ತಾಲೂಕಿನ ಶತಮಾನ ಪೂರೈಸಿದ ಶಾಲೆ
Advertisement
19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.
ಗ್ರಾಮೀಣ ಪ್ರದೇಶಗಳ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸ್ಥಳೀಯ ಶಾಸಕರ ಕೊಡುಗೆಯೂ ಇರಲಿ ಎನ್ನುವ ಭಾವನೆಯಿಂದ ಸರಕಾರ ಪ್ರತೀ ವಿಧಾನಸಭಾ ಕ್ಷೇತ್ರದ ಕೇಂದ್ರ ಪ್ರದೇಶದಲ್ಲಿರುವ ಶಾಲೆಯನ್ನು ಶಾಸಕರ ಶಾಲೆಯೆಂದು ಗುರುತಿಸುವುದು ಹಿಂದಿನ ದಿನಗಳಲ್ಲಿ ವಾಡಿಕೆಯಾಗಿತ್ತು.
Related Articles
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬೋರ್ಡ್ ಆಡಳಿತಕ್ಕೊಳಪಟ್ಟಿದ್ದ ಕಾಪು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯು ಬೋರ್ಡ್ ಶಾಲೆ ಎಂದೇ ಪ್ರಸಿದ್ಧ ವಾಗಿತ್ತು. 1907ರಲ್ಲಿ ಕಾಪು ಸರಕಾರಿ ಮಾದರಿ ಹಿ.ಪ್ರಾ. ಶಾಲೆ ಪ್ರಾರಂಭವಾಗಿತ್ತು ಎಂಬ ಮಾಹಿತಿ ಒಂದೆಡೆ ಲಭ್ಯವಾಗಿದ್ದರೆ, 1910-11ರಲ್ಲಿ ಸ್ಥಳೀಯರ ಪ್ರಯತ್ನ ಮತ್ತು ಬ್ರಿಟೀಷ್ ಆಡಳಿತ ದ ಒತ್ತಾಸೆಯೊಂದಿಗೆ ಈ ಸಂಸ್ಥೆಯು ಸ್ಥಾಪಿತಗೊಂಡಿತ್ತು ಎಂಬ ಮಾಹಿತಿ ಶತಮಾನೋತ್ಸವ ಸಮಿತಿಯ ಮೂಲಕ ಲಭ್ಯವಾಗಿದೆ.
Advertisement
ರಾಷ್ಟ್ರ ಪ್ರಶಸ್ತಿ ಪುರಸ್ಕೃರ ಹೆಡ್ ಮಾಸ್ಟರ್ಶತಮಾನದ ಅವಧಿಯಲ್ಲಿ ಶಿಕ್ಷಣ ರಂಗದ ಅನೇಕರು ಇಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದು, ಇವರಲ್ಲಿ ದಿ| ಕಾಪು ಭೋಜರಾಜ ಶೆಟ್ಟಿಯವರ ಹೆಸರು ಚಿರಪರಿಚಿತವಾಗಿ ಉಳಿದಿದೆ. ಶಾಲೆಯ ವಿದ್ಯಾರ್ಥಿಗಳು ಮಾತ್ರವಲ್ಲದೇ ಊರಿನ ಸರ್ವರಿಂದಲೂ ಹೆಡ್ ಮಾಸ್ಟ್ರು ಎಂದೇ ಗೌರವಿಸಲ್ಪಡುತ್ತಿದ್ದ ಅವರು ಶಿಕ್ಷಣ ರಂಗದಲ್ಲಿ ಸಲ್ಲಿಸಿದ ಕೊಡುಗೆ ಮತ್ತು ನೀಡಿದ ಸೇವೆಗಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ಇವರ ಅವಧಿಯಲ್ಲಿ ಶಾಲೆ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿರುವ ಬಗ್ಗೆಯೂ ದಾಖಲೆಯಲ್ಲಿ ಉಲ್ಲೇಖೀಸಲಾಗಿದೆ. ಮೂರು ಎಕರೆ ಸ್ಥಳಾವಕಾಶ ಹೊಂದಿದ ಶಾಲೆ ಈ ಶಾಲೆಯು ರಾ. ಹೆ. 66ರ ಸನಿಹದಲ್ಲಿ ಸುಮಾರು ಮೂರು ಎಕರೆ ಜಮೀನಿನಲ್ಲಿ ವಿಸ್ತಾರವಾದ ಹಂಚಿನ ಕಟ್ಟಡವನ್ನು ಒಳಗೊಂಡಿತ್ತು. ಪ್ರಸ್ತುತ ಇಲ್ಲಿನ 1.50 ಎಕರೆ ಜಾಗವು ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹಂಚಿಕೆಯಾಗಿದ್ದು, ಉಳಿದ 1.50 ಎಕರೆ ಜಮೀನಿನಲ್ಲಿ ಶಾಲಾ ಕಟ್ಟಡವಿದೆ. ಹಿಂದಿನ ಹಂಚಿನ ಮಾಡಿನ ಬದಲಾಗಿ ರಾಜ, ಕೇಂದ್ರ ಸರಕಾರಗಳ ಅನುದಾನದಿಂದ ನಿರ್ಮಿತವಾದ ವಿವಿಧೋದ್ದೇಶ ಚಂಡ ಮಾರುತದ ಆಶ್ರಯ ತಾಣ ಕಟ್ಟಡದಲ್ಲಿ ತರಗತಿಗಳು ನಡೆಸಲ್ಪಡುತ್ತಿವೆ.
ಪ್ರಸ್ತುತ ಶಾಲೆಯಲ್ಲಿ 140 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, 7 ಮಂದಿ ಸರಕಾರಿ ಖಾಯಂ ಶಿಕ್ಷಕಿಯರು ಸೇವೆ ಸಲ್ಲಿಸುತ್ತಿದ್ದಾರೆ. 1 ಗೌರವ ಶಿಕ್ಷಕಿ, 3 ಮಂದಿ ಅಕ್ಷರ ದಾಸೋಹ ಸಿಬಂದಿ ಸೇರಿದಂತೆ ಒಟ್ಟು 11 ಮಂದಿ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಸ್ಥೆಯ ಎಲ್ಲಾ ಹಳೇ ವಿದ್ಯಾರ್ಥಿಗಳನ್ನು ಒಟ್ಟು ಸೇರಿಸಿಕೊಂಡು ಇಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಬೇಕೆಂಬ ಸಂಕಲ್ಪವಿದೆ.
-ಕೆ. ವಿಶ್ವನಾಥ್ (ಹಳೆ ವಿದ್ಯಾರ್ಥಿ) ಅಧ್ಯಕ್ಷರು, ಶತಮಾನೋತ್ಸವ ಸಮಿತಿ ಶಾಲೆ ಬೆಳೆಯ ಬೇಕಾದರೆ ಹಳೆ ವಿದ್ಯಾರ್ಥಿಗಳ ಸಹಕಾರ ಅತೀ ಅಗತ್ಯವಾಗಿ ದೊರಕಬೇಕಿದೆ. ಶತಮಾನ ಪೂರ್ವದ ಹಳೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶಾಲೆಯು ಪ್ರಸ್ತುತ ಸರಕಾರಿ ನಿರ್ಮಿತ ವಿವಿಧೋದ್ದೇಶ ಚಂಡ ಮಾರುತದ ಆಶ್ರಯ ತಾಣ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ.
-ರಜನಿ ಕುಮಾರಿ, ಮುಖ್ಯೋಪಾಧ್ಯಾಯಿನಿ