ಚನ್ನಪಟ್ಟಣ: ಜೆಡಿಎಸ್ ಭದ್ರಕೋಟೆ ಎನಿಸಿರುವ ರಾಮನಗರ ಜಿಲ್ಲೆಯಲ್ಲಿ ಶತಾಯ ಗತಾಯ ಕಮಲ ಅರಳಿಸಬೇಕು ಎಂದು ಪಣತೊಟ್ಟಿರುವ ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರವಾಗಿ ಚನ್ನಪಟ್ಟಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರ ನಡೆಸಲಿದ್ದಾರೆ ಎಂಬ ಸುದ್ದಿ ಮಹತ್ವ ಪಡೆದಿದೆ.
ನಾಮಪತ್ರ ಸಲ್ಲಿಕೆ ವೇಳೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರೇ ಸ್ವತಃ ಈ ಸಂಬಂಧ ಹೇಳಿಕೆ ನೀಡಿದ್ದು, ಮೇ ತಿಂಗಳ ಮೊದಲ ವಾರದಲ್ಲಿ ಚನ್ನಪಟ್ಟಣಕ್ಕೆ ಆಗಮಿಸಲಿರುವ ನರೇಂದ್ರ ಮೋದಿ ಅವರು ರಾಮನಗರ ಜಿಲ್ಲೆಯ ಕನಕಪುರ, ಮಾಗಡಿ ಅಭ್ಯರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕ ಸಭೆ: ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸ್ಪರ್ಧಿಸಿದ್ದು, ಶತಾಯ ಗತಾಯ ಇಲ್ಲಿ ಯೋಗೇಶ್ವರ್ ಅವರನ್ನು ಗೆಲ್ಲಿಸಲೇಬೇಕೆಂದು ಬಿಜೆಪಿ ರಣತಂತ್ರ ರೂಪಿಸಿದೆ. ಪಕ್ಷದ ಮೂಲಗಳ ಪ್ರಕಾರ ಮೇ ತಿಂಗಳ ಮೊದಲ ವಾರದಲ್ಲಿ ಮೋದಿ ಅವರು ಚನ್ನಪಟ್ಟ ಣದಲ್ಲಿ ಸಾರ್ವಜನಿಕ ಸಭೆ ನಡೆಸಿ ಮತಯಾಚನೆ ಮಾಡಲಿದ್ದಾರೆ ಎಂದು ಗೊತ್ತಾಗಿದೆ.
ಪ್ರಚಾರಕ್ಕೆ ಬರಲು ಮೋದಿ ಸಮ್ಮತಿ: ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಆರ್.ಅಶೋಕ್ ಸ್ಪರ್ಧಿಸಿದ್ದಾರೆ. ಮೋದಿ ಆಗಮನದಿಂದ ರಾಮನಗರ ಹಾಗೂ ಮಂಡ್ಯ ಜಿಲ್ಲೆ ಮೇಲೂ ಪರಿಣಾಮ ಬೀರಬಹುದೆಂಬ ಕಾರಣಕ್ಕಾಗಿ ಬಿಜೆಪಿ ಈ ತಂತ್ರವನ್ನು ಅನುಸರಿಸಿದೆ. ಚನ್ನಪಟ್ಟಣಕ್ಕೆ ಬರಲು ಮೋದಿ ಸಮ್ಮತಿಸಿದ್ದು, ಅಧಿಕೃತ ದಿನಾಂಕ ನಿಗದಿಯಾಗುವುದಷ್ಟೇ ಬಾಕಿ ಉಳಿದಿದೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಚನ್ನಪಟ್ಟಣಕ್ಕೆ ಮೋದಿ ಆಗಮಿಸಿದ್ದಲ್ಲಿ ರಾಜ್ಯದ ಹೈವೋಲ್ಡೇಜ್ ಕ್ಷೇತ್ರ ಎನಿಸಿರುವ ಬೊಂಬೆನಾಡು ಚನ್ನಪಟ್ಟಣ ರಾಷ್ಟ್ರದ ಗಮನ ಸೆಳೆಯಲಿದೆ ಎಂಬ ವ್ಯಾಖ್ಯಾನ ಕೇಳಿಬರುತ್ತಿದೆ.