ಮಹಾನಗರ: ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಖುಷಿಯಲ್ಲಿ ಮಂಗಳೂರಿನ ಖಾಸಗಿ ಬಸ್‌ವೊಂದರ ನಿರ್ವಾಹಕ, ಚಾಲಕ ಮತ್ತು ಅಭಿಮಾನಿಗಳ ವತಿಯಿಂದ ಸೋಮವಾರ ಪ್ರಯಾಣಿಕರಿಗೆ ಉಚಿತ ಪ್ರಯಾಣ ವ್ಯವಸ್ಥೆ ಮಾಡಲಾಗಿತ್ತು.
ಮಂಗಳೂರು-ಬೊಂದೇಲ್-ಬಜಪೆ-ಕಟೀಲು-ಕಿನ್ನಿಗೋಳಿ ಹಾಗೂ ಕಿನ್ನಿಗೋಳಿ-ಬಳುRಂಜೆ-ಪಲಿಮಾರು-ಪಡುಬಿದ್ರಿ ರೂಟ್
ನಲ್ಲಿ ಸಂಚರಿಸುವ “ಪ್ರಕೃತಿ’ ಹೆಸರಿನ ಬಸ್ ನಲ್ಲಿ ದಿನವಿಡೀ ಪ್ರಯಾಣಿಕರು ಉಚಿತವಾಗಿ ಸಂಚರಿಸಿದರು.
ಬಸ್‌ನ ಚಾಲಕ ಪ್ರಸಾದ್ ಕುಲಾಲ್ ಮತ್ತು ನಿರ್ವಾಹಕ ತಿಲಕ್ ಹಾಗೂ ಅಭಿಮಾನಿಗಳು ಈ ಉಚಿತ ಸೇವೆಯ ವ್ಯವಸ್ಥೆ ಮಾಡಿದ್ದರು. ಈ ಬಸ್ ಮಂಗಳೂರು-ಕಿನ್ನಿಗೋಳಿ ನಡುವೆ ಮೂರು ಟ್ರಿಪ್ ಹಾಗೂ ಕಿನ್ನಿಗೋಳಿ-ಪಡುಬಿದ್ರಿ ರೂಟ್‌ನಲ್ಲಿ 3 ಟ್ರಿಪ್ ಸಂಚರಿಸುತ್ತದೆ.
ದಿನವಿಡೀ ಉಚಿತ ಪ್ರಯಾಣ
ಸೋಮವಾರ ಪ್ರಕೃತಿ ಬಸ್ ಹತ್ತಿದ ಪ್ರಯಾಣಿಕರಿಗೆ ಆಶ್ಚರ್ಯ ಕಾದಿತ್ತು. ಬೇರೆ ದಿನಗಳಲ್ಲಿ “ಟಿಕೆಟ್… ಟಿಕೆಟ್…’ ಎನ್ನುತ್ತಿದ್ದ ನಿರ್ವಾಹಕ ತಿಲಕ್ ಸೋಮವಾರ “ಟಿಕೆಟ್ ಬೊಡ್ಚಿ…(ಟಿಕೆಟ್ ಬೇಡ) ರೈಟ್ ಪೋಯಿ…’ ಎನ್ನುತ್ತಿದ್ದರು. ಪ್ರಯಾಣಿಕರು ಮೊದಲು ನಂಬಲಿಲ್ಲ. ಅವರಾಗಿಯೇ ಹಣ ನೀಡುತ್ತಿದ್ದರು. ಆದರೆ ದಿನವಿಡೀ ಯಾರಿಂದಲೂ ಟಿಕೆಟ್ ಹಣ ಸ್ವೀಕರಿಸದೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಯಿತು.
ನರೇಂದ್ರ ಮೋದಿಯವರ ಮೇಲೆ ನಮಗೆ ತುಂಬಾ ಅಭಿಮಾನ. ಆ ಹಿನ್ನೆಲೆಯಲ್ಲಿ ನಾವು ಮತ್ತು ಅಭಿಮಾನಿಗಳು ಸೇರಿ ಉಚಿತ ಬಸ್ ವ್ಯವಸ್ಥೆ ಮಾಡಿದ್ದೇವೆ. ಇದರಿಂದ ಅನೇಕ ಪ್ರಯಾಣಿಕರಿಗೆ ಅನುಕೂಲವಾಗಿದೆ. ತುಂಬಾ ಮಂದಿ ಖುಷಿ ಪಟ್ಟು ಧನ್ಯವಾದ ಹೇಳಿದ್ದಾರೆ. ನಮಗೂ ತೃಪ್ತಿಯಾಗಿದೆ. ಬಸ್‌ನ ಮಾಲಕರಿಗೆ ಬೇರೆ ದಿನಗಳಲ್ಲಿ ನೀಡುತ್ತಿದ್ದಂತೆಯೇ ಹಣವನ್ನು ನೀಡಿದ್ದೇವೆ ಎಂದು ಪ್ರಸಾದ್ ಕುಲಾಲ್ ಪ್ರತಿಕ್ರಿಯಿಸಿದ್ದಾರೆ.