Advertisement

ಪ್ರಧಾನಿಯಾಗಿರಲು ಮೋದಿಗೆ ನೈತಿಕತೆ ಇಲ್ಲ: ಸಿಎಂ ಸಿದ್ದರಾಮಯ್ಯ 

06:00 AM Feb 21, 2018 | Team Udayavani |

ಬೆಂಗಳೂರು: ತಮ್ಮ ಸರ್ಕಾರವನ್ನು “ಕಮಿಷನ್‌ ಸರ್ಕಾರ’ ಎಂದು ಯಾವುದೇ ದಾಖಲಾತಿಗಳಿಲ್ಲದೇ, ಸುಳ್ಳು ಆರೋಪ ಮಾಡುವ ನರೇಂದ್ರ ಮೋದಿ ಅವರಿಗೆ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲು ನೈತಿಕತೆ ಇಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಒಂದೊಮ್ಮೆ ನಾನೇ ಪಿಎಂ ಆಗಿದ್ದರೆ ನೀರವ್‌ ಮೋದಿಯನ್ನು ಬಿಡುತ್ತಿರಲಿಲ್ಲ ಎಂದು ಲೇವಡಿ ಮಾಡಿದ್ದಾರೆ.

Advertisement

ಮೈಸೂರಿನಲ್ಲಿ ರಾಜ್ಯ ಸರ್ಕಾರದ ವಿರದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ಧಾಳಿ ನಡೆಸಿದ್ದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ದೇಶ ಮತ್ತು ರಾಜ್ಯದಲ್ಲಿ ನಾನಾ ಸಮಸ್ಯೆಗಳಿವೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಸಮಸ್ಯೆ ಬಗ್ಗೆ ಮಾತನಾಡಲಿಲ್ಲ. ಅಷ್ಟಕ್ಕೂ ರಾಜ್ಯ ಸರ್ಕಾರದ ವಿರುದ್ಧ ಮಾತನಾಡಲು ಅವರಿಗೆ ಯಾವುದೇ ವಿಷಯ ಇಲ್ಲ. ಮೈಸೂರಿನಲ್ಲಿ ಮೋದಿ ಪ್ರಧಾನಿಯಂತೆ ಮಾತನಾಡಲಿಲ್ಲ ಎಂದು ಹೇಳಿದರು.

ಕೃಷಿ ವಲಯ, ರೈತರ ಸಾಲ ಮನ್ನಾ, ಮಹದಾಯಿ ನದಿ ನೀರಿನ ಹಂಚಿಕೆ ಕುರಿತು ಮಾತನಾಡಬಹುದಿತ್ತು. ಆದರೆ, ಯಾವುದೇ ವಿಷಯದ ಬಗ್ಗೆ ಅವರು ಬಾಯಿ ಬಿಡಲೇ ಇಲ್ಲ. ಈಗ ಎರಡನೇ ಬಾರಿಗೆ ಮೋದಿಯವರು ಕಮಿಷನ್‌ ಬಗ್ಗೆ ಮಾತನಾಡಿದ್ದಾರೆ. ಅವರು ಆ ಮಾತು ಹೇಳುವಾಗ ಅವರ ಪಕ್ಕದಲ್ಲಿ ಇದ್ದವರು ಯಾರು? ಲಂಚ ಪಡೆದು ಜೈಲಿಗೆ ಹೋಗಿ ಬಂದಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರದೇ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ. ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಮೋದಿಯವರು ಕಮಿಷನ್‌ ಬಗ್ಗೆ ಮಾತನಾಡುತ್ತಾರೆ. ಇದಕ್ಕೆ ಏನು ಹೇಳಬೇಕು ಎಂದರು.

ಶೇ.100 ಕಮಿಷನ್‌:
ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ನೂರಕ್ಕೆ ನೂರರಷ್ಟು ಕಮಿಷನ್‌ ವ್ಯವಹಾರ ನಡೆಯುತ್ತಿತ್ತು. ಹೀಗಾಗಿಯೇ ಯಡಿಯೂರಪ್ಪ ಸೇರಿ ಐದಾರು ಮಂದಿ ಜೈಲಿಗೆ ಹೋದರು. ಅಂತಹ ಯಡಿಯೂರಪ್ಪ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಜೆಪಿಯವರು ಬಿಂಬಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕಮಿಷನ್‌ ಪಡೆಯುವ ಬಗ್ಗೆ ಮೋದಿಯವರು ಏನಾದರೂ ದಾಖಲೆ ಕೊಟ್ಟಿದ್ದಾರೆಯೇ? ಅದೂ ಇಲ್ಲ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಬೇಜವಾಬ್ದಾರಿಯಿಂದ ಹಾಗೂ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನೀರವ್‌ ಮೋದಿ ಬಿಡುತ್ತಿರಲಿಲ್ಲ:
ಬ್ಯಾಂಕ್‌ ಹಣ ಲೂಟಿ ಮಾಡಿರುವ ನೀರವ್‌ ಮೋದಿಗೆ ಪ್ರಧಾನಿ ನರೇಂದ್ರ ಮೋದಿಯವರ ಕುಮ್ಮಕ್ಕು ಅಥವಾ ಅನುಮತಿ ಇಲ್ಲದೇ ಅವರು ಪರಾರಿಯಾಗಲು ಸಾಧ್ಯವಿಲ್ಲ. ನಾನಾಗಿದ್ದರೆ ನೀರವ್‌ ಮೋದಿಯನ್ನು ಬಿಡುತ್ತಿರಲಿಲ್ಲ. ನೀರವ್‌ ಮೋದಿ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ದಾವೋಸ್‌ನಲ್ಲಿ ಫೋಟೊ ತೆಗೆಸಿಕೊಂಡಿಲ್ಲವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

Advertisement

ಪ್ರಧಾನಿ ರಾಜ್ಯ ಸರ್ಕಾರದ ವಿರುದ್ಧ ಬೇಜವಾಬ್ದಾರಿಯಿಂದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಅವರು 9 ವರ್ಷಗಳ ಕಾಲ ಗುಜರಾತ್‌ನಲ್ಲಿ ಮಾಡಬಾರದ್ದನ್ನು ಮಾಡಿ, ಈಗ ನಮಗೆ ಪಾಠ ಹೇಳುತ್ತಿದ್ದಾರೆ. 9 ವರ್ಷಗಳ ಕಾಲ ಗುಜರಾತ್‌ನಲ್ಲಿ ಲೋಕಾಯುಕ್ತರನ್ನೇ ನೇಮಕ ಮಾಡಿರಲಿಲ್ಲ. ಇವರೇ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿದ್ದರು ಎಂದು ಪ್ರಧಾನಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next