ಅಂಬಾಲಾ (ಹರಿಯಾಣ): “ಪ್ರಧಾನಿ ನರೇಂದ್ರ ಮೋದಿ ಅವರು ಮಹಾತ್ಮ ಗಾಂಧಿಗಿಂತಲೂ ದೊಡ್ಡ ಬ್ರ್ಯಾಂಡ್ ನೇಮ್. ಶೀಘ್ರದಲ್ಲೇ ಗಾಂಧಿ ಫೋಟೋ ನೋಟಿನ ಮೇಲಿಂದ ಕಣ್ಮರೆಯಾಗಲಿದೆ’ ಎಂದು ಹೇಳುವ ಮೂಲಕ ಹರ್ಯಾಣದ ಬಿಜೆಪಿ ಸಚಿವ ಅನಿಲ್ ವಿಜ್ ಅವರು ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ.
ಖಾದಿ ಮತ್ತು ಗ್ರಾಮೀಣ ಕೈಗಾರಿಕೆ ಆಯೋಗ (ಕೆವಿಐಸಿ)ದ ಡೈರಿ ಮತ್ತು ಕ್ಯಾಲೆಂಡರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿ ಪೋಸ್‌ನಲ್ಲಿ ದೊಡ್ಡ ಚರಕದ ಮುಂದೆ ಕುಳಿತು ನೂಲುತ್ತಿರುವ ಚಿತ್ರವು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಈಗಾಗಲೇ ವಿವಾದ ಭುಗಿಲೆದ್ದಿದೆ. ಇದರ ನಡುವೆಯೇ ವಿವಾದಕ್ಕೆ ವಿಜ್ ಅವರು ಇನ್ನಷ್ಟು ತುಪ್ಪ ಸುರಿದಿದ್ದಾರೆ. ವಿಜ್ ಇಂಥ ಅನೇಕ ವಿವಾದಾತ್ಮಕ ಹೇಳಿಕೆಗಳನ್ನು ಈ ಮುನ್ನ ಕೊಟ್ಟು ಬಿಜೆಪಿಗೆ ಮುಜುಗರ ಸೃಷ್ಟಿಸಿದ್ದುಂಟು.
ಆದರೆ ತಮ್ಮ ಹೇಳಿಕೆ ವಿವಾದಕ್ಕೀಡಾಗುತ್ತಿದ್ದಂತೆಯೇ, “ಈ ಹೇಳಿಕೆಗಳಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಹಿಂಪಡೆಯುತ್ತೇನೆ. ಇವು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದು ತಿಪ್ಪೆ ಸಾರಿಸಿದ್ದಾರೆ.
ವಿಜ್ ವಿವಾದಿತ ಹೇಳಿಕೆ: “ಮಹಾತ್ಮ ಗಾಂಧಿ ಅವರ ಹೆಸರನ್ನು ಜೋಡಿಸಿಕೊಂಡಾಗಿನಿಂದ ಖಾದಿ ಉತ್ಪನ್ನಗಳು ದೇಶದಲ್ಲಿ ಏಳಿಗೆಯನ್ನೇ ಕಂಡಿಲ್ಲ. ಮಹಾತ್ಮ ಗಾಂಧಿ ಹೆಸರಿನಲ್ಲಿ ಖಾದಿ ಪೇಟೆಂಟ್ ಆಗಿಲ್ಲ’ ಎಂದು ಸುದ್ದಿಗಾರರ ಎದುರು ಹೇಳಿದರು.
“ಆದರೆ, ಖಾದಿಯೊಂದಿಗೆ ಮೋದಿ ಗುರುತಿಸಿಕೊಂಡ ಬಳಿಕ ದೇಶದಲ್ಲಿ ಖಾದಿ ಉತ್ಪನ್ನಗಳ ಮಾರಾಟ ಶೇ.14ರಷ್ಟು ಹೆಚ್ಚಾಗಿದೆ. 2017ರ ಕೆವಿಐಸಿ ಕ್ಯಾಲೆಂಡರ್ ಮತ್ತು ಡೈರಿಯಲ್ಲಿ ಪ್ರಧಾನಿ ಮೋದಿ ಅವರ ಫೋಟೋ ಕಂಡು ಬಂದಿರುವುದು ಸರಿಯಾಗಿಯೇ ಇದೆ. ಏಕೆಂದರೆ ಮೋದಿ ಬ್ರ್ಯಾಂಡ್ ನೇಮ್ ಗಾಂಧಿಗಿಂತಲೂ ದೊಡ್ಡದಿದೆ’ ಎಂದು ವಿಜ್ ಹೇಳಿದರು. “ಭಾರತೀಯ ನೋಟುಗಳ ಮೇಲೆ ಗಾಂಧಿ ಚಿತ್ರ ಮೂಡಿದಂದಿನಿಂದಲೇ ನೋಟುಗಳ ಅಪಮೌಲ್ಯ ಆರಂಭವಾಗಿದೆ’ ಎಂದು ಮತ್ತೂಂದು ವಿವಾದಿತ ಹೇಳಿಕೆಯನ್ನೂ ಇದೇ ವೇಳೆ ಅವರು ನೀಡಿದರು. “ಹಾಗಿದ್ದರೆ ಹೊಸ ನೋಟುಗಳ ಮೇಲೆ ಮೋದಿ ಸರಕಾರ ಗಾಂಧಿ ಚಿತ್ರವನ್ನು ಏಕೆ ಮುಂದುವರಿಸಿದೆ?’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಜ್, “ಸದ್ಯದಲ್ಲೇ ನಮ್ಮ ನೋಟುಗಳ ಮೇಲಿನ ಗಾಂಧಿ ಚಿತ್ರ ಕಣ್ಮರೆಯಾಗಲಿದೆ’ ಎಂದು ಹೊಸ ಬಾಂಬ್ ಸಿಡಿಸಿದರು.
ಈ ಬಗ್ಗೆ ವಿಪಕ್ಷಗಳು ಟೀಕೆ ಆರಂಭಿಸುತ್ತಿದ್ದಂತೆಯೇ ವಿಜ್ ಈ ಎಲ್ಲ ಹೇಳಿಕೆಗಳಿಂದ ಬಿಜೆಪಿ ದೂರ ಸರಿದಿದೆ. “ವಿಜ್ ಅವರ ಹೇಳಿಕೆ ವೈಯಕ್ತಿಕ ಅಭಿಪ್ರಾಯಗಳಾಗಿವೆಯೇ ಹೊರತು ಪಕ್ಷದ್ದಲ್ಲ’ ಎಂದು ಹೇಳಿದೆ.
ಹಿಟ್ಲರ್ ಹಾಗೂ ಮುಸೊಲಿನಿ ಕೂಡ ಜನಪ್ರಿಯ ಬ್ರ್ಯಾಂಡ್‌ಗಳಾಗಿದ್ದವು.
ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
ವಿಜ್ ಅವರು ಬಿಜೆಪಿ ಮತ್ತು ಆರೆಸ್ಸೆಸ್‌ನ ಮನದ ಮಾತುಗಳನ್ನು ಹೇಳುತ್ತಿದ್ದಾರೆ.
ತುಷಾರ್ ಗಾಂಧಿ, ಗಾಂಧೀಜಿ ಮೊಮ್ಮಗ
ವಿಜ್ ಹೇಳಿಕೆಗೂ ಪಕ್ಷಕ್ಕೂ ಹಾಗೂ ಹರಿಯಾಣ ಸರಕಾರಕ್ಕೂ ಸಂಬಂಧ ಇಲ್ಲ. ಅದು ಅವರ ವೈಯಕ್ತಿಕ ಹೇಳಿಕೆ.
ಎಂ.ಎಲ್. ಖಟ್ಟರ್, ಹರ್ಯಾಣಾ ಸಿಎಂ