Advertisement

ಕೋವಿಡ್ ಲಸಿಕೆಗೆ 50,000 ಕೋಟಿ ರೂ.?

12:07 PM Nov 03, 2015 | mahesh |

ಹೊಸದಿಲ್ಲಿ: ದೇಶವಾಸಿಗಳಿಗೆ ಕೊರೊನಾ ಲಸಿಕೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು 50 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಲಸಿಕೆಗೆ ಒಬ್ಬ ವ್ಯಕ್ತಿಗೆ 450ರಿಂದ 500 ರೂ.(6-7 ಡಾಲರ್‌) ವೆಚ್ಚವಾಗಲಿದೆ. ಒಂದು ಇಂಜೆಕ್ಷನ್‌ಗೆ ಸುಮಾರು 2 ಡಾಲರ್‌(147 ರೂ.)ಗಳಂತೆ ಒಬ್ಬ ಸೋಂಕಿತನಿಗೆ ಎರಡು ಇಂಜೆಕ್ಷನ್‌ ನೀಡುವ ಅಂದಾಜು ಹಾಕಿಕೊಳ್ಳಲಾಗಿದೆ. ಇನ್ನು ಲಸಿಕೆಯ ದಾಸ್ತಾನು ಮತ್ತು ಸಾಗಣೆ ಸೇರಿದಂತೆ ಮೂಲಸೌಕರ್ಯ ವೆಚ್ಚದ ರೂಪದಲ್ಲಿ ಪ್ರತಿ ವ್ಯಕ್ತಿಗೆ 2-3 ಡಾಲರ್‌(147-300 ರೂ.) ಖರ್ಚಾಗಲಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿ ಗಳ ಮಾಹಿತಿ ಆಧರಿಸಿ ಎನ್‌ಡಿ ಟಿವಿ ವರದಿ ಮಾಡಿದೆ.

Advertisement

ಡಿಸೆಂಬರ್‌ಗೆ ಕೊರೊನಾ ಲಸಿಕೆ? :ಕೊರೊನಾಕ್ಕೆ ಲಸಿಕೆ ಯಾವಾಗ ಸಿಗುತ್ತದೆ? ಡಿಸೆಂಬರ್‌ನಲ್ಲೋ ಅಥವಾ ಮಾರ್ಚ್‌ನಲ್ಲೋ? ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹಿರಿಯ ಅಧಿಕಾರಿಗಳ ಪ್ರಕಾರ, ಡಿಸೆಂಬರ್‌ನಲ್ಲಿಯೇ ಲಸಿಕೆ ದೊರೆಯುವ ಸಾಧ್ಯತೆಗಳು ಹೆಚ್ಚಾಗಿವೆ. “ಲಸಿಕೆ ಯಾವಾಗ ಸಿಗಲಿದೆ ಎಂದು ಸ್ಪಷ್ಟವಾಗಿ ಹೇಳುವುದು ಕಷ್ಟ. ಅವುಗಳ ಪ್ರಯೋಗ, ವಿವಿಧ ನಿಯಂತ್ರಣ ಮಂಡಳಿಗಳಿಂದ ಸಿಗಬೇಕಾಗಿರುವ ಅನುಮೋದನೆ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಬೇಕಾಗಿದೆ. ಎಲ್ಲವೂ ಸಾಧ್ಯವಾದರೆ ಡಿಸೆಂಬರ್‌ ಅಥವಾ ಜನವರಿಗೆ ಸಿಗಬಹುದು’ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ, ಭಾರತ್‌ ಬಯೋಟೆಕ್‌ ಮತ್ತು ಝೈಡಸ್‌ ಕ್ಯಾಡಿಲಾ ದೇಶದಲ್ಲಿ ಲಸಿಕೆ ಸಿದ್ಧಪಡಿಸುತ್ತಿವೆ ಮತ್ತು ಅವು ಪ್ರಯೋಗದ ವಿವಿಧ ಹಂತಗಳಲ್ಲಿವೆ.

ಅವೈಜ್ಞಾನಿಕ ಎಂದ ತಜ್ಞರು: ಆರೋಗ್ಯ ಕ್ಷೇತ್ರದ ತಜ್ಞರು ಡಿಸೆಂಬರ್‌ನಲ್ಲಿಯೇ ಲಸಿಕೆ ಸಿಗಲಿದೆ ಎಂಬ ಹೇಳಿಕೆಯೇ ಅವೈಜ್ಞಾನಿಕ ಎಂದು ಪ್ರತಿಪಾದಿಸಿದ್ದಾರೆ. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ ಎಜುಕೇಷನ್‌ ಆ್ಯಂಡ್‌ ರಿಸರ್ಚ್‌ನ ಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ವಿನೀತಾ ಬಾಲ್‌ ಮಾತನಾಡಿ “ವರ್ಷಾಂತ್ಯಕ್ಕೆ ಲಸಿಕೆ ಬರುತ್ತದೆ ಎಂಬ ವಿಶ್ವಾಸವಿಲ್ಲ. ಏಕೆಂದರೆ ಅದು ಹಲವು ಹಂತಗಳನ್ನು ಒಳಗೊಂಡಿರುತ್ತದೆ. ಈ ಅವಧಿಯಲ್ಲಿ ಸರಕಾರದ ವಿವಿಧ ಸಂಸ್ಥೆಗಳ ಅನುಮೋದನೆ ಪಡೆಯುವುದು ಕಷ್ಟ’ ಎಂದಿದ್ದಾರೆ.

ಮುಂದುವರಿದ ಪ್ರಯೋಗ: ಆಕ್ಸಫ‌ರ್ಡ್‌ ವಿವಿಯ ಲಸಿಕೆಯ ಪ್ರಯೋಗ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಆಕ್ಸ್‌ಫ‌ರ್ಡ್‌ ವಿವಿ ಗುರುವಾರ ಲಸಿಕೆಯ ಪ್ರಯೋಗ ಮುಂದುವರಿಯಲಿದೆ ಎಂದು ಹೇಳಿದೆ. ವ್ಯಕ್ತಿಯ ಸಾವಿಗೆ ಸಂಬಂಧಿಸಿ ಸದ್ಯಕ್ಕೆ ಯಾವುದೇ ಹೇಳಿಕೆ ನೀಡುವುದಿಲ್ಲ. ಲಸಿಕೆಯ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಬೇಕಾದ ಅಗತ್ಯವಿಲ್ಲ ಎಂದು ಸ್ವತಂತ್ರ ಪರಿಶೀಲನೆ ವೇಳೆ ತಿಳಿದುಬಂದಿದೆ ಎಂದೂ ಸ್ಪಷ್ಟನೆ ನೀಡಿದೆ. ಇದೇ ವೇಳೆ, ಬುಧವಾರದಿಂದ ಗುರುವಾರಕ್ಕೆ ದೇಶದಲ್ಲಿ 55,839 ಮಂದಿಗೆ ಸೋಂಕು ದೃಢಪಟ್ಟಿದ್ದು, 702 ಮಂದಿ ಸಾವಿಗೀಡಾಗಿದ್ದಾರೆ. ರಾಷ್ಟ್ರೀಯ ಗುಣಮುಖ ಪ್ರಮಾಣವು ಶೇ.89.20ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಡಾ. ರೆಡ್ಡೀಸ್‌ ಸ್ಥಾವರ ಬಂದ್‌
ಮಹತ್ವದ ಬೆಳವಣಿಗೆಯೊಂದರಲ್ಲಿ, ಡಾ. ರೆಡ್ಡೀಸ್‌ ಲ್ಯಾಬೊರೆಟರೀಸ್‌ ಸಂಸ್ಥೆಯ ಮೇಲೆ ಸೈಬರ್‌ ದಾಳಿ ನಡೆದಿದ್ದು, ಸಂಸ್ಥೆಯು ತನ್ನ ಎಲ್ಲ ಸ್ಥಾವರಗಳನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ದತ್ತಾಂಶ ಸೋರಿಕೆ ಗಮನಕ್ಕೆ ಬಂದ ಕೂಡಲೇ ಭಾರತ, ಅಮೆರಿಕ, ಬ್ರೆಜಿಲ್‌, ರಷ್ಯಾ ಮತ್ತು ಯು.ಕೆ. ಸ್ಥಾವರದಲ್ಲಿನ ಉತ್ಪಾದನಾ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ರೆಡ್ಡೀಸ್‌ ಲ್ಯಾಬೊರೆಟರಿಗೆ ರಷ್ಯಾದ ಸ್ಪುಟ್ನಿಕ್‌ ಲಸಿಕೆಯ ಪ್ರಯೋಗಕ್ಕೆ ಅನುಮತಿ ದೊರೆತ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Advertisement

ಮಕ್ಕಳಿಗೆ ಸಿಗುವಾಗ ವಿಳಂಬ
ಜಗತ್ತಿನಾದ್ಯಂತ ಜನರು ಸುರಕ್ಷಿತ ಕೋವಿಡ್‌ ಲಸಿಕೆಗಾಗಿ ಕಾಯುತ್ತಿದ್ದಾರೆ. ಹಲವು ಲಸಿಕೆಗಳು ಪ್ರಯೋಗ ಹಂತದಲ್ಲಿದ್ದು ಬಹುತೇಕ ವರ್ಷಾಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಳಕೆಗೆ ಲಭ್ಯವಾಗುವ ನಿರೀಕ್ಷೆಯಿದೆಯ ಆದರೆ, ಮಕ್ಕಳಿಗೆ ನೀಡುವಂಥ ಕೊರೊನಾ ಲಸಿಕೆ ಲಭ್ಯವಾಗಲು ದೀರ್ಘ‌ಕಾಲ ಕಾಯಬೇಕಾದೀತು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕೇವಲ ಬೆರಳೆಣಿಕೆಯಷ್ಟು ಲಸಿಕೆಗಳನ್ನಷ್ಟೇ ಮಕ್ಕಳ ಮೇಲೆ ಪ್ರಯೋಗಿಸಲಾಗುತ್ತಿದೆ. ಈ ಪೈಕಿ ಆಕ್ಸ್‌ಫ‌ರ್ಡ್‌- ಆಸ್ಟ್ರಾಜೆನಿಕಾ ಕೂಡ ಒಂದು. ಚೀನಾ ಕಂಪನಿಯ ಸಿನೋವ್ಯಾಕ್‌ ಬಯೋಟೆಕ್‌ ಲಸಿಕೆಯನ್ನೂ 3ರಿಂದ 17 ವಯಸ್ಸಿನ ಮಕ್ಕಳ ಮೇಲೆ ಪ್ರಯೋಗಿ ಸಲಾಗುತ್ತಿದೆ. ಇತರೆ ಕಂಪನಿಗಳು 18ರ ಮೇಲಿನ ವಯಸ್ಸಿನವರ ಮೇಲೆ ಮಾತ್ರ ಲಸಿಕೆಯ ಪ್ರಯೋಗ ನಡೆಸುತ್ತಿರುವ ಕಾರಣ ಮಕ್ಕಳಿಗೆ ನೀಡಲಾಗುವ ಲಸಿಕೆ ಲಭ್ಯವಾಗಲು ಇನ್ನೂ ಕೆಲವು ತಿಂಗಳು ಕಾಯಬೇಕಾದೀತು ಎಂದು ತಜ್ಞರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next