ಬೆಂಗಳೂರು : ಸಂಘ ಪರವಾರದಿಂದ ಈಚೆಗಷ್ಟೇ ಉಚ್ಚಾಟಿತರಾಗಿರುವ ವಿಶ್ವ ಹಿಂದೂ ಪರಿಷತ್ ಮಾಜಿ ನಾಯಕ ಪ್ರವೀಣ್ ಭಾಯಿ ತೊಗಾಡಿಯಾ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರಕಾರ ವಿರುದ್ಧ ಮತ್ತೆ ಹರಿಹಾಯ್ದಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ತಗ್ಗಿರುವಾಗ ಮೋದಿ ಸರಕಾರ ದೇಶದಲ್ಲಿ ಪೆಟ್ರೋಲ್, ಡೀಸಿಲ್ ಮೇಲೆ ಅಧಿಕ ತೆರಿಗೆ ವಿಧಿಸಿ ಜನರನ್ನು ಲೂಟಿ ಮಾಡುತ್ತಿದೆ; ಇದನ್ನು ತಡೆಗಟ್ಟಲೇ ಬೇಕು ಎಂದು ಪ್ರವೀಣ್ ಭಾಯಿ ತೊಗಾಡಿಯಾ ಗುಡುಗಿದ್ದಾರೆ.
ನಗರದ ಖಾಸಗಿ ಹೊಟೇಲ್‌ನಲ್ಲಿ ಏರ್ಪಡಿಸಿದ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ತೊಗಾಡಿಯಾ, ಸಂಕಷ್ಟದಲ್ಲಿರುವ ದೇಶದ ಕಬ್ಬು ಬೆಳೆಗಾರರಿಗೆ ಮೋದಿ ಸರಕಾರ ಸ್ಪಂದಿಸುತ್ತಿಲ್ಲ; ಆದರೆ ಪಾಕಿಸ್ಥಾನದ ರೈತರು ಸಂಕಷ್ಟದಲ್ಲಿದ್ದಾರೆಂದು ಅಲ್ಲಿಂದ ದೇಶಕ್ಕೆ ಸಕ್ಕರೆಯನ್ನು ಆಮದಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ರಮ್ಜಾನ್ ಮಾಸದಲ್ಲಿ ಉಗ್ರಗಾಮಿಗಳ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸದಿರುವ ಮೋದಿ ಸರಕಾರದ ನಿರ್ಧಾರದಿಂದಾಗಿ ದೇಶದ ಸೈನಿಕರ ಸ್ಥೈರ್ಯ, ಆತ್ಮವಿಶ್ವಾಸ ಕುಗ್ಗುವಂತಾಗಿದೆ ಎಂದು ತೊಗಾಡಿಯಾ ಟೀಕಿಸಿದರು.
ಗೋಷ್ಠಿಯಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಮುತಾಲಿಕ್ ದೇಸಾಯಿ, ಯೋಗಿನಿ ಮಾತಾಜಿ, ಮುಖಂಡರಾದ ವಿಜಯಕುಮಾರ್ ರೆಡ್ಡಿ, ರಮೇಶ್ ಕುಲಕಣಿ ಮತ್ತಿತರರು ಉಪಸ್ಥಿತರಿದ್ದರು.