Advertisement

G-20 ಗೂ ಮುನ್ನ ಮೋದಿ-ಬೈಡೆನ್‌ ಮಾತುಕತೆ 

09:33 PM Sep 02, 2023 | Team Udayavani |

ನವದೆಹಲಿ: ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮುಂದಿನವಾರ ಭಾರತಕ್ಕೆ ಆಗಮಿಸುತ್ತಿದ್ದು, ಸೆ.8ರಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಅಮೆರಿಕದ ಶ್ವೇತಭವನ ಬೈಡೆನ್‌ ಅವರ ಭೇಟಿಯನ್ನು ಖಾತರಿಪಡಿಸಿದೆ. ಸೆ.9 ಹಾಗೂ 10ರಂದು ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಜಿ20 ಸಮ್ಮೇಳನ ನಡೆಯಲಿದೆ. ಅದಕ್ಕೂ ಮುನ್ನವೇ ಅಂದರೆ ಸೆ.7ರಂದು ಬೈಡೆನ್‌ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದೆ.

Advertisement

ದ್ವಿಪಕ್ಷೀಯ ಸಭೆಯಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ವ್ಯಾಪಾರ-ವ್ಯವಹಾರ- ಭದ್ರತೆ- ಸಹಕಾರ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆಗಳು ನಡೆಯಲಿದೆ. ಇದಲ್ಲದೇ, ಹವಾಮಾನ ಬದಲಾವಣೆ ಸೇರಿದಂತೆ ಅನೇಕ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಪರಿಹಾರ ಕ್ರಮಗಳ ಕುರಿತು ಚರ್ಚಿಸಲಿದ್ದಾರೆ. ಇದೇ ವೇಳೆ ರಷ್ಯಾ-ಉಕ್ರೇನ್‌ ಸಂಘರ್ಷಗಳಿಂದ ಜಾಗತಿಕ ರಾಷ್ಟ್ರಗಳ ಮೇಲಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆಯೂ ಚರ್ಚಿಸಲಿದ್ದಾರೆ ಎಂದು ಶ್ವೇತಭವನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೆಹಲಿಯಲ್ಲಿ ಪೊಲೀಸರ ಪೂರ್ವಾಭ್ಯಾಸ
ಜಿ20 ಶೃಂಗದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆ ಹೆಚ್ಚಿಸ‌ಲಾಗಿದ್ದು, ಶನಿವಾರದಿಂದಲೇ ಪೊಲೀಸರು ಪೂರ್ವಾಭ್ಯಾಸ ಆರಂಭಿಸಿದ್ದಾರೆ. ಬೆಳಗ್ಗೆ 8.30ರಿಂದ ಮಧ್ಯಾಹ್ನ 12.00 ಗಂಟೆವರೆಗೆ ಹಾಗೂ ಸಂಜೆ 4.30ರಿಂದ 6.00 ಗಂಟೆವರೆಗೆ ಮತ್ತು ರಾತ್ರಿ 7 ರಿಂದ 11 ಗಂಟೆವರೆಗೆ ಪೂರ್ವಾಭ್ಯಾಸ ನಡೆಸಲಾಗುತ್ತಿದೆ. ಈ ಅವಧಿಯಲ್ಲಿ ಪೊಲೀಸ್‌ ಬೆಂಗಾವಲು ಪಡೆಗಳು ದೆಹಲಿಯ ವಿವಿಧ ನಗರಗಳಲ್ಲಿ ಸಂಚರಿಸಲಿರುವ ಹಿನ್ನೆಲೆಯಲ್ಲಿ ನಾಗರಿಕರಿಗೆ ರಸ್ತೆ ಮಾರ್ಗಗಳ ಸಂಚಾರದ ಬದಲಾಗಿ ಮೆಟ್ರೋ ಮೂಲಕ ಸಂಚರಿಸಲು ವಿನಂತಿಸಲಾಗಿದೆ. ಸರ್ದಾರ್‌ ಪಟೇಲ್‌ ಮಾರ್ಗ, ಪಂಚಶೀಲ ಮಾರ್ಗ. ಕೌತಿಯಾ ಮಾರ್ಗ್‌, ಮಾನಸಿಂಗ್‌ ರೋಡ್‌ ಸೇರಿದಂತೆ ಹಲೆವಡೆಗಳಲ್ಲಿ ಬೆಂಗಾವಲು ವಾಹನಗಳು ಗಸ್ತು ಸಂಚಾರ ನಡೆಸಿ, ಸುರಕ್ಷತೆಯನ್ನು ಖಾತರಿ ಪಡಿಸಿಕೊಂಡಿವೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾತುಕತೆಗೆ ಕೆನಡಾ ತಾತ್ಕಾಲಿಕ ವಿರಾಮ
ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡೊ ಅವರು ಜಿ20 ಶೃಂಗದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಲು ಸಿದ್ಧತೆ ನಡೆಸುತ್ತಿರುವ ನಡುವೆಯೇ, ಭಾರತದ ಜತೆಗಿನ ವ್ಯಾಪಾರ ಮಾತುಕತೆಗಳಿಗೆ ತಾತ್ಕಾಲಿಕ ವಿರಾಮ ಘೋಷಿಸಿದೆ. ಶೃಂಗದಲ್ಲಿ ಭಾಗಿಯಾಗುವ ಮೊದಲು ಮೋದಿ ಅವರ ಜತೆಗೆ ಜಸ್ಟಿನ್‌ ಅವರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ವ್ಯಾಪಾರ ಸಹಕಾರ ಸಂಬಂಧಿಸಿದಂತೆಯೂ ಚರ್ಚೆಗಳನ್ನು ನಡೆಸುವ ನಿರೀಕ್ಷೆ ಇದೆ. ಆದರೆ, ಸದ್ಯಕ್ಕೆ ಕೆನಡಾ ಮಾತುಕತೆಗೆ ವಿರಾಮ ಘೋಷಿಸಿದ್ದಕ್ಕೆ ಕಾರಣ ತಿಳಿಸಿಲ್ಲವೆಂದು ಕೆನಡಾದಲ್ಲಿನ ಭಾರತೀಯ ರಾಯಭಾರ ಅಧಿಕಾರಿ ಸಂಜಯ್‌ ಕುಮಾರ್‌ ವರ್ಮ ಹೇಳಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next