ಚಿಕ್ಕಬಳ್ಳಾಪುರ: ಕೇಂದ್ರದ ಬಿಜೆಪಿ ನೇತೃತ್ವದ ಮೋದಿ ಸರ್ಕಾರ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಗ್ಗೊಲೆ ಮಾಡುವ ಮೂಲಕ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆಯೆಂದು ಸಿಪಿಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತರಾಮ್ ಯೆಚೂರಿ ವಾಗ್ದಾಳಿ ನಡೆಸಿದರು.
ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಶನಿವಾರ ಸಿಪಿಎಂ ಪಕ್ಷದ ಅಭ್ಯರ್ಥಿಯಾಗಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ ಡಾ.ಅನಿಲ್ ಕುಮಾರ್ ಪರ ನಡೆದ ರೋಡ್ ಶೋ ಬಳಿಕ ನಗರದಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಕಾರ್ಯರ್ತರ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದ ಒಕ್ಕೂಟದ ವ್ಯವಸ್ಥೆಗೆ ಗಂಡಾಂತರ ಬಂದಿದೆ. ಆತ್ಮನಿರ್ಭರ ಭಾರತ ಬದಲಾಗಿ ಆತ್ಮವನ್ನು ಸಾಯಿಸುವ ಕೆಲಸವನ್ನು ಬಿಜೆಪಿ ಸರ್ಕಾರಗಳು ಮಾಡುತ್ತಿವೆ. ಯಾವುದೇ ಚುನಾವಣೆ ನಡೆಯಲಿ ಬಿಜೆಪಿ ತನ್ನ ಅಧಿಕಾರ, ಹಣ, ಇಡಿ, ಸಿಬಿಐನ್ನು ಬಳಸಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಚಾರವೆಸಗುವ ರೀತಿಯಲ್ಲಿ ಶಾಸಕರನ್ನು ಖರೀದಿಸಿ ಬಿಜೆಪಿ ಸರ್ಕಾರ ರಚಿಸುತ್ತಿದೆಯೆಂದರು. ಮೋದಿ ಸರ್ವಾಧಿಕಾರಿ ಧೋರಣೆ ದೇಶದ ಆರ್ಥಿಕ, ಸಾಮಾಜಿಕ ನ್ಯಾಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಿದೆ. ಆದರೆ ಅಂಬಾನಿ, ಅದಾನಿಗೆ 11 ಲಕ್ಷ ಕೋಟಿ ಸಾಲ ಮನ್ನ ಮಾಡಿ ಬ್ಯಾಂಕುಗಳನ್ನು ದಿವಾಳಿ ಮಾಡಲು ಹೊರಟಿದ್ದಾರೆ. ಈ ಚುನಾವಣೆ ಮೂಲಕ ಜನ ವಿರೋಧಿ ಬಿಜೆಪಿ ಸರ್ಕಾರವನ್ನು ಕರ್ನಾಟಕದಿಂದ ಮುಕ್ತ ಮಾಡಬೇಕು, ಬಾಗೇಪಲ್ಲಿ ಕ್ಷೇತ್ರದಲ್ಲಿ ಸಿಪಿಎಂ ಪಕ್ಷದ ಅಭ್ಯರ್ಥಿ ಡಾ.ಅನಿಲ್ ಕುಮಾರ್‌ರನ್ನು ಗೆಲ್ಲಿಸಿ ಕೊಡುವಂತೆ ಯೆಚೂರಿ ಮನವಿ ಮಾಡಿದರು.
ಸಮಾವೇಶದಲ್ಲಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜ್, ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ, ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಡಾ.ಅನಿಲ್ ಕುಮಾರ್, ಪಕ್ಷದ ಮುಖಂಡರಾದ ಬಿ.ವಿ.ಸಾವಿತ್ರಮ್ಮ, ಡಿ.ಸಿ.ಶ್ರೀನಿವಾಸ್, ರಘುರಾಮರೆಡ್ಡಿ ಸೇರಿದಂತೆ ಮತ್ತಿತರರು ಇದ್ದರು.