ಹೊಸದಿಲ್ಲಿ : ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಮತ್ತು ಅಕ್ಟೋಬರ್ 31ರ ವಲ್ಲಭಭಾಯಿ ಪಟೇಲ್ ಜಯಂತಿಯಂದು ಬಿಜೆಪಿ ಸಂಸದರು ತಮ್ಮ ಕ್ಷೇತ್ರಗಳಲ್ಲಿ 150 ಕಿ.ಮೀ. ಪಾದಯಾತ್ರೆಯನ್ನು ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ವಿಷಯವನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರು ಇಂದು ಮಂಗಳವಾರ ಮಾಧ್ಯಮಕ್ಕೆ ತಿಳಿಸಿದರು.
ಬಿಜೆಪಿ ಸಂಘಟನೆ ದುರ್ಬಲವಾಗಿರುವಲ್ಲಿ ಬಿಜೆಪಿ ರಾಜ್ಯಸಭಾ ಸದಸ್ಯರು ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಿ ಕ್ಷೇತ್ರ ಕಾರ್ಯ ನಡೆಸಬೇಕು ಎಂದು ಪ್ರಧಾನಿ ಮೋದಿ ಬಿಜೆಪಿ ಸಂಸದೀಯ ಪಕ್ಷದ ಸಭೆಯನ್ನುದ್ದೇಶಿಸಿ ಹೇಳಿದ್ದಾರೆ ಎಂದು ಜೋಷಿ ತಿಳಿಸಿದರು.
ಈ ಯಾತ್ರೆಗಳ ಮೂಲಕ ಗ್ರಾಮಗಳ ಪುನರುಜ್ಜೀವನ, ಸ್ವಾವಲಂಬನೆ, ಶೂನ್ಯ ಬಜೆಟ್ ಕೃಷಿ ಮತ್ತು ಪ್ಲಾಂಟೇಶನ್ ಅಭಿಯಾನಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಮೋದಿ ಹೇಳಿದ್ದಾರೆ.
ಪಕ್ಷದ ಚುನಾವಣಾ ಪ್ರಣಾಳಿಕೆ ಸಂಕಲ್ಪ ಯಾತ್ರೆಯಲ್ಲಿ ನಾವು ಏನೇನೆಲ್ಲ ಹೇಳಿರುವೆವೋ ಅವೆಲ್ಲವೂ ನಮ್ಮ ಭವಿಷ್ಯತ್ತಿನ ದೃಷ್ಟಾರತೆಯಲ್ಲಿ ಬಿಂಬಿಸಲ್ಪಡಬೇಕು ಎಂದು ಪಿಎಂ ಮೋದಿ ಹೇಳಿರುವುದಾಗಿ ಜೋಷಿ ತಿಳಿಸಿದರು.