Advertisement

ಸಾರಿಗೆ ಹಕ್ಕು, ಪೂರೈಕೆ ಸರಪಳಿಯ ಮಹತ್ವ ಸಾರಿದ ಮೋದಿ

11:27 PM Sep 16, 2022 | Team Udayavani |

ಉಜ್ಬೆಕಿಸ್ಥಾನ‌ದ ಸಮರಕಂಡದಲ್ಲಿ ನಡೆಯುತ್ತಿರುವ ಶಾಂಘೈ ಕೊ ಅಪರೇಶನ್‌ ಆರ್ಗನೈಸೇಶನ್‌ (ಎಸ್‌ಸಿಒ) ಶೃಂಗಸಭೆಯಲ್ಲಿ ಶುಕ್ರವಾರ ಮಾತನಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್‌ ಸಾಂಕ್ರಾಮಿಕ ಮತ್ತು ರಷ್ಯಾ-ಉಕ್ರೇನ್‌ ನಡುವಣ ಯುದ್ಧದಿಂದ ಜಾಗತಿಕ ಮಟ್ಟದಲ್ಲಿ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟು, ಆಹಾರ, ಇಂಧನ, ಔಷಧಗಳ ಪೂರೈಕೆ ಮತ್ತು ಸಾಗಾಟದಲ್ಲಾಗಿರುವ ಅಡಚಣೆಗಳ ಮೇಲೆ ಬೆಳಕು ಚೆಲ್ಲಿ ಇವುಗಳನ್ನು ಯಾವ ರೀತಿಯಲ್ಲಿ ಎದುರಿಸಬಹುದು ಎಂಬ ಬಗೆಗೆ ಜಾಗತಿಕ ಸಮುದಾಯಕ್ಕೆ ಕೆಲವು ಕಿವಿಮಾತು ಹೇಳಿದ್ದಾರೆ. ಪರಸ್ಪರ ಸಹಕಾರ ಮತ್ತು ವಿಶ್ವಾಸಾರ್ಹತೆ ಹೊಂದಿದಲ್ಲಿ ರಾಷ್ಟ್ರಗಳು ಇಂಥ ಸವಾಲುಗಳನ್ನು ನಿಭಾಯಿಸಲು ಸಶಕ್ತವಾಗಲಿವೆ ಎಂದವರು ಪ್ರತಿಪಾದಿಸುವ ಮೂಲಕ ಇಂದಿನ ಅಗತ್ಯ ಮತ್ತು ಅನಿವಾರ್ಯಗಳೇನು ಎಂದು ಸ್ಪಷ್ಟ ಮಾತುಗಳಲ್ಲಿ ವಿಶ್ವದ ನಾಯಕರಿಗೆ ತಿಳಿ ಹೇಳಿದ್ದಾರೆ.

Advertisement

ಕೊರೊನಾ ಮತ್ತು ಯುದ್ಧದ ಕಾರಣದಿಂದಾಗಿ ಜಾಗತಿಕವಾಗಿ ಪೂರೈಕೆ ವ್ಯವಸ್ಥೆಯ ಮೇಲೆ ಭಾರೀ ಪರಿಣಾಮವನ್ನು ಬೀರಿದ್ದು, ಇದ ರಿಂದಾಗಿ ವಿಶ್ವ ಸಮುದಾಯ ಹಲವು ಸಂಕಷ್ಟಗಳನ್ನು ಎದುರಿಸುವಂತಾ ಯಿತು. ಇದರ ಹೊರತಾಗಿಯೂ ಭಾರತ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿರುವುದನ್ನು ಜಾಗತಿಕ ನಾಯಕರ ಎದುರು ಬಿಚ್ಚಿಟ್ಟರು.

ದೇಶದಲ್ಲಿ 100ಕ್ಕೂ ಅಧಿಕ ಯುನಿಕಾರ್ನ್ ಗಳ ಸಹಿತ 70,000ಕ್ಕೂ ಅಧಿಕ ಸ್ಟಾರ್ಟ್‌ಅಪ್‌ಗ್ಳು ಸ್ಥಾಪನೆಯಾಗಿದ್ದು, ಈ ಮೂಲಕ ಉತ್ಪಾದನ ಕೇಂದ್ರವಾಗುತ್ತಿರುವುದನ್ನೂ ಪ್ರಧಾನಿ ಇತರ ದೇಶಗಳಿಗೆ ಮನವರಿಕೆ ಮಾಡಿದರು. ಒಟ್ಟಾರೆಯಾಗಿ ಪ್ರಧಾನಿ ಮೋದಿ ಅವರು ಭಾರತದ ಸದ್ಯದ ಸ್ಥಿತಿಗತಿ, ಹೂಡಿಕೆಗೆ ಇರುವ ಅವಕಾಶಗಳು ಮತ್ತು ಸರಕಾರ ನೀಡುತ್ತಿರುವ ಪ್ರೋತ್ಸಾಹದ ಬಗೆಗೆ ಗಮನ ಸೆಳೆದರು.

ಇದೇ ವೇಳೆ ವಿಶ್ವ ಸಮುದಾಯ ಎದುರಿಸುತ್ತಿರುವ ಆರ್ಥಿಕ, ಇಂಧನ ಮತ್ತು ಆಹಾರ ಬಿಕ್ಕಟ್ಟಿನಿಂದ ಹೊರಬರುವ ನಿಟ್ಟಿನಲ್ಲಿ ಎಸ್‌ಸಿಒ ಸದಸ್ಯ ದೇಶಗಳು ಪರಸ್ಪರ ನಂಬಿಕೆ, ವಿಶ್ವಾಸ ಮತ್ತು ಸಹಕಾರದಿಂದ ಮುನ್ನಡೆಯಬೇಕು. ಆಹಾರ, ಇಂಧನ ಪೂರೈಕೆಗೆ ಪರಸ್ಪರ ಸಾರಿಗೆ ಹಕ್ಕುಗಳನ್ನು ಎಸ್‌ಸಿಒ ಸದಸ್ಯ ರಾಷ್ಟ್ರಗಳು ನೀಡಬೇಕು. ಇದರಿಂದ ಜಾಗತಿಕ ಮಟ್ಟದಲ್ಲಿ ಯಾವುದೇ ಬಿಕ್ಕಟ್ಟು ಸೃಷ್ಟಿಯಾದ ಸಂದರ್ಭದಲ್ಲಿ ರಾಷ್ಟ್ರಗಳು ಪರಸ್ಪರ ಸಾರಿಗೆ ಸಂಪರ್ಕವನ್ನು ಸಾಧಿಸಿ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ಅವರು ಈ ಮೂಲಕ ಕೊರೊನಾ, ಅಫ್ಘಾನ್‌ ಬಿಕ್ಕಟ್ಟು ಮತ್ತು ಯುದ್ಧದ ಸಂದರ್ಭದಲ್ಲಿ ಸಂಕಷ್ಟಕ್ಕೆ ತುತ್ತಾದ ನೆರೆಯ ರಾಷ್ಟ್ರಗಳಿಗೆ ನೆರವು ನೀಡಲು ಭಾರತ ಮುಂದಾದಾಗ ತಮ್ಮ ಸಾರಿಗೆ ವ್ಯವಸ್ಥೆಯನ್ನು ಬಳಸಿಕೊಳ್ಳಲು ತಡೆಯೊಡ್ಡಿದ ಪಾಕಿಸ್ಥಾನ ಮತ್ತು ಚೀನವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡು ಭಾರತದ ನಿಲುವನ್ನು ಸ್ಪಷ್ಟಪಡಿಸಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಭಾರತ ಈ ಹಿಂದಿನಿಂದಲೂ ಮುಂಚೂಣಿಯಲ್ಲಿದೆ. ಈ ಕ್ಷೇತ್ರದಲ್ಲೂ ಎಸ್‌ಸಿಒ ಸದಸ್ಯ ರಾಷ್ಟ್ರಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಿದಲ್ಲಿ ಮಹತ್ತರ ಪ್ರಗತಿ ಯನ್ನು ಕಂಡುಕೊಳ್ಳಲು ಸಾಧ್ಯವಿದೆ ಎನ್ನುವ ಮೂಲಕ ಭಾರತ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಕಾಣುತ್ತಿರುವುದನ್ನು ಜಾಗತಿಕ ನಾಯಕರ ಮುಂದೆ ತೆರೆದಿಟ್ಟರು.

Advertisement
Advertisement

Udayavani is now on Telegram. Click here to join our channel and stay updated with the latest news.

Next