Advertisement

ಅಭಿವೃದ್ಧಿ ಮೂಲಕ ಈಶಾನ್ಯ ರಾಜ್ಯಗಳು ಮುಖ್ಯವಾಹಿನಿಗೆ: ಅಮಿತ್‌ ಶಾ

10:37 PM Jan 06, 2023 | Team Udayavani |

ಇಂಫಾಲ: ಅಭಿವೃದ್ಧಿಯ ಮೂಲಕ ಈಶಾನ್ಯ ರಾಜ್ಯಗಳನ್ನು ಮುಖ್ಯವಾಹಿನಿಗೆ ತರುವ ಕೇಂದ್ರದ ಕನಸು ನನಸಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು.

Advertisement

ಮಣಿಪುರದಲ್ಲಿ 1,300 ಕೋಟಿ ರೂ. ವೆಚ್ಚದ 21 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್‌ನಲ್ಲಿ ಸಾರ್ವಜನಿಕ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು “ಬಿಜೆಪಿ ಸರ್ಕಾರ ಮಣಿಪುರವನ್ನು ಬಂದ್‌ಗಳು ಮತ್ತು ಭಯೋತ್ಪಾದನೆಯಿಂದ ಮುಕ್ತಗೊಳಿಸಿದೆ ಹಾಗೂ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದೆ ಎಂದರು.

“ಬಿಜೆಪಿ ಸರ್ಕಾರವು ಬಂಡಾಯ ಶಮನಗೊಳಿಸಿತು ಮತ್ತು ರಾಜ್ಯದ ಆರು ಜಿಲ್ಲೆಗಳಿಗೆ ಅನ್ವಯವಾಗಿದ್ದ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು ತೆಗೆದುಹಾಕಿತು ಎಂದು ಶಾ ಹೇಳಿದರು.

“ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಎಂಟು ವರ್ಷಗಳಲ್ಲಿ ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ 3.45 ಲಕ್ಷ ಕೋಟಿ ರೂ. ವೆಚ್ಚ ಮಾಡಿದೆ. ರಸ್ತೆ, ರೈಲು ಮತ್ತು ವಿಮಾನ ಸಂಪರ್ಕ ಸಾರಿಗೆಯು ಅತ್ಯುತ್ತಮಗೊಂಡಿದೆ ಎಂದರು.

ಇದೇ ವೇಳೆ ಅಮಿತ್‌ ಶಾ ಅವರು ಮಣಿಪುರದ ಇಂಫಾಲ್‌ ಪೂರ್ವ ಜಿಲ್ಲೆಯ ಮಾರ್ಜಿಂಗ್‌ ಪೋಲೋ ಕಾಂಪ್ಲೆಕ್ಸ್‌ನಲ್ಲಿ ಪೋಲೋ ಆಟಗಾರನೊಬ್ಬ ಕುದುರೆ ಸವಾರಿ ಮಾಡುತ್ತಿರುವ 120 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದರು. ಮಣಿಪುರವು ಪೋಲೋ ಆಟದ ತವರು ನೆಲವಾಗಿದೆ.

Advertisement

ಇನ್ನೊಂದೆಡೆ, ನಾಗಾಲ್ಯಾಂಡ್‌ನ‌ಲ್ಲಿ 52 ಕೋಟಿ ರೂ. ವೆಚ್ಚದ ಐದು ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಶಾ, “ನಾಗಾಲ್ಯಾಂಡ್‌ನ‌ಲ್ಲಿ ಕೇಂದ್ರ ಸರ್ಕಾರವು ಶಾಂತಿ, ಪ್ರಗತಿ ಮತ್ತು ಸಮೃದ್ಧಿಯ ಗುರಿಯನ್ನು ಪೂರೈಸಿದೆ. ರಾಜ್ಯದಲ್ಲಿ 2014ಕ್ಕೆ ಹೋಲಿಸಿದರೆ 2021ಕ್ಕೆ ಬಂಡಾಯವು ಶೇ.74ರಷ್ಟು ಕಡಿಮೆಯಾಗಿದೆ,’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next