ಸೂರತ್: ಮಾಡೆಲ್ ತಾನಿಯಾ ಸಿಂಗ್ ಅವರ ಶಂಕಿತ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಕ್ರಿಕೆಟಿಗ ಅಭಿಷೇಕ್ ಶರ್ಮಗೆ ನೋಟಿಸ್ ಕಳುಹಿಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಇಬ್ಬರೂ ಸ್ನೇಹಿತರು ಎಂದು ತಿಳಿದುಬಂದಿದ್ದು, ಆಕೆ ವಾಟ್ಸಾಪ್ ಚಾಟ್‌ನಲ್ಲಿ ಸಂದೇಶವನ್ನು ಕಳುಹಿಸಿದ್ದಾರೆ ಆದರೆ ಅಭಿಷೇಕ್ ಪ್ರತಿಕ್ರಿಯಿಸಲಿಲ್ಲ ಎಂದು ಸೂರತ್ ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
28 ವರ್ಷದ ತಾನಿಯಾ ಸೋಮವಾರ ನಗರದ ವೆಸು ಪ್ರದೇಶದಲ್ಲಿ ತನ್ನ ಅಪಾರ್ಟ್‌ಮೆಂಟ್‌ನ ಸೀಲಿಂಗ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
“ಅಭಿಷೇಕ್ ಶರ್ಮ ಮೃತ ರೂಪದರ್ಶಿಯೊಂದಿಗೆ ಸ್ನೇಹದಲ್ಲಿದ್ದರು, ತನಿಖೆಯಲ್ಲಿ ಹೆಚ್ಚಿನ ವಿವರಗಳು ಗೊತ್ತಾಗಲಿವೆ. ಶರ್ಮ ಅವರಿಗೆ ತಾನಿಯಾ ವಾಟ್ಸಾಪ್ ಚಾಟ್‌ನಲ್ಲಿ ಸಂದೇಶ ಕಳುಹಿಸಿದ್ದರು ಆದರೆ ಅದಕ್ಕೆ ಪ್ರತಿಕ್ರಿಯಿಸಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ನಾವು ಇನ್ನೂ ಅಭಿಷೇಕ್ ಶರ್ಮ ಅವರನ್ನು ಸಂಪರ್ಕಿಸಿಲ್ಲ ಆದರೆ ನಾವು ಅವರಿಗೆ ನೋಟಿಸ್ ಕಳುಹಿಸುತ್ತೇವೆ” ಎಂದು ಪೊಲೀಸರು ತಿಳಿಸಿದ್ದಾರೆ.
ಮಾಡೆಲ್ ಫೋನ್‌ನ ಸಿಡಿಆರ್ (ಕಾಲ್ ಡಿಟೇಲ್ ರೆಕಾರ್ಡ್) ಮತ್ತು ಐಪಿ ಡಿಟೇಲ್ ರೆಕಾರ್ಡ್ (ಐಪಿಡಿಆರ್) ಡೇಟಾವನ್ನು ಪರಿಶೀಲಿಸುತ್ತಿದ್ದು,ಅಗತ್ಯವಿದ್ದರೆ ಅವರ ಹೇಳಿಕೆಗಳನ್ನು ದಾಖಲಿಸಲು ಪರಿಶೀಲನೆಯ ಸಮಯದಲ್ಲಿ ಅವರ ಹೆಸರುಗಳು ಬರುವ ವ್ಯಕ್ತಿಗಳನ್ನು ನಾವು ಕರೆಯಬಹುದು” ಎಂದು ಹೇಳಿದ್ದಾರೆ.
ಆಲ್‌ರೌಂಡರ್ ಶರ್ಮ ಅವರು ಐಪಿಎಲ್ ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದರು. ಮೃತ ತಾನಿಯಾ ಸಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದರು.ವೇಸು ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಮರಣ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ.