Advertisement

ಕೊಲ್ಲಿಯ ಭಾರತೀಯ ಕಾರ್ಮಿಕರ ಏರ್‌ಲಿಫ್ಟ್

01:18 AM Apr 29, 2020 | Sriram |

ಹೊಸದಿಲ್ಲಿ: ಕೋವಿಡ್-19 ದಿಂದಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ವಾಪಸ್‌ ಕರೆತರಲು ಕೇಂದ್ರ ಸರಕಾರ ಮುಂದಾಗಿದೆ.

Advertisement

ಈ ಸಂಬಂಧ ಸ್ವತಃ ಪ್ರಧಾನಿ ಮೋದಿ ಅವರೇ ರೂಪುರೇಷೆ ಹಾಕಿಕೊಟ್ಟಿದ್ದು, ಮೊದಲ ಆದ್ಯತೆಯಲ್ಲಿ ಕೂಲಿಕಾರರನ್ನು ಕರೆತರಬೇಕು ಎಂದು ಸೂಚಿಸಿದ್ದಾರೆ. ಇದಕ್ಕೆ ಯೋಜನೆ ರೂಪಿಸುವಂತೆಯೂ ಮೋದಿ ವಿದೇಶಾಂಗ ಮತ್ತು ನಾಗರಿಕ ವಿಮಾನಯಾನ ಸಚಿವಾಲಯಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಕೊಲ್ಲಿಯಲ್ಲಿರುವ ಭಾರತೀಯರನ್ನು ಕರೆತರುವ ಸಲುವಾಗಿ ವಿಶೇಷ ವಿಮಾನಗಳು ತೆರಳುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ನಡೆದ ಸಭೆಯೊಂದರಲ್ಲಿ ಮೋದಿ ಗಲ್ಫ್ ದೇಶಗಳಲ್ಲಿ ಸಿಕ್ಕಿಬಿದ್ದಿರುವ ಭಾರತೀಯ ಕೂಲಿ ಕಾರ್ಮಿಕರು ಪಡುತ್ತಿರುವ ಕಷ್ಟದ ಬಗ್ಗೆ ಪ್ರಸ್ತಾವಿಸಿದ್ದರು. ಅಷ್ಟೇ ಅಲ್ಲ, ಪೋಖರಣ್‌ನಲ್ಲಿ ಭಾರತವು ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ ಜಗತ್ತು ನಮ್ಮ ಮೇಲೆ ದಿಗ್ಬಂಧನ ವಿಧಿಸಿದ್ದರಿಂದ ಆರ್ಥಿಕತೆ ಭಾರೀ ಪೆಟ್ಟು ತಿಂದಿತ್ತು. ಆಗ ಗಲ್ಫ್ ನಲ್ಲಿದ್ದ ಭಾರತೀಯರೇ ದೇಶವನ್ನು ಉಳಿಸಿದ್ದರು. ಹೀಗಾಗಿ ಇವರನ್ನೇ ಆದ್ಯತೆಯಲ್ಲಿ ಕರೆತರಬೇಕು ಎಂದು ಹೇಳಿದ್ದರು ಎಂದು ಅಧಿಕಾರಿಯೊಬ್ಬರನ್ನು ಉಲ್ಲೇಖೀಸಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಈಗಲೂ ಅವರೇ ಮುಂದು
ಈಗಲೂ ವಿದೇಶದಲ್ಲಿರುವ ಭಾರತೀಯರು ತಾಯ್ನಾಡಿಗೆ ಕಳುಹಿಸುವ ಮೊತ್ತ ಬೃಹತ್‌ ಪ್ರಮಾಣದಲ್ಲಿದೆ. ವಿಶ್ವ ಬ್ಯಾಂಕ್‌ ಪ್ರಕಾರ ಈ ವಿಚಾರದಲ್ಲಿ ಭಾರತವೇ ನಂ.1. 2019ರ ಅಂಕಿ ಅಂಶಗಳ ಪ್ರಕಾರ ವಿದೇಶವಾಸಿ ಭಾರತೀಯರು ಕಳುಹಿಸಿರುವ ಹಣ 8,200 ಕೋಟಿ ಡಾಲರ್‌. ಇದರಲ್ಲಿ ಅರ್ಧ ಪಾಲು ಗಲ್ಫ್ನಲ್ಲಿರುವ ಕೂಲಿ ಕಾರ್ಮಿಕರದು.

ಮೋದಿ ಯೋಜನೆ ಏನು?
-ಕೂಲಿ ಕಾರ್ಮಿಕರಿಗೆ ಆದ್ಯತೆ
-ಮುಂದೆ ವಿದ್ಯಾರ್ಥಿಗಳ ಸರದಿ
-ಬಳಿಕ ಉದ್ಯೋಗಿಗಳು, ಕೊನೆಯಲ್ಲಿ ಮನೋರಂಜನೆಗಾಗಿ ಹೋದವರು.

Advertisement

ಆರ್ಥಿಕತೆಗೆ ಹೆಗಲು ಕೊಟ್ಟ ಕೂಲಿಗಳು
1998ರಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದಾಗ ಪಾಶ್ಚಾತ್ಯ ದೇಶಗಳು ಭಾರತದ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸಿದ್ದವು. ಆಗ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ರಿಸರ್ಜೆಂಟ್‌ ಇಂಡಿಯಾ ಬಾಂಡ್‌ ಜಾರಿಗೆ ತಂದಿತ್ತು. ಇದರ ಗುರಿ 200 ಕೋಟಿ ಡಾಲರ್‌ ಆಗಿದ್ದರೆ ಗಲ್ಫ್ ನಲ್ಲಿದ್ದ ಭಾರತೀಯ ಕೂಲಿಗಳು ಇವನ್ನು ಭಾರೀ ಪ್ರಮಾಣದಲ್ಲಿ ಖರೀದಿಸಿ 400 ಕೋಟಿ ಡಾಲರ್‌ನಷ್ಟು ಹಣ ಸಂಗ್ರಹವಾಗಲು ಕಾರಣರಾಗಿದ್ದರು. ಇದು ಆಗ ಭಾರತದ ಆರ್ಥಿಕತೆ ಚೇತರಿಸಿಕೊಳ್ಳಲು ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next