Advertisement

ಮೋದಿ ಭ್ರಷ್ಟಾಚಾರದ ಆರೋಪ ಸಹಿಸುವುದಿಲ್ಲ

12:02 AM Feb 05, 2023 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರದ ಆರೋಪವನ್ನು ಎಂದೂ ಸಹಿಸಿಲ್ಲ. 40 ಪರ್ಸೆಂಟ್‌ ಕಮಿಷನ್‌ ವಿಚಾರದಲ್ಲಿ ಆರೋಪ ನಿರ್ದಿಷ್ಟವಾಗಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆ ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ.

Advertisement

ಬಿಜೆಪಿ ರಾಜ್ಯ ಕಚೇರಿಯಲ್ಲಿ ಜರಗಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ.40ರಷ್ಟು ಕಮಿಷನ್‌ ಆರೋಪದ ಬಗ್ಗೆ ನಿರ್ದಿಷ್ಟ ಆಧಾರ, ಪುರಾವೆಗಳನ್ನು ಕೊಟ್ಟರೆ ತನಿಖೆಗೆ ಸಿದ್ಧವೆಂದು ರಾಜ್ಯ ಸರಕಾರ ಹೇಳಿದೆ.

ಪ್ರಧಾನಿ ಮೋದಿಯವರು ಭ್ರಷ್ಟಾಚಾರವನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ. ಕಳೆದ 9 ವರ್ಷಗಳಿಂದ ಇದು ದೇಶದ ಜನತೆಗೆ ಗೊತ್ತಿದೆ. ಹೀಗಿದ್ದರೂ ಕಾಂಗ್ರೆಸ್‌ ನಿರಾಧಾರ ಆರೋಪ ಮುಂದುವರಿಸಿದೆ. ಆದರೆ ಜನರು ಜಾಗೃತರಾಗಿದ್ದು, ದಾರಿ ತಪ್ಪಿಸುವ ತಂತ್ರಗಳಿಗೆ ಮನ್ನಣೆ ನೀಡುವುದಿಲ್ಲ ಎಂದರು.

ಉಚಿತ ವಿದ್ಯುತ್‌ ಪೂರೈಕೆ, ಮಹಿಳೆಯರಿಗೆ ಮಾಸಿಕ ಭತ್ತೆ ಬಗ್ಗೆ ಕಾಂಗ್ರೆಸ್‌ ಸುಳ್ಳು ಭರವಸೆಗಳನ್ನು ನೀಡಿ ಜನರ ಮನ ಗೆಲ್ಲಲು ಹವಣಿಸಿದೆ. ಈ ಹಿಂದೆ “ಗರೀಬಿ ಹಟಾವೋ’ ಎಂದು ಸಾರಿದರು. ಆದರೆ ಬಡತನ ದೇಶದಲ್ಲಿ ಹೆಚ್ಚಾಯಿತು. ನೆರೆಯ ರಾಜ್ಯಗಳಲ್ಲಿ ಚುನಾವಣ ಪೂರ್ವ ಸಾಕಷ್ಟು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಈತನಕ ಈಡೇರಿಸಿಲ್ಲ ಎಂದರು.

ಮೋದಿಯವರು ದೇಶದ ಅಭಿವೃದ್ಧಿಯ ಚಹರೆ ಬದಲಾಯಿಸಿದ್ದಾರೆ. ಅದಕ್ಕೆ ತಕ್ಕಂತೆ ರಾಜ್ಯ ಸರಕಾರವೂ ಕೆಲಸ ಮಾಡುತ್ತಿದೆ. ಡಬಲ್‌ ಇಂಜಿನ್‌ ಸರಕಾರದ ಮೇಲೆ ರಾಜ್ಯದ ಜನರ ವಿಶ್ವಾಸ ಹೆಚ್ಚಿದೆ. ಮುಂದಿನ ಕೆಲವು ವರ್ಷಗಳಲ್ಲಿ ಭಾರತ ವಿಶ್ವದ ಮೂರು ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿರುತ್ತದೆ. ನಿರ್ಮಲಾ ಸೀತಾರಾಮನ್‌ ಮಂಡಿಸಿರುವ ಬಜೆಟ್‌ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಎಂದರು.

Advertisement

ಸಮಗ್ರ ಅಭಿವೃದ್ಧಿ
ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ವಿಶೇಷ ಅನುದಾನ, ರೈಲ್ವೆ ಜಾಲ ವಿಸ್ತರಣೆ, ಬಲವರ್ಧನೆಗೆ 7,546 ಕೋ. ರೂ. ನೀಡಲಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರಕ್ಕೆ ಮುಕ್ತವಾದ ಬಳಿಕ ಪ್ರವಾಸೋದ್ಯಮ ಸಹಿತ ವಾಣಿಜ್ಯ-ವಹಿವಾಟು, ಉದ್ಯೋಗ ಸೃಜನೆಗೆ ಹೊಸ ಆಯಾಮ ಸಿಗಲಿದೆ ಎಂದರು.

ಪ್ರಧಾನಿಗೆ ಗುತ್ತಿಗೆದಾರರ ಸಂಘ ಬರೆದ ಪತ್ರದ ಕುರಿತು ಚರ್ಚಿಸುವ ಬದಲು ಬಜೆಟ್‌ ಬಗ್ಗೆ ಮಾತ ನಾಡೋಣ ಎಂದು ನುಣುಚಿ ಕೊಂಡರು. ಶೇ. 40 ಕಮಿಷನ್‌ ಆರೋಪಕ್ಕೆ ಕೇಂದ್ರದ ಪ್ರಭಾವಿ ಸಚಿವರು ಮೊದಲ ಬಾರಿ ಪ್ರತಿಕ್ರಿಯೆ ನೀಡಿದಂತಾಗಿದೆ.

ಷೇರು ಮಾರುಕಟ್ಟೆ ಆತಂಕ ಬೇಡ
ಷೇರು ಮಾರುಕಟ್ಟೆಯ ಏರಿಳಿತದ ಬಗ್ಗೆ ಪ್ರಪಂಚದ ಯಾವ ದೇಶವೂ ಹೂಡಿಕೆದಾರರಿಗೆ ಭರವಸೆ ನೀಡಲು ಸಾಧ್ಯವಿಲ್ಲ. ಆದರೆ ಎಲ್‌ಐಸಿ ಹಾಗೂ ಎಸ್‌ಬಿಐ ಹೂಡಿಕೆಗಳು ಭದ್ರವಾಗಿರುತ್ತವೆ ಎಂದು ಪೀಯೂಷ್‌ ಗೋಯಲ್‌ ಹೇಳಿದ್ದಾರೆ.

ಅದಾನಿ ಪ್ರಕರಣಕ್ಕೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಷೇರು ಮಾರುಕಟ್ಟೆ ಯಲ್ಲಿ ಏರಿಳಿತ ಸಹಜವಾಗಿದ್ದು, ಜನ ಆತಂಕ ಪಡಬೇಕಾಗಿಲ್ಲ. ಅದಾನಿ ಪ್ರಕರಣದ ಬಗ್ಗೆ ಸಂಬಂಧಿಸಿದ ನಿಯಂತ್ರಣ ಪ್ರಾಧಿಕಾರಗಳು ಕ್ರಮ ಕೈಗೊಳ್ಳುತ್ತವೆ ಎಂದರು. ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಅದಾನಿ ಪ್ರಕರಣಕ್ಕೆ ಆದ್ಯತೆ ನೀಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ಸಚಿವರು ನಿರಾಕರಿಸಿದರು.

ಅದಾನಿ ಕಂಪೆನಿಯಲ್ಲಿ ಎಸ್‌ಬಿಐ , ಎಲ್ ಐಸಿ ಹೂಡಿಕೆ ಮಿತಿಯೊಳಗಿದೆ. ಅಲ್ಲದೆ ಹಣಕಾಸು ಸುರಕ್ಷಿತವೆಂದು ಆ ಸಂಸ್ಥೆಗಳು ಸ್ಪಷ್ಟಪಡಿಸಿವೆ. ಈ ಪ್ರಕರಣವನ್ನು ಮುಂದಿಟ್ಟುಕೊಂಡು ಸಂಸತ್‌ ಕಲಾಪಕ್ಕೆ ವಿಪಕ್ಷಗಳು ಅವಕಾಶ ನೀಡದಿರುವುದು ದುರದೃಷ್ಟಕರ. ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯ ಮತ್ತು ಬಜೆಟ್‌ ಮೇಲಿನ ಚರ್ಚೆಗೆ ಸರಕಾರ ಸಿದ್ಧವಿದೆ ಎಂದು ಹೇಳಿದರು.

ಬಿಎಸ್‌ವೈ ಬಗ್ಗೆ ಗೌರವವಿದೆ
ಬಿ.ಎಸ್‌.ಯಡಿಯೂರಪ್ಪ ಕರ್ನಾಟಕಕ್ಕೆ ಮಾತ್ರವಲ್ಲ, ಬಿಜೆಪಿಗೆ ಹಿರಿಯ ನಾಯಕ. ಅವರ ಬಗ್ಗೆ ಅಪಾರ ಗೌರವವಿದ್ದು, ಹಿರಿತನ, ಘನತೆಗೆ ತಕ್ಕಂತೆ ಪಕ್ಷದಲ್ಲಿ ಅತ್ಯುನ್ನತ ಸ್ಥಾನ ಕಲ್ಪಿಸಲಾಗಿದೆ. ಯಡಿಯೂರಪ್ಪ ಮಾರ್ಗದರ್ಶನದಲ್ಲೇ ರಾಜ್ಯ ವಿಧಾನಸಭೆ ಚುನಾವಣೆಯನ್ನು ಎದುರಿಸುತ್ತೇವೆಂದು ಪಿಯೂಷ್‌ ಗೋಯಲ್‌ ಹೇಳಿದರು.

ಕಾಂಗ್ರೆಸ್‌ಗೆ 150-200 ಸ್ಥಾನ ಪಾಕ್‌ನಲ್ಲಿ: ರವಿ
ಚಿಕ್ಕಮಗಳೂರು: ಕಾಂಗ್ರೆಸ್‌ನವರು ಪಾಕಿಸ್ಥಾನದಲ್ಲಿ ಸರ್ವೇ ನಡೆಸಿದರೆ ಅವರಿಗೆ 150ರಿಂದ 200 ಸ್ಥಾನಗಳು ಸಿಗಬಹುದು. ನಮ್ಮ ರಾಜ್ಯ-ದೇಶದಲ್ಲಿ ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿ ದರು. ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ ಓಟು ದಿನೇದಿನೆ ಕಡಿಮೆಯಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಠೇವಣಿ ಉಳಿಸಿಕೊಳ್ಳುವುದು ಕಷ್ಟ ಎನ್ನುವ ಸ್ಥಿತಿಗೆ ಬಂದಿದೆ ಎಂದರು.

ನಾನು ಪಕ್ಕಾ ಆರೆಸ್ಸೆಸ್‌. ಸಂಘ ಸಂಸ್ಕಾರ ಮತ್ತು ದೇಶಭಕ್ತಿಯನ್ನು ಕಲಿಸುತ್ತದೆ. ನಾನು ಸುಳ್ಳು ಹೇಳುವ ರಾಜಕಾರಣಿಯಲ್ಲ. ಮೀಸಲಾತಿ ಹೆಚ್ಚಿಸುತ್ತೇವೆಂದು ಕಾಂಗ್ರೆಸ್‌ ದಲಿತರಿಗೆ ಮೋಸ ಮಾಡಿದೆ. ಮೀಸಲಾತಿ ಹೆಚ್ಚಳ ಮಾಡಿದ್ದು ಬಿಜೆಪಿ ಎಂದರು.

ಈಶ್ವರಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಅವರ ಸ್ಥಾನದಲ್ಲಿ ನಾನಿದ್ದರೂ ಅದನ್ನೇ ಹೇಳುತ್ತಿದ್ದೆ. ಪಕ್ಷ ಕಟ್ಟಿದವರಲ್ಲಿ ಈಶ್ವರಪ್ಪ ಅವರೂ ಒಬ್ಬರು. ಅವರ ಮೇಲೆ ಆರೋಪ ಬಂದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ತನಿಖೆಯಿಂದ ಅವರ ಪಾತ್ರವಿಲ್ಲ ಎನ್ನುವುದು ಸಾಬೀತಾಗಿದೆ. ಅವರು ಮಂತ್ರಿ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next