Advertisement

4ಡಿ ತಂತ್ರ:  ಹೊಸ ತಂತ್ರದಡಿ ಸೇನೆಯಿಂದ ಕಾರ್ಯನಿರ್ವಹಣೆ

06:00 AM Jun 24, 2018 | |

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಜಾರಿಗೆ ಬರುತ್ತಿದ್ದಂತೆ ಉಗ್ರರನ್ನು ಮಟ್ಟಹಾಕಲು ಸೇನಾಪಡೆಗಳು ಹೊಸ ಹೊಸ ಕಾರ್ಯತಂತ್ರ ರೂಪಿಸುತ್ತಿವೆ. ಶುಕ್ರವಾರವಷ್ಟೇ ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆ ಕಟ್ಟಿಕೊಂಡಿದ್ದ ನಾಲ್ವರು ಉಗ್ರರನ್ನು ಹತ್ಯೆಗೈದಿದ್ದ  ಸೇನೆ, ಈಗ ಉಗ್ರರ ವಿರುದ್ಧದ ಕಾರ್ಯಾಚರಣೆಗೆ 4ಡಿ ತಂತ್ರ ರೂಪಿಸಿದೆ. ಡಿಫೆಂಡ್‌ (ರಕ್ಷಣೆ), ಡಿಸ್ಟ್ರಾಯ್‌ (ವಿನಾಶ), ಡಿಫೀಟ್‌ (ಸೋಲಿಸುವುದು) ಮತ್ತು ಡಿನೈ (ತಡೆಯುವುದು) ಎಂಬ ತಂತ್ರವನ್ನು ರೂಪಿಸಿದ್ದು, ಈ ಕ್ರಮವನ್ನು ಅನುಸರಿಸಿ ಕಾರ್ಯಾಚರಣೆ ನಡೆಸಲಿದೆ.

Advertisement

ಪ್ರತ್ಯೇಕತಾವಾದಿಗಳ ವಿರುದ್ಧ ಕಠಿನ ಕ್ರಮ
ಕಳೆದ ವಾರ ಗೃಹ ಸಚಿವ ರಾಜನಾಥ್‌ ಸಿಂಗ್‌ ನಡೆಸಿದ ಸಭೆಯಲ್ಲಿ ಹುರಿಯತ್‌ ನಾಯಕರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಶುಕ್ರವಾರ ಪ್ರತಿಭಟನೆ ನಡೆಸಲು ಕರೆ ನೀಡಿದ್ದ ಪ್ರತ್ಯೇಕತಾವಾದಿ ಮುಖಂಡರಾದ ಯಾಸಿನ್‌ ಮಲಿಕ್‌ ಹಾಗೂ ಮಿರ್ವೈಜ್‌ ಉಮರ್‌ ಫಾರೂಕ್‌ರನ್ನು ಗೃಹಬಂಧನದಲ್ಲಿಡಲಾಗಿದೆ. ಶುಕ್ರವಾರದ ಪ್ರಾರ್ಥನೆಯ ಅನಂತರ ಸನ್ನಿವೇಶ ವಿಕೋಪಕ್ಕೆ ತೆರಳದಂತೆ ಸೇನೆ ನಿಯಂತ್ರಿಸಿದೆ. ಎಲ್ಲ ಕಲ್ಲು ತೂರಾಟದ ಘಟನೆಗಳಿಗೂ ಯಾಸಿನ್‌ ಮಲಿಕ್‌ ಕಾರಣವಾಗಿದ್ದು, ಅವರನ್ನು ಗೃಹಬಂಧನದಲ್ಲಿಟ್ಟು ಸಮಸ್ಯೆ ನಿಯಂತ್ರಿಸಲಾಗಿದೆ ಎನ್ನಲಾಗಿದೆ.

ಪ್ರಚೋದನಕಾರಿ ಭಾಷಣಕ್ಕೆ ತಡೆ
ಉಗ್ರರ ಅಂತ್ಯಸಂಸ್ಕಾರದ ವೇಳೆ ಪ್ರಚೋದನಕಾರಿ ಭಾಷಣ ಮಾಡುವವರ ಮೇಲೆ ಕಣ್ಣಿಡಲು ನಿರ್ಧ ರಿಸಲಾಗಿದೆ. ಅಂತ್ಯಸಂಸ್ಕಾರದ ವೇಳೆ ಪ್ರಚೋದನ ಕಾರಿ ಹೇಳಿಕೆ ನೀಡಿ ಕಾಶ್ಮೀರದಲ್ಲಿನ ಯುವಕರನ್ನು ಉಗ್ರ ಚಟುವಟಿಕೆಗಳಿಗೆ ಸೆಳೆಯಲಾಗುತ್ತದೆ. ಹೀಗಾಗಿ ಇದನ್ನು ತಡೆಯಲು ನಿರ್ಧರಿಸಲಾಗಿದೆ ಎಂದು ಪೊಲೀಸ್‌ ಮುಖ್ಯಸ್ಥ ಎಸ್‌.ಪಿ. ವೇದ್‌ ಹೇಳಿದ್ದಾರೆ. ಆದರೆ ಯಾವ ಕಾರ್ಯತಂತ್ರವನ್ನು ರೂಪಿಸಲಾಗಿದೆ ಎಂಬ ಬಗ್ಗೆ ಅವರು ವಿವರ ನೀಡಿಲ್ಲ. ಮೂಲಗಳ ಪ್ರಕಾರ, ಪ್ರಚೋದನಕಾರಿ ಭಾಷಣ ಮಾಡುವವರನ್ನು ಗುರುತಿಸುವಂತೆ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಮುಖ್ಯಸ್ಥರಿಗೆ ಭದ್ರತಾ ಪಡೆಗಳು ಸೂಚಿಸಿವೆ. ಅಂತ್ಯಸಂಸ್ಕಾರದ ವೇಳೆ ಭಾರೀ ಸಂಖ್ಯೆಯ ಜನರು ಸೇರದಂತೆ ತಡೆಯಲು ಅಂತ್ಯಸಂಸ್ಕಾರದ ಸ್ಥಳಕ್ಕೆ ಸಂಪರ್ಕ ಕಡಿತಗೊಳಿಸಬೇಕು ಎಂದು ಯೋಜಿಸಲಾಗಿದೆ. 

ಆದರೆ ಜನ ಸೇರ್ಪಡೆಯನ್ನು ತಡೆಯುವುದು ಎಲ್ಲ ಸ್ಥಳಗಳಲ್ಲಿ ಹಾಗೂ ಸನ್ನಿವೇಶದಲ್ಲಿ ಸಾಧ್ಯವಿಲ್ಲ ಎನ್ನಲಾಗಿದೆ. ಸಾಮಾನ್ಯವಾಗಿ ಇಂತಹ ಸನ್ನಿವೇಶಕ್ಕೆ ಹೆಚ್ಚು ಪ್ರಚಾರ ಸಿಗುತ್ತದೆ. ಅಂತ್ಯಸಂಸ್ಕಾರದ ವಿಡಿಯೋ ಈ ಹಿಂದೆ ಹಲವು ಬಾರಿ ವೈರಲ್‌ ಆಗಿದೆ. ಹೀಗಾಗಿ ಇದು ಸೂಕ್ಷ್ಮ ಸನ್ನಿವೇಶ. ಈ ಹಿಂದೆ ಉಗ್ರ ಸಾವಿಗೀಡಾದಾಗ ಆತನ ತಾಯಿಯ ಕೈಯಲ್ಲಿ ಬಂದೂಕು ನೀಡಿ ಗಾಳಿಯಲ್ಲಿ ಗುಂಡು ಸಿಡಿಸಲಾಗಿತ್ತು. ಈ ವಿಡಿಯೋವನ್ನು ಅನಂತರ ಯುವಕರನ್ನು ಉಗ್ರ ಚಟುವಟಿಕೆಗಳಿಗೆ ಸೆಳೆಯಲು ಬಳಸಿಕೊಳ್ಳಲಾಗಿತ್ತು.

ಅಣ್ವಸ್ತ್ರ ಯುದ್ಧ ನಡೆಯದಿದ್ದರೆ ಪಿಒಕೆ ಭಾರತಕ್ಕೆ ಸೇರದು!
ಭಾರತ ಮತ್ತು ಪಾಕಿಸ್ಥಾನಗಳ ಮಧ್ಯೆ ಅಣ್ವಸ್ತ್ರ ಯುದ್ಧ ನಡೆಯದ ಹೊರತು ಪಾಕ್‌ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರದು ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಸೈಫ‌ುದ್ದೀನ್‌ ಸೋಜ್‌ ಹೇಳಿದ್ದಾರೆ. ಕಾಶ್ಮೀರದ ಜನರು ಪಾಕ್‌ನೊಂದಿಗೆ ವಿಲೀನವಾಗಲು ಬಯಸುತ್ತಿಲ್ಲ. ಅವರ ಮೊದಲ ಆದ್ಯತೆ ಸ್ವಾತಂತ್ರ್ಯ ಎಂದು ಪಾಕ್‌ ಮಾಜಿ ಸರ್ವಾಧಿಕಾರಿ ಪರ್ವೇಜ್‌ ಮುಷರಫ್ ಹೇಳಿದ್ದು ಸರಿ ಎಂಬುದಾಗಿ ಸೋಜ್‌ ಶುಕ್ರವಾರ ಹೇಳಿದ್ದು ವಿವಾದವಾಗಿತ್ತು. ಸೋಜ್‌ ತಮ್ಮ ಕೃತಿಯ ಮಾರಾಟಕ್ಕೆ ಇಂಥ ಗಿಮಿಕ್‌ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುಜೇìವಾಲ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸೋಜ್‌, ಸುಜೇìವಾಲ ನನ್ನ ಪುಸ್ತಕವನ್ನು ಓದಬೇಕು. ನಾನು ಸರ್ದಾರ್‌ ಪಟೇಲರ ಬಗ್ಗೆ ಬರೆದಿದ್ದೇನೆ. ಪಟೇಲರು ಹೈದರಾಬಾದ್‌ ಬದಲಿಗೆ ಕಾಶ್ಮೀರವನ್ನು ಪಾಕಿಸ್ಥಾನಕ್ಕೆ ಕೊಡಲು ತಯಾರಾಗಿದ್ದರು ಎಂದಿದ್ದಾರೆ. ಸೋಜ್‌ ಪುಸ್ತಕ ಸೋಮವಾರ ಬಿಡುಗಡೆಯಾಗಲಿದೆ.

Advertisement

ಪತ್ರಕರ್ತರಿಗೆ ಎಚ್ಚರಿಕೆ ನೀಡಿದ ಬಿಜೆಪಿ ಮುಖಂಡ
ಕಾಶ್ಮೀರದ ಪತ್ರಕರ್ತರು ಕೆಟ್ಟ ವಾತಾವರಣವನ್ನು ನಿರ್ಮಿಸಿದ್ದಾರೆ. ಅವರು ಮಿತಿ ಮೀರಬಾರದು. ಮಿತಿ ಮೀರಿದರೆ ರೈಸಿಂಗ್‌ ಕಾಶ್ಮೀರ್‌ ಸಂಪಾದಕ ಶುಜಾತ್‌ ಬುಖಾರಿಗೆ ಆದ ಗತಿಯೇ ಆಗುತ್ತದೆ ಎಂದು ಬಿಜೆಪಿ ಮುಖಂಡ ಲಾಲ್‌ ಸಿಂಗ್‌ ಹೇಳಿದ್ದಾರೆ. ಈ ಹೇಳಿಕೆ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಸಿಂಗ್‌ ಹೇಳಿಕೆಯನ್ನು ಕಾಶ್ಮೀರ ಎಡಿಟರ್ಸ್‌ ಗಿಲ್ಡ್‌ ತೀವ್ರವಾಗಿ ಖಂಡಿಸಿದೆ. ಜತೆಗೆ ಅವರ ಹೇಳಿಕೆಯನ್ನು ನೋಡಿದರೆ, ಬುಖಾರಿ ಕೊಲೆಗಡುಕರ ಬಗ್ಗೆ ಅವರಲ್ಲಿ ಏನೋ ಮಾಹಿತಿಯಿದೆ ಎಂಬ ಶಂಕೆ ಮೂಡುತ್ತಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಗಿಲ್ಡ್‌ ಆಗ್ರಹಿಸಿದೆ. ಶುಜಾತ್‌ ಬುಖಾರಿಯನ್ನು ಕಳೆದ ಕೆಲವು ದಿನಗಳ ಹಿಂದೆ ಗುಂಡಿಟ್ಟು ಹತ್ಯೆಗೈಯಲಾಗಿತ್ತು.

ಜಮ್ಮುಗೆ ಶಾ ಭೇಟಿ
ಜಮ್ಮು-ಕಾಶ್ಮೀರದಲ್ಲಿ ಸರಕಾರ ಉರುಳಿದ ಬಳಿಕ ಇದೇ ಮೊದಲ ಬಾರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಜಮ್ಮುವಿಗೆ ಭೇಟಿ ನೀಡಿದ್ದಾರೆ. ಶನಿವಾರ ಜನಸಂಘ ಸಂಸ್ಥಾಪಕ ಶ್ಯಾಮಪ್ರಸಾದ ಮುಖರ್ಜಿ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಶಾ, ಕಾಂಗ್ರೆಸ್‌ ಹಾಗೂ ಎಲ್‌ಇಟಿ ಮಧ್ಯೆ ಎಂಥ ಸಂಬಂಧವಿದೆ ಎಂಬುದು ಬಹಿರಂಗಗೊಳ್ಳಬೇಕು ಎಂದಿದ್ದಾರೆ. ಅಲ್ಲದೆ ಜಮ್ಮು-ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕವಾಗಲು ಬಿಜೆಪಿ ಬಿಡುವುದಿಲ್ಲ. ಇದು ಭಾರತದ ಅವಿಭಾಜ್ಯ ಅಂಗ ಎಂದೂ ಹೇಳಿದ್ದಾರೆ. ಜಮ್ಮು ಮತ್ತು ಲಡಾಖ್‌ ಹಿತಾಸಕ್ತಿಯನ್ನು ಪಿಡಿಪಿ ನಿರ್ಲಕ್ಷಿಸಿದ್ದ ಕಾರಣಕ್ಕೆ ಸರಕಾರದಿಂದ ನಾವು ಹಿಂದೆ ಸರಿದಿದ್ದೇವೆ ಎಂದು ಹೇಳಿದ್ದಾರೆ.

ಯುಪಿಎ ಆಡಳಿತದ ಅವಧಿಗಿಂತಲೂ ಎನ್‌ಡಿಎ ಅವಧಿಯಲ್ಲೇ ಹೆಚ್ಚು ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ. ಇದು ಉಗ್ರ ಚಟುವಟಿಕೆಗೆ ಪ್ರೋತ್ಸಾಹ ನೀಡಿದೆ ಮತ್ತು ಕಾಶ್ಮೀರದಲ್ಲಿ ಹಿಂಸೆ ಮತ್ತೆ ಪುಟಿದೇಳಲು ಕಾರಣವಾಗಿದೆ.
ಉಮರ್‌ ಅಬ್ದುಲ್ಲಾ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next