ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಅನಿಲ್ ಅಂಬಾನಿ ಭಾರತ ಮತ್ತು ರೈತರ ಭಾರತ ಎಂದು ವಿಭಜಿಸುತ್ತಿದ್ದಾರೆ ಎಂದು ಟೀಕಿಸುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮೋದಿ ವಿರುದ್ಧ ಹೊಸ ವಾಕ್ಸಮರವನ್ನು ಆರಂಭಿಸಿದ್ದಾರೆ.
ಒಂದೇ ಒಂದು ವಿಮಾನವನ್ನು ಈ ತನಕ ನಿರ್ಮಿಸದಿದ್ದರೂ ಅನಿಲ್ ಅಂಬಾನಿಗೆ 30,000 ಕೋಟಿ ರೂ.ಗಳ ರಫೇಲ್ ಗುತ್ತಿಗೆ ಸಿಕ್ಕಿದೆ. ಇದೇ ವೇಳೆ ಪ್ರಧಾನಿ ಮೋದಿ ಅವರು ನಾಲ್ಕು ತಿಂಗಳ ಕಠಿನ ಪರಿಶ್ರಮ ನಡೆಸಿದ ರೈತರ 750 ಕಿಲೋ ಈರುಳ್ಳಿಗೆ ಕೇವಲ 1,040 ರೂ. ಕೊಡುತ್ತಿದ್ದಾರೆ ಎಂದು ರಾಹುಲ್ ದೂರಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಕೃತ ವಿಧಾನಸಭಾ ಚುನಾವಣೆಯತ್ತ ಮುಖಮಾಡಿರುವ ರಾಜಸ್ಥಾನದಲ್ಲಿ ಪ್ರಚಾರಾಭಿಯಾನದಲ್ಲಿ ನಿರತರಾಗಿದ್ದಾರೆ.
ಇಂದು ಡಿ.3ರ ಸೋಮವಾರ ಜೋಧಪುರದಲ್ಲಿ ಪ್ರಧಾನಿ ಮೋದಿ ಸಾರ್ವಜನಿಕ ಸಭೆ ನಡೆಸಿದ್ದು ನಾಳೆ ಡಿ.4ರಂದು ಹನುಮಗಢ, ಸಿಕಾರ್ ಮತ್ತು ಜೈಪುರದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ.
ಡಿ.4ರಂದು ರಾಹುಲ್ ಅವರು ಆಳ್ವಾರ್ ಜಿಲ್ಲೆಯ ಮಲಖೇಡ, ಝಂಝುನು ಜಿಲ್ಲೆಯ ಸೂರಜ್‌ಗಢ ಮತ್ತು ಉದಯಪುರ ಜಿಲ್ಲೆಯ ಸಾಲೂಂಬರ್‌ನಲ್ಲಿ ಭಾಷಣ ಮಾಡಲಿದ್ದಾರೆ.
200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಗೆ ಇದೇ ಡಿ.7ರಂದು ಚುನಾವಣೆ ನಡೆಯಲಿದ್ದು ಡಿ.11ರಂದು ಮತ ಎಣಿಕೆ ನಡೆಯಲಿದೆ.