಂಬ “ಕಿಚಡಿ’ಯ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟ ಡಾ.ಶಶಿ ತರೂರ್‌, ಈ ನಿಟ್ಟಿನಲ್ಲಿ 2019ರ ಲೋಕಸಭಾ ಚುನಾವಣೆ ದೇಶದ ಹಿತದೃಷ್ಟಿಯಿಂದ ಮಹತ್ವದ್ದಾಗಿದೆ ಎಂದರು. ಭಾರತ ಒಂದು “ಥಾಲಿ’ ಇದ್ದಂತೆ. ಅದರಲ್ಲಿ ವಿವಿಧ ತರಹದ ಖಾದ್ಯ ಸೇರಿರುತ್ತದೆ.

ಆದರೆ, ಕಳೆದ ನಾಲ್ಕೂವರೆ ವರ್ಷಗಳಲ್ಲಿ ಆ ಥಾಲಿಯಲ್ಲಿನ ಹಲವು “ಡಿಶ್‌’ಗಳು ಮಾಯವಾಗಿದ್ದು, ಈಗ ಅದು “ಹಿಂದುತ್ವದ ಕಿಚಡಿ’ ಆಗಿಬಿಟ್ಟಿದೆ ಎಂದು ತೀಕ್ಷ್ಣವಾಗಿ ಹೇಳಿದರು. ಇದನ್ನು ಸಂವಾದದಲ್ಲಿ ಪ್ರಶ್ನಿಸಿದ ತಿರುವನಂತಪುರಂ ಮೂಲದ ವ್ಯಕ್ತಿಯೊಬ್ಬರು, ಪ್ರತಿಪಕ್ಷ ಕೂಡ ಕಿಚಡಿಯಂತಾಗಿದೆ. ಹೀಗಿರುವಾಗ, ನಿಮಗೆ ಯಾಕೆ ವೋಟು ಹಾಕಬೇಕು ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತರೂರ್‌, ಹುಷಾರಿಲ್ಲದಾಗ ಕಿಚಡಿ ತುಂಬಾ ಒಳ್ಳೆಯದು. ಈಗ ದೇಶ ಅನಾರೋಗ್ಯಕ್ಕೆ ತುತ್ತಾಗಿರುವುದರಿಂದ ಸಮ್ಮಿಶ್ರ ಸರ್ಕಾರದ ಕಿಚಡಿಯ ಅವಶ್ಯಕತೆ ಹೆಚ್ಚಿದೆ ಎಂದು ಹೇಳಿದರು. 

Advertisement

ಅಷ್ಟಕ್ಕೂ ದೇಶದಲ್ಲಿ ಯಾವುದೇ ಕ್ರಾಂತಿಕಾರಿ ಯೋಜನೆಗಳು ಜಾರಿಯಾಗಿದ್ದು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ. ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್‌ ಅವಧಿಯಲ್ಲಿ ಉದಾರೀಕರಣ ಬಂತು. ಅಟಲ್‌ ಬಿಹಾರಿ ವಾಜಪೇಯಿ ಅಧಿಕಾರಾವಧಿಯಲ್ಲಿ ಸರ್ವಶಿಕ್ಷಣ ಅಭಿಯಾನ, ಯುಪಿಎ-1ರ ಅವಧಿಯಲ್ಲಿ ಹಲವು ಸುಧಾರಣೆಗಳು ಬಂದವು. ಈ ಎಲ್ಲ ಹಿನ್ನೆಲೆಯಲ್ಲಿ ನಾವು 2019ರ ಚುನಾವಣೆಯನ್ನು ನಿರ್ಧರಿಸಬೇಕಿದೆ ಎಂದು ಹೇಳಿದರು. 

ವಿದೇಶದಲ್ಲಿ ಮಾತಾಡಿದ್ದೇ ಹೆಚ್ಚು!: ಪ್ರಧಾನಿ ಮೋದಿ ಅವರು ಲೋಕಸಭೆಯಲ್ಲಿ ಮಾತನಾಡಿದ್ದಕ್ಕಿಂತ ವಿದೇಶದಲ್ಲಿ ಮಾತಾಡಿದ್ದೇ ಹೆಚ್ಚು. ಅಷ್ಟೇ ಅಲ್ಲ, ಕಳೆದ ನಾಲ್ಕೂವರೆ ವರ್ಷದಲ್ಲಿನ ಪ್ರಧಾನಿಯ ವಿದೇಶ ಪ್ರವಾಸ ಲೆಕ್ಕಹಾಕಿದರೆ, ಒಂದು ವರ್ಷ ಅವರು ವಿದೇಶದಲ್ಲೇ ಕಳೆದಿದ್ದಾರೆ ಎಂದು ಟೀಕಿಸಿದರು.

ಪ್ರಸ್ತುತ ಆಡಳಿತದಲ್ಲಿ ಇರುವುದು ಲೋಕತಂತ್ರ ವ್ಯವಸ್ಥೆಯ “ರಾಷ್ಟ್ರಪತಿ ಆಡಳಿತ’. ಇಲ್ಲಿ ಸಚಿವ ಸಂಪುಟ ಲೆಕ್ಕಕ್ಕೇ ಇಲ್ಲ. ಸಿಬಿಐನಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಕೇಂದ್ರ ಗೃಹ ಸಚಿವರಿಗೆ ಗೊತ್ತಿರುವುದಿಲ್ಲ. ರಫೇಲ್‌ ಡೀಲ್‌ ಕುರಿತು ರಕ್ಷಣಾ ಸಚಿವರಿಗೆ ಮಾಹಿತಿ ಇರುವುದಿಲ್ಲ. ಮಾಹಿತಿ ಹಕ್ಕು ಕಾಯ್ದೆ ಅಡಿ ಲಕ್ಷಾಂತರ ಅರ್ಜಿಗಳಿಗೆ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ತರೂರ್‌ ಬೇಸರ ವ್ಯಕ್ತಪಡಿಸಿದರು.

ರಾಹುಲ್‌ಗಾಂಧಿ ಅವರು ತಮ್ಮನ್ನು ತಾವು ಶಿವಭಕ್ತ ಎಂದು ಹೇಳಿಕೊಳ್ಳುತ್ತಿದ್ದರೆ, ಅವರ ಪಕ್ಷದ ನಾಯಕರೊಬ್ಬರು “ಚಪ್ಪಲಿ’ ಉಲ್ಲೇಖದ ಮೂಲಕ ಶಿವಲಿಂಗ ಮತ್ತು ಮಹದೇವನ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದಾರೆ. ತರೂರ್‌ ಹೇಳಿಕೆಗೆ ರಾಹುಲ್‌ ಬೆಂಬಲ ನೀಡುವುದಿಲ್ಲ ಎಂದಾದರೆ, ಅವರು ಕೂಡಲೇ ದೇಶದ ಕ್ಷಮೆ ಯಾಚಿಸಲಿ.
-ರವಿಶಂಕರ್‌ ಪ್ರಸಾದ್‌, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next