Advertisement

ಮತೀಯ ಭಾವನೆ ತೊಳೆದ ಪ್ರವಾಹ

12:28 PM Sep 11, 2018 | |

ಬೆಂಗಳೂರು: ನಮ್ಮಲ್ಲಿನ ಅಹಂ, ಸಿರಿವಂತಿಕೆಯ ಶಿಖರ ಹಾಗೂ ಮತೀಯ ಭಿನ್ನಭಾವವನ್ನು ಕೆಡವಲು ಪ್ರವಾಹ ಹಾಗೂ ಬರಗಾಲಕ್ಕೆ ಮಾತ್ರ ಸಾಧ್ಯ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು.

Advertisement

ಜಾಣಗೆರೆ ಪತ್ರಿಕೆ ಪ್ರಕಾಶನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಅವರ “ಜೀವಜಲ’ ಕಾದಂಬರಿಯನ್ನು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಪ್ರವಾಹ ಉಂಟಾದ ಸಮಯದಲ್ಲಿ ಸಂತ್ರಸ್ತರು ಮಸೀದಿಯಲ್ಲಿ ನೆಲೆಸಿದ್ದರು. ಇಲ್ಲಿ ಹಿಂದು, ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರು ಧರ್ಮ ಭೇದವನ್ನು ಮರೆತು, ಪರಸ್ಪರ ಪ್ರೀತಿ, ಸ್ನೇಹದಿಂದ ಸಂಕಷ್ಟದ ದಿನಗಳನ್ನು ಎದುರಿಸಿದರು. ಅನೇಕರು ಅಹಂ ಹಾಗೂ ಬಡವ ಎಂಬ ಭೇದವಿಲ್ಲದೇ ಜತೆಗಿದ್ದರು ಎಂದರು.

ಇತ್ತೀಚಿನ ದಿನಗಳಲ್ಲಿ ಮಹಾಕಾವ್ಯ, ಮಹಾ ಕಾದಂಬರಿ ಅಗತ್ಯವೇ ಎಂಬ ಪ್ರಶ್ನೆ ಉದ್ಭವಿಸಿದೆ. ಅಷ್ಟೇ ಅಲ್ಲ, ನಮ್ಮಲ್ಲಿ ಮಹಾ ಕಾವ್ಯವನ್ನು ರಚಿಸುವ ಹಾಗೂ ಓದುವ ಹವ್ಯಾಸ ಹಾಗೂ ತಾಳ್ಮೆಯೂ ಸಹ ಕಡಿಮೆ ಆಗುತ್ತಿದೆ. ಆದರೆ, ಎಲ್ಲಿಯವರೆಗೆ ಮಹಾ ಬದುಕನ್ನು ನಡೆಸುತ್ತೆವೆಯೋ ಅಲ್ಲಿಯವರೆಗೆ  ಮಹಾ ಕಾವ್ಯವೂ ಹುಟ್ಟಿ ಬರುತ್ತವೆ ಎಂದರು. 

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಮಲ್ಲೇಪುರಂ ಜಿ. ವೆಂಕಟೇಶ್‌ ಮಾತನಾಡಿ, “ಜೀವಜಲ’ ಕಾದಂಬರಿಯು ಜನತಂತ್ರದ ವ್ಯವಸ್ಥೆಯಲ್ಲಿ ಆಶಾಭಾವನೆ ಇದೆ ಎಂಬುದನ್ನು  ತಿಳಿಸುತ್ತದೆ. ರಾಜಕಾರಣದಲ್ಲಿ ಹಣ ಹೇಗೆ ಕೆಲಸ ಮಾಡುತ್ತದೆ. ಹಣಕ್ಕಿಂತ ಜನತಂತ್ರಕ್ಕೆ ಹೆಚ್ಚು ಬಲ ಇದೆ ಎಂಬುದನ್ನು ಲೇಖಕರು ಉತ್ತಮವಾಗಿ ಕಟ್ಟಿಕೊಟ್ಟಿದ್ದಾರೆ. ಒಟ್ಟಾರೆ ಕಾದಂಬರಿ ಒಂದು ಕೆರೆ ರೂಪಕವಾಗಿದ್ದು, ಕಾದಂಬರಿಯ ಮೂಲ ಮತ್ತು ಅಂತ್ಯ ಕೆರೆಯಿಂದಲೇ ಆಗುತ್ತದೆ ಎಂದರು.

ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಿಗೆ ಕನ್ನಡ ಸೇವಾರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ರಂಗಭೂಮಿ ಕ್ಷೇತ್ರದಲ್ಲಿ ಮೈಸೂರು ರಮಾನಂದ ಹಾಗೂ ಪುಷ್ಪಲತಾ ರಮಾನಂದ, ವರ್ಣಚಿತ್ರ ಕಲೆಯಲ್ಲಿ ಬಿ.ಪಿ. ಕಾರ್ತಿಕ್‌, ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಬಿ.ಎನ್‌. ವಾಸುದೇವ ಮೂರ್ತಿ, ಸಮಾಜಸೇವೆಗೆ ನಾ. ಮಲ್ಲಿಕಾರ್ಜುನ, ನುಡಿಚಿತ್ರ ಸಂಗ್ರಹಕ್ಕೆ ಮುಂ.ಅ. ವೆಂಕಟೇಶ, ಕನ್ನಡ ಸೇವೆಗೆ ಎಸ್‌. ಶಿವರಾಮ್‌ ಹಾಗೂ ಜಿ. ಸುಭಾಷ್‌ ಮತ್ತು ಚಿತ್ರರಂಗದಲ್ಲಿ ಸಾಧನೆ ಮಾಡಿದ ಟೋನಿ ಅವರಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು. 

Advertisement

ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಬಂಜಗೆರೆ ಜಯಪ್ರಕಾಶ್‌, ಲೇಖಕ ಜಾಣಗೆರೆ ವೆಂಕಟರಾಮಯ್ಯ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ. ವೂಡೇ ಪಿ. ಕೃಷ್ಣ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಬೈರಮಂಗಲ ರಾಮೇಗೌಡ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next