Advertisement

Model for Schools: ಮಂಡ್ಯ ಸರಕಾರಿ ಶಾಲೆಗೆ ಫೇಸ್‌ ಬಯೋಮೆಟ್ರಿಕ್‌!

03:19 AM Sep 27, 2024 | Team Udayavani |

ಮಂಡ್ಯ: ತಾಲೂಕಿನ ತಗ್ಗಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಹೆತ್ತವರು, ಗ್ರಾಮಸ್ಥರು ಮತ್ತು ಶಾಲಾಡಳಿತ ಮಂಡಳಿಯ ನೆರವಿನಿಂದ 1 ಲಕ್ಷ ರೂ. ವೆಚ್ಚದಲ್ಲಿ ಮುಖ ಗುರುತಿಸುವಿಕೆ ಉಪಕರಣ (ಫೇಸ್‌ ಬಯೋಮೆಟ್ರಿಕ್‌) ಖರೀದಿಸಿ ಅಳವಡಿಸುವ ಮೂಲಕ ಮಕ್ಕಳ ಹಾಜರಾತಿ ಹೆಚ್ಚಳಕ್ಕೆ ಮುನ್ನುಡಿ ಬರೆದಿದೆ.

Advertisement

ಸರಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು ಫೇಸ್‌ ಬಯೋಮೆಟ್ರಿಕ್‌ ಅಳವಡಿಕೆ ಯೋಜನೆಯ ಪ್ರಸ್ತಾವನೆ ತನ್ನ ಮುಂದಿದ್ದರೂ ಸರಕಾರ ಇನ್ನೂ ಮುಂದಿನ ಹೆಜ್ಜೆ ಇರಿಸಿಲ್ಲ. ಆದರೆ ತಗ್ಗಹಳ್ಳಿ ಶಾಲೆಯ ಈ ವಿಚಾರದಲ್ಲಿ ರಾಜ್ಯದ ಎಲ್ಲ ಸರಕಾರಿ ಶಾಲೆಗಳಿಗೆ ಮಾದರಿಯಾಗಿದೆ. ಇದರ ಜತೆಗೆ ಶಾಲೆಯಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ಪ್ರಾರಂಭವಾದ ಹಿನ್ನೆಲೆಯಲ್ಲಿ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಅವರ ವೇತನಕ್ಕಾಗಿ ಪೋಷಕರೇ ಶುಲ್ಕ ಭರಿಸುತ್ತಿದ್ದರು. ಅದರಲ್ಲಿ ಉಳಿದ ಹಣವನ್ನೂ ಫೇಸ್‌ ಬಯೋಮೆಟ್ರಿಕ್‌ ಅಳವಡಿಕೆಗೆ ಬಳಸಿಕೊಳ್ಳಲಾಗಿದೆ.

ಬಯೋಮೆಟ್ರಿಕ್‌ ಕೆಲಸ ಹೇಗೆ?
ಫೇಸ್‌ ಬಯೋಮೆಟ್ರಿಕ್‌ನಲ್ಲಿ ಡ್ಯಾಶ್‌ಬೋರ್ಡ್‌ ಪ್ರೋಗ್ರಾಂ ಮೂಲಕ ದಾಖಲಾದ ಮಕ್ಕಳು, ಶಿಕ್ಷಕರು, ಸಿಬಂದಿಯ ಮಾಹಿತಿ ಅಳವಡಿಕೆ ಮಾಡಲಾಗಿದೆ. ಎರಡು ಸೆಕೆಂಡ್‌ಗಳಲ್ಲಿ ಹಾಜರಾತಿ ದಾಖಲಾಗುತ್ತದೆ. ಹಾಜರಾದ ಸಮಯ, ದಿನಾಂಕ, ಎಷ್ಟು ಮಕ್ಕಳು ಹಾಜರಾಗಿದ್ದಾರೆ, ಪ್ರತ್ಯೇಕವಾಗಿ ಎಷ್ಟು ಹೆಣ್ಣು, ಗಂಡು ಮಕ್ಕಳು ಹಾಜರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಇದರಿಂದ ಮಕ್ಕಳ ಹಾಜರಾತಿ ಶೇ. 95ರಷ್ಟು ಸುಧಾರಣೆ ಕಂಡಿದೆ. ಮುಂದಿನ ದಿನಗಳಲ್ಲಿ ಗೈರಾಗುವ ಮಕ್ಕಳ ಮಾಹಿತಿಯನ್ನು ಹೆತ್ತವರ ಮೊಬೈಲ್‌ಗೆ ಸಂದೇಶವಾಗಿ ಕಳುಹಿಸುವ ತಂತ್ರಜ್ಞಾನ ಅಳವಡಿಕೆ ಶಾಲಾಡಳಿತ ಮಂಡಳಿಗಿದೆ.

ಯೋಜನೆಗಳ ದುರ್ಬಳಕೆ ತಡೆ
ಫೇಸ್‌ ಬಯೋಮೆಟ್ರಿಕ್‌ ಅಳವಡಿಕೆಯಿಂದ ಸರಕಾರದ ಯೋಜನೆಗಳು ದುರ್ಬಳಕೆಯಾಗುವುದನ್ನು ತಡೆಗಟ್ಟಬಹುದಾಗಿದೆ. ಪ್ರತಿನಿತ್ಯ ಹಾಜರಾಗುವ ಮಕ್ಕಳ ಆಧಾರದ ಮೇಲೆ ಸವಲತ್ತು ವಿದ್ಯಾರ್ಥಿಗಳಿಗೆ ಸದ್ಬಳಕೆಯಾಗಲು ಸಹಕಾರಿಯಾಗಲಿದೆ.

ಮಕ್ಕಳ ದಾಖಲಾತಿ ಹೆಚ್ಚಳ
ತಗ್ಗಹಳ್ಳಿ ಸ.ಹಿ.ಪ್ರಾ.ಶಾಲೆಯಲ್ಲಿ ಎಲ್‌ಕೆಜಿಯಿಂದ 7ನೇ ತರಗತಿವರೆಗೆ ಇದೆ. 2020ರ ಕೋವಿಡ್‌ ಅನಂತರ ಶಾಲೆಯಲ್ಲಿ ಕೇವಲ 45 ಮಕ್ಕಳು ಇದ್ದರು. ಈಗ ಸಂಖ್ಯೆ 253ಕ್ಕೆ ಏರಿದೆ. 7ನೇ ತರಗತಿಗೆ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 36 ಮಕ್ಕಳು ದಾಖಲಾಗಿದ್ದಾರೆ.

Advertisement

ಪಿಎಂಎಸ್‌ಎಚ್‌ಆರ್‌ಐಗೆ ಶಾಲೆ ಆಯ್ಕೆ
ತಗ್ಗಹಳ್ಳಿ ಸ.ಹಿ.ಪ್ರಾ. ಶಾಲೆಯು ಪ್ರಧಾನಮಂತ್ರಿ ಸ್ಕೂಲ್‌ ಫಾರ್‌ ರೈಸಿಂಗ್‌ ಇಂಡಿಯಾ (ಪಿಎಂಎಸ್‌ಎಚ್‌ಆರ್‌ಐ) ಯೋಜನೆಗೆ ಆಯ್ಕೆಯಾಗಿದೆ. ದೇಶದ 14,500 ಶಾಲೆಗಳ ಪೈಕಿ ಈ ಶಾಲೆಯೂ ಒಂದಾಗಿದೆ. ಅದರಂತೆ ಕೇಂದ್ರ ಸರಕಾರದಿಂದ 15 ಲಕ್ಷ ರೂ. ಅನುದಾನ ಬಂದಿದೆ. ಈಗ ಕೇಂದ್ರ ಸರಕಾರದಿಂದಲೇ ತರಗತಿ ನಡೆಸಲು ಹಾಗೂ ಅತಿಥಿ ಶಿಕ್ಷಕರಿಗೆ ವೇತನ ನೀಡಲಾಗುತ್ತಿದೆ.

ಬಯೋಮೆಟ್ರಿಕ್‌ ತಂತ್ರಜ್ಞಾನವನ್ನು ನಮ್ಮ ಶಾಲೆಯಲ್ಲಿ ಅಳವಡಿಸಬೇಕೆಂಬ ನಿಟ್ಟಿನಲ್ಲಿ ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ, ಗ್ರಾಮಸ್ಥರೊಂದಿಗೆ ಚರ್ಚಿಸಿ ಅಳವಡಿಸಲಾಗಿದೆ. ಅಧಿಕೃತ ಉದ್ಘಾಟನೆಗೆ ಶಿಕ್ಷಣ ಸಚಿವರ ಆಗಮನಕ್ಕಾಗಿ ಕಾಯುತ್ತಿದ್ದೇವೆ.
– ಅನಿಲ್‌ ಕುಮಾರ್‌, ಎಸ್‌ಡಿಎಂಸಿ ಸದಸ್ಯರು, ತಗ್ಗಹಳ್ಳಿ

ಫೇಸ್‌ ಬಯೋ ಮೆಟ್ರಿಕ್‌ ಯೋಜನೆ ಜಾರಿಗೆ ತರಬೇಕು ಎಂಬ ಪ್ರಸ್ತಾವನೆ ಸರಕಾರದ ಮುಂದಿದ್ದರೂ ಜಾರಿಯಾಗಿಲ್ಲ. ತಗ್ಗಹಳ್ಳಿ ಶಾಲೆಯ ಎಸ್‌ಡಿಎಂಸಿ ಸದಸ್ಯರು, ಗ್ರಾಮಸ್ಥರು ಸರಕಾರದ ಅನುದಾನಕ್ಕೆ ಕಾಯದೆ ಬಯೋಮೆಟ್ರಿಕ್‌ ಅಳವಡಿಸಿ ಮಾದರಿಯಾಗಿದ್ದಾರೆ.
– ಉಮೇಶ್‌, ಕ್ಷೇತ್ರ ಸಮನ್ವಯಾಧಿಕಾರಿ, ದಕ್ಷಿಣ ವಲಯ ಮಂಡ್ಯ.

Advertisement

Udayavani is now on Telegram. Click here to join our channel and stay updated with the latest news.

Next