ಕುಷ್ಟಗಿ: ಲೋಕೋಯೋಗಿ ಇಲಾಖೆ 43 ವರ್ಷಗಳ ಹಿಂದೆ ಮಾದರಿ ಮನೆಗಾಗಿ ನಿರ್ಮಿಸಿದ್ದ ಕಟ್ಟಡಗಳು ಈಗ ಅನಾಥ ಸ್ಥಿತಿಯಲ್ಲಿವೆ. ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ಕಟ್ಟಡ ಕುಸಿದು ಬೀಳುವ ಹಂತಕ್ಕೆ ತಲುಪಿವೆ.
1976ರಲ್ಲಿ ಪಟ್ಟಣದ ಹನುಮಸಾಗರ ರಸ್ತೆಯ 16ನೇ ವಾರ್ಡ್ ವ್ಯಾಪ್ತಿಯ ಗುರುಭವನದ ಪಕ್ಕದಲ್ಲಿ ಎರಡು ಮನೆಗಳು ಶಿಥಿಲಾವಸ್ಥೆಯರುವುದು ಕಾಣಬಹುದಾಗಿದೆ. ಸದ್ಯ ಈ ಮನೆಗಳ ಸುತ್ತ ಮುಳ್ಳು ಕಂಟಿ ಬೆಳೆದಿವೆ. ಮನೆಗಳ ಹೆಂಚು ಕಿತ್ತು ಹೋಗಿದ್ದು, ಮನೆಗಳ ಸುತ್ತಲೂ 35.37 ಚದರ ಮೀಟರ್ ಜಾಗೆ ಒತ್ತುವರಿಯಾಗಿದೆ. ಲೋಕೋಪಯೋಗಿ ಇಲಾಖೆಯ ಆಸ್ತಿಯಾಗಿದ್ದರೂ ದುರಸ್ತಿಗೊಳಿಸಿ ಮರು ಬಳಕೆಗೆ ಪ್ರಯತ್ನಿಸಿಲ್ಲ. ಮಾಹಿತಿ ಪ್ರಕಾರ ಏಳೆಂಟು ವರ್ಷಗಳ ಹಿಂದೆ ಇಲಾಖೆಯ ಪರಿಚಾರಕರು ವಾಸವಾಗಿದ್ದರೂ, ಅವರು ಬಿಟ್ಟ ನಂತರ ಮನೆಗಳು ನಿರುಯುಕ್ತವಾಗಿವೆ.
ಮಾದರಿ ಮನೆಗಳು ಯಾಕೆ: ಈ ಹಿಂದೆ ಲೋಕೋಪಯೋಗಿ ಇಲಾಖೆ ಜನತಾ ಮನೆಗಳನ್ನು ನಿರ್ಮಿಸುತ್ತಿತ್ತು. ತಾಲೂಕಿಗೆ ಮಾದರಿಯಾಗಿರಲಿ ಎಂದು ಮಾದರಿ ಮನೆಗಳನ್ನು ನಿರ್ಮಿಸಿತ್ತು. ಈ ಮನೆಗಳ ಮಾದರಿಯಾಗಿಟ್ಟುಕೊಂಡು ಮನೆ ನಿರ್ಮಿಸುವ ಉದ್ದೇಶ ಹೊಂದಿತ್ತು. ನಂತರ ಸರ್ಕಾರ ಲೋಕೋಪಯೋಗಿ ಇಲಾಖೆಯಿಂದ ವಸತಿ ಇಲಾಖೆಗೆ ಪ್ರತ್ಯೇಕಿಸಿದ್ದರಿಂದ, ಲೋಕೋಪಯೋಗಿ ಜನತಾ ಮನೆ ಕೈ ಬಿಟ್ಟಿದೆ. ಹೀಗಾಗಿ ಈ ಮಾದರಿ ಮನೆಗಳನ್ನು ಸುಸ್ಥಿಯಲ್ಲಿಡಲು ಇಲ್ಲವೇ ತಮ್ಮ ಸಿಬ್ಬಂದಿಗೆ ಬಳಸಿಕೊಳ್ಳದೇ ನಿರ್ಲಕ್ಷವಹಿಸಿದೆ. ಕಚೇರಿಗಳ ಕಟ್ಟಡ, ದುರಸ್ತಿ, ಸುಣ್ಣ ಬಣ್ಣಕ್ಕೆ ಲಕ್ಷಾಂತರ ರೂ. ಖರ್ಚು ಮಾಡುವ ಇಲಾಖೆ ತಮ್ಮದೇ ಆದ ಈ ಮಾದರಿ ಮನೆಗಳ ಮರುದುರಸ್ತಿಗೆ ಮುಂದಾಗಿಲ್ಲ.
ಜಾಗೆಯ ಮೇಲೆ ಕಣ್ಣು: ಸದ್ಯ ಮನೆಗಳ ಮೌಲ್ಯಕ್ಕಿಂತ ಜಾಗೆಯ ಮೌಲ್ಯ ಹೆಚ್ಚಿದೆ. ಈ ಜಾಗೆ ಲಕ್ಷಾಂತರ ರೂ. ಮೌಲ್ಯದ್ದು, ಈಗಾಗಲೇ ಮನೆಯ ಸುತ್ತಲಿನ ಜಾಗೆ ಒತ್ತುವರಿಯಾಗಿದೆ. ತಾಲೂಕಿಗೆ ಮಾದರಿಯಾಗಿದ್ದ ಕಟ್ಟಡಗಳು, ಕಣ್ಮರೆಯಾಗುವ ಆತಂಕ ಸಾರ್ವಜನಿಕವಾಗಿ ವ್ಯಕ್ತವಾಗಿದೆ.
ಲೋಕೋಪಯೋಗಿ ಇಲಾಖೆಯ ಮಾದರಿ ಮನೆಗಳ ಇರುವ ವಿಚಾರಗೊತ್ತಿಲ್ಲ. ಯಾರೂ ಗಮನಕ್ಕೆ ತಂದಿಲ್ಲ. ಖುದ್ದು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವೆ.
•ಅಮರೇಗೌಡ ಪಾಟೀಲ ಬಯ್ನಾಪುರ, ಶಾಸಕ
ಈ ಮನೆಗಳು ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿದ್ದು ಈ ಮೊದಲು ಕಚೇರಿಯ ಇಬ್ಬರು ಪರಿಚಾಲಕರು ಬಳಸಿಕೊಂಡಿದ್ದರು. ನಂತರ ನಿರುಪಯುಕ್ತವಾಗಿವೆ. ಇಲಾಖೆಯ ಮಾದರಿ ಮನೆಗಳ ವಾಸ್ತವ ಸ್ಥಿತಿ ಪರಿಶೀಲಿಸಿ ಮರುದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.
•ಭೀಮಶೇನರಾವ್ ವಜ್ರಬಂಡಿ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜನಿಯರ್