ನವದೆಹಲಿ: ರಾಜಸ್ಥಾನ ಸೇರಿದಂತೆ ಕೆಲವು ರಾಜ್ಯಗಳಲ್ಲಿ ರಾಮ ನವಮಿ ದಿನ ನಡೆದಿದ್ದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆ ಮೇಲೆ ಶೀಘ್ರವೇ ನಿಷೇಧ ಹೇರುವ ಸಾಧ್ಯತೆಗಳು ಇವೆ.
ನಿಷೇಧ ಹೇರುವುದಕ್ಕೆ ಬೇಕಾಗಿರುವ ಪ್ರಾಥಮಿಕ ಸಿದ್ಧತೆಗಳು ಈಗಾಗಲೇ ಪೂರ್ತಿಗೊಂಡಿದ್ದು, ಕೇವಲ ಆದೇಶ ಹೊರಡಿಸುವುದಷ್ಟೇ ಬಾಕಿ ಎಂದು ಹೇಳಲಾಗಿದೆ.
ಗೋವಾ, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳಗಳಲ್ಲಿ ರಾಮನವವಿ ವೇಳೆ ಹಿಂಸಾಚಾರ ನಡೆದಿತ್ತು.
ರಾಜಸ್ಥಾನದ ಕರೌಲಿಯಲ್ಲಿ ನಡೆದಿದ್ದ ಅಹಿತಕರ ಘಟನೆಗಳಿಗೆ ಪಾಪ್ಯುಲರ್ ಫ್ರಂಟ್ ಇಂಡಿಯಾವೇ ಕಾರಣವೆಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.
ಇದನ್ನೂ ಓದಿ:40 % ಕಮಿಷನ್ ಆರೋಪ ಕಾಂಗ್ರೆಸ್ ಷಡ್ಯಂತ್ರ : ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್
ಸಂಘಟನೆ ಮೇಲೆ ಇರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಪಿಎಫ್ಐ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ “ದೇಶದ ಹಿತಕ್ಕೆ ವಿರುದ್ಧವಾಗಿರುವ ಕೃತ್ಯಗಳನ್ನು ಸಂಘಟನೆ ನಡೆಸಿಲ್ಲ. ಒಂದು ವೇಳೆ, ಕೇಂದ್ರ ಸರ್ಕಾರ ನಿಷೇಧ ಹೇರಿದರೆ, ಕೋರ್ಟ್ ಮೊರೆ ಹೋಗುತ್ತೇವೆ’ ಎಂದಿದ್ದಾರೆ.