ಮಂಗಳೂರು/ಉಡುಪಿ:ಬಂಗಾಲಕೊಲ್ಲಿಯಲ್ಲಿನ ವಾಯುಭಾರ ಕುಸಿತ “ರೀಮಲ್’ ಎಂಬ ಹೆಸರಿನ
ಚಂಡಮಾರುತವಾಗಿ ಪರಿವರ್ತನೆಯಾ ಗಿದೆ. ಕರಾವಳಿ ಭಾಗದಲ್ಲಿ ಮೇ 27 ರಂದು ಉತ್ತಮ ಮಳೆಯಾಗುವ ಸೂಚನೆ
ಇದ್ದು, ಭಾರತೀಯ ಹವಾಮಾನ ಇಲಾಖೆ “ಎಲ್ಲೋ ಅಲರ್ಟ್’ ಘೋಷಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರವಿವಾರದಿನವಿಡೀ ಆಗಾಗ್ಗೆ ಬಿಟ್ಟು ಬಿಟ್ಟು ಮಳೆಯಾಗಿದ್ದು, ರಾತ್ರಿಯೂ ಮುಂದುವರಿ ದಿತ್ತು. ಮಂಗಳೂರು ನಗರದಲ್ಲಿ 31.3 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 1.4 ಡಿ.ಸೆ. ಉಷ್ಣಾಂಶ ಕಡಿಮೆ ಮತ್ತು 25 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.3 ಡಿ.ಸೆ. ಉಷ್ಣಾಂಶ ಅಧಿಕ ಇತ್ತು.
ಉಡುಪಿ ಜಿಲ್ಲೆಯಲ್ಲಿ ರವಿವಾರ ಮಳೆಯ ಪ್ರಮಾಣ ತಗ್ಗಿದ್ದು, ಹಲವೆಡೆ ಸಾಧಾರಣ ಸುರಿದಿದೆ. ಉಡುಪಿ, ಮಣಿಪಾಲ, ಮಲ್ಪೆ ಸುತ್ತಮುತ್ತ ಇಡೀ ದಿನ ಬಿಸಿಲು-ಮೋಡ ಕವಿದ ವಾತಾವರಣದ ನಡುವೆ ಸಣ್ಣದಾಗಿ ಮಳೆಯಾಗಿದೆ.
ಹಾನಿ ವಿವರ: ಶನಿವಾರ ತಡರಾತ್ರಿ ಸುರಿದ ಗಾಳಿ, ಮಳೆಯಿಂದ ಅಂಪಾರು ಭವಾನಿ ಶೆಟ್ಟಿ, ಮೊಳಹಳ್ಳಿಯ ಮಮತಾ,ವನಜಾ ಶೆಟ್ಟಿ, ಮುತ್ತಕ್ಕ, ಶಂಕರ ನಾರಾಯಣ ಮಮತಾ, ಕಾವ್ರಾಡಿ ಕುಸುಮಾ, ಕಿದಿಯೂರಿನ ರತ್ನಾ ಸುವರ್ಣ, ಸೂಡ ಗ್ರಾಮದ ಬೇಬಿ ಅವರ ಮನೆಗಳಿಗೆ, ರಟ್ಟಾಡಿ ಮೀನಾ ಪೂಜಾರ್ತಿ, ಅಂಪಾರಿನ ಚಂದ್ರ ನಾಯ್ಕ, ಕನಕಮ್ಮ ಶೆಟ್ಟಿ, ಮೊಳಹಳ್ಳಿಯ ಕೃಷ್ಣ, ರಘುರಾಮ್ ಅವರ ಜಾನುವಾರು ಕೊಟ್ಟಿಗೆಗಳಿಗೆ ಹಾನಿ ಸಂಭವಿಸಿದೆ.