Advertisement

ಗ್ರಾಪಂ ಸದಸ್ಯನ ಮಾದರಿ ಗ್ರಾಮಸೇವೆ

08:33 PM Oct 13, 2021 | Team Udayavani |

ವರದಿ: ಹೇಮರಡ್ಡಿ ಸೈದಾಪುರ

Advertisement

ಹುಬ್ಬಳ್ಳಿ: ಮೂಲ ಸೌಲಭ್ಯಗಳಿಂದ ದೂರ ಉಳಿದಿದ್ದ ಗ್ರಾಮದ ಅಭಿವೃದ್ಧಿಗೆ ಯುವ ಗ್ರಾಪಂ ಸದಸ್ಯನೊಬ್ಬ ಮುನ್ನುಡಿ ಬರೆದಿದ್ದಾನೆ. ಹತ್ತಾರು ಕಚೇರಿಗಳಿಗೆ ಅಲೆದಾಡಿ ತನ್ನೂರಿಗೆ ಬೇಕಾಗಿರುವ ಸೌಲಭ್ಯಗಳನ್ನು ತಂದು ಜನರಲ್ಲಿ ಭರವಸೆ ಮೂಡಿಸಿದ್ದಾನೆ.

ಗ್ರಾಪಂ ಸಿಬ್ಬಂದಿಯೊಂದಿಗೆ ಕೆಲಸಗಾರನಾಗಿ ದುಡಿಯುತ್ತ ಮಾದರಿ ಗ್ರಾಮದತ್ತ ಕೊಂಡೊಯ್ಯುತ್ತಿದ್ದಾನೆ. ಮಹಾತ್ಮ ಗಾಂಧಿ ಅವರ ರಾಮರಾಜ್ಯದ ಕನಸಿಗೆ ಗ್ರಾಮ ಪಂಚಾಯ್ತಿಗಳು ಶಕ್ತಿಸೌಧ. ಆದರೆ ಅದೆಷ್ಟೋ ಕಡೆ ಈ ಶಕ್ತಿಸೌಧಗಳು ಕೇವಲ ಕಟ್ಟಡಗಳಾಗಿವೆ. ಆದರೆ ಇದಕ್ಕೆ ಅಪವಾದ ಎಂಬಂತೆ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಪಂ ವ್ಯಾಪ್ತಿಯ ಅಲ್ಲಾಪುರ ಗ್ರಾಮದ ಗ್ರಾಪಂ ಸದಸ್ಯ ಮಲ್ಲಿಕಾರ್ಜುನ ರಡ್ಡೇರ (26) ಗ್ರಾಮದ ಅಭಿವೃದ್ಧಿಗೆ ಕೈಗೊಂಡಿರುವ ಕಾರ್ಯಗಳಿಂದಾಗಿ ಮಾದರಿಯಾಗಿದ್ದಾರೆ. ಹಲವು ಯೋಜನೆಗಳನ್ನು ತಂದು ಕೇವಲ ಏಳೆಂಟು ತಿಂಗಳಲ್ಲಿ ಗ್ರಾಮದ ಜನರಲ್ಲಿ ಅಭಿವೃದ್ಧಿಯ ಭರವಸೆ ಮೂಡಿಸಿದ್ದಾರೆ. ಕೋವಿಡ್‌ ಟಾಸ್ಕ್ಫೋರ್ಸ್‌ ಸಮಿತಿ ಅಧ್ಯಕ್ಷನಾಗಿ ಹಳ್ಳಿಯನ್ನು ಕೊರೊನಾ ಮುಕ್ತ ಗ್ರಾಮವನ್ನಾಗಿಸಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದರು.

ಎರಡನೇ ಯತ್ನದಲ್ಲಿ ಯಶ: ಕಾಲೇಜು ಹಂತದಿಂದಲೇ ಗ್ರಾಮದ ವಿವಿಧ ಸಮಸ್ಯೆಗಳ ಹೋರಾಟ, ಮನವಿಗಳಿಂದ ಜನಪ್ರತಿನಿಧಿಗಳ, ಅಧಿಕಾರಿಗಳ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದರು. ಸದಸ್ಯನಾದರೆ ಗ್ರಾಮದ ಅಭಿವೃದ್ಧಿಗಾಗಿ ಕೆಲಸ ಮಾಡಬಹುದು ಎನ್ನುವ ಆಸೆಯಿದ್ದರೂ ಮೊದಲ ಪ್ರಯತ್ನದಲ್ಲಿ ಯಶ ಕಾಣಲಿಲ್ಲ. ಗ್ರಾಮದ ಶಾಲೆ ದುರಸ್ತಿ, ರಸ್ತೆ, ಬಸ್‌ ಸೌಲಭ್ಯ, ಗ್ರಾಮದಲ್ಲಿ ಪಡಿತರ ವಿತರಣೆಯಂತಹ ಕಾರ್ಯಗಳಿಂದ ಎರಡನೇ ಪ್ರಯತ್ನದಲ್ಲಿ ಆಯ್ಕೆಯಾಗಿ ಇದೀಗ ಅಭಿವೃದ್ಧಿ ಕಾರ್ಯಗಳ ಆಶಾಭಾವನೆ ಮೂಡಿಸಿದ್ದಾರೆ. ಗಟಾರ ಸ್ವತ್ಛತೆ ಸೇರಿದಂತೆ ಗ್ರಾಮದ ಯಾವುದೇ ಕೆಲಸವಿದ್ದರೂ ಸಿಬ್ಬಂದಿಯೊಂದಿಗೆ ಕೆಲಸ ಮಾಡುವ ಮೂಲಕ ಓರ್ವ ಸದಸ್ಯನಾಗಿ ಗ್ರಾಮದ ಅಭಿವೃದ್ಧಿ ಮಾಡಬಹುದು ಎಂಬುವುದನ್ನು ಸಾಬೀತು ಪಡಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next