ಹೊಸದಿಲ್ಲಿ : ”ಕೇಂದ್ರ ತನಿಖಾ ಸಂಸ್ಥೆಯಾಗಿರುವ ಸಿಬಿಐ ನ ವಿಶ್ವಾಸಾರ್ಹತೆ ಮತ್ತು ಘನತೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಸಂಪೂರ್ಣವಾಗಿ ನಾಶಮಾಡಿದೆ” ಎಂದು ಕಾಂಗ್ರೆಸ್ ಆರೋಪಿಸಿದೆ.
‘ಸಿಬಿಐ ನ ಸ್ವಾಯತ್ತೆ ಎಂಬ ಶವಪಟ್ಟಿಗೆಗೆ ಪ್ರಧಾನಿ ನರೇಂದ್ರ ಮೋದಿ ಕೊನೆಯ ಮೊಳೆಯನ್ನು ಹೊಡೆದಿದ್ದಾರೆ’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್‌ಜೇವಾಲಾ ಸರಣಿ ಟ್ವೀಟ್ ನಲ್ಲಿ ಟೀಕಿಸಿದ್ದಾರೆ.
‘ಕೇಂದ್ರ ಸರಕಾರ ಸಿಬಿಐ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಕಳಚಿದೆ ಮತ್ತು ಅದರ ವಿಶ್ವಾಸಾರ್ಹತೆ ಮತ್ತು ಘನತೆಯನ್ನು ನಾಶ ಮಾಡಿದೆ’ ಎಂದು ಸುರ್‌ಜೇವಾಲಾ ಹೇಳಿದ್ದಾರೆ.
‘ಒಂದು ಕಾಲದಲ್ಲಿ ಸಿಬಿಐ ಗೆ ಅಪಾರವಾದ ಘನತೆ, ಗೌರವ ಮತ್ತು ವಿಶ್ವಾಸಾರ್ಹತೆ ಇತ್ತು. ಅದೆಲ್ಲವನ್ನೂ ಬಿಜೆಪಿ ನೇತೃತ್ವದ ಮೋದಿ ಸರಕಾರ ನಾಶ ಮಾಡಿದೆ’ ಎಂದು ಸುರ್‌ಜೇವಾಲಾ ಬರೆದಿದ್ದಾರೆ.
ಮಾಂಸ ರಫ್ತು ದಾರ ಮೊಯಿನ್ ಕುರೇಶಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮಕ್ಕೆ ಸಂಬಂಧಪಟ್ಟು, ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಸಿಬಿಐ ನ ಉನ್ನತ ಅಧಿಕಾರಿಗಳ ನಡುವಿನ ಜಗಳದ ಫಲವಾಗಿ ಇಬ್ಬರು ಅಧಿಕಾರಿಗಳು ಬಂಧನಕ್ಕೆ ಗುರಿಯಾದ ಐತಿಹಾಸಿಕ ವಿದ್ಯಮಾನ ಕಳೆದೆರಡು ದಿನಗಳಲ್ಲಿ ಸಂಭವಿಸಿದೆ.
ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿ ಅವರೇ ಸಿಬಿಐ ನಲ್ಲಿ ಹಸ್ತಕ್ಷೇಪ ನಡೆಸಿ ಉನ್ನತ ಅಧಿಕಾರಿಗಳು ಕಡ್ಡಾಯ ರಜೆಯ ಮೇಲೆ ಕಳುಹಿಸಿರುವ ಪ್ರಸಂಗ ಇಂದು ನಡೆದಿದೆ.