Advertisement

ಜಲಸಂರಕ್ಷಣೆ ಕಾಯಕದಲ್ಲಿ ಕರ್ನಾಟಕ ದೇಶಕ್ಕೇ ಮಾದರಿ; ಜಲ ಸಂರಕ್ಷಣೆಗೆ ನರೇಗಾ ಸಾರಥಿ

11:26 PM Mar 21, 2022 | Team Udayavani |

ದಾವಣಗೆರೆ: ನರೇಗಾ ಯೋಜನೆಯಡಿ ರಾಜ್ಯ ಸರಕಾರ ದುಡಿಯುವ ಕೈಗಳಿಗೆ ಕೆಲಸ ನೀಡುವ ಜತೆಗೆ ಜಲಸಂರಕ್ಷಣೆಗೆ ವಿಶೇಷ ಗಮನ ಹರಿಸಿದ್ದು, ಪ್ರಸಕ್ತ ವರ್ಷ ಜಲಸಂರಕ್ಷಣೆ ಕಾಯಕದಲ್ಲಿ ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗಿದೆ.

Advertisement

ನರೇಗಾ ಅನುಷ್ಠಾನದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂ.ರಾಜ್‌ ಇಲಾಖೆ ಪ್ರಸಕ್ತ 2021-22ನೇ ಸಾಲಿನಲ್ಲಿ ಜಲ ಸಂರಕ್ಷಣೆಗೆ ವಿಶೇಷ ಒತ್ತು ನೀಡಿದೆ. ಇದರ ಪರಿಣಾಮ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಐದು ಲಕ್ಷಕ್ಕೂ ಅಧಿಕ ಜಲಸಂರಕ್ಷಣೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಮೂಲಕ ಬೃಹತ್‌ ಪ್ರಗತಿ ಸಾಧಿಸಲಾಗಿದೆ.

ಅರಣ್ಯ ಪ್ರದೇಶದಲ್ಲಿ ಕೈಗೊಂಡ ಸಮಪಾತಳಿ ಬದುಗಳು, ರೈತರ ಜಮೀನಿನಲ್ಲಿ ಕಂದಕ ಬದುವು, ಕಲ್ಯಾಣಿಗಳ ಪುನಶ್ಚೇತನ, ಕೆರೆ ಅಭಿವೃದ್ಧಿ, ನದಿ ಪುನಶ್ಚೇತನ ಕಾಮಗಾರಿಗಳು ಜಲಸಂರಕ್ಷಣೆಯಲ್ಲಿ ಪ್ರಮುಖವಾಗಿವೆ. ಜಲಶಕ್ತಿ ಅಭಿಯಾನದಡಿ ಹಳ್ಳಿಗಳಲ್ಲಿ ಸಮಗ್ರ ಕೆರೆ ಅಭಿವೃದ್ಧಿ, ನಾಲಾ ದುರಸ್ತಿ, ಕಲ್ಯಾಣಿ ದುರಸ್ತಿ, ಗೋಕಟ್ಟೆ ನಿರ್ಮಾಣ, ಮಳೆಕೊಯ್ಲು, ಚೆಕ್‌ಡ್ಯಾಂ ನಿರ್ಮಾಣ, ಇಂಗುಗುಂಡಿ ನಿರ್ಮಾಣ, ಜಲಮರುಪೂರಣ, ಅರಣ್ಯೀಕರಣ, ಕೃಷಿ ಹೊಂಡ, ಜಮೀನುಗಳಲ್ಲಿ ಬದುಹೊಂಡ ನಿರ್ಮಾಣ, ತೆರೆದಬಾವಿ ಪುನಶ್ಚೇತನದಂತಹ ವಿವಿಧ ಕಾಮಗಾರಿಗಳನ್ನು ಮಾಡಲಾಗಿದೆ.

ಇದನ್ನೂ ಓದಿ:ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಅಲ್ಲ: ಸಚಿವ ಆರಗ ಜ್ಞಾನೇಂದ್ರ

692 ಕಲ್ಯಾಣಿಗಳ ಜೀರ್ಣೋದ್ಧಾರ
ಜನರು ಕಲ್ಯಾಣಿಯನ್ನು ಅವಲಂಬಿಸದೇ ಪರ್ಯಾಯ ಕೊಳವೆ ಬಾವಿಗಳನ್ನು ಅವಲಂಬಿಸಿದ್ದರಿಂದ ಕಲ್ಯಾಣಿಗಳು ಬಳಕೆಗೆ ಬಾರದೆ ಅವಸಾನದಂಚಿಗೆ ತಲುಪಿದ್ದವು. ಇಂತಹ ಕಲ್ಯಾಣಿಗಳನ್ನು ಗುರುತಿಸಿ ರಾಜ್ಯದಲ್ಲಿ ಸುಮಾರು 692 ಕಲ್ಯಾಣಿಗಳನ್ನು ಪ್ರಸಕ್ತ ಸಾಲಿನಲ್ಲಿ ಜೀರ್ಣೋದ್ಧಾರ ಮಾಡಿರುವುದು ಇನ್ನೊಂದು ವಿಶೇಷ.

Advertisement

ಕಾರ್ಮಿಕರಿಂದ ಜಲ ಕೈಂಕರ್ಯ
ನರೇಗಾ ಅಡಿ ನಡೆದ ಜಲ ಕೈಂಕರ್ಯದಲ್ಲಿ ಕರ್ನಾಟಕ ದೇಶಕ್ಕೇ ಮಾದರಿಯಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಿದೆ. ಇದರ ಹಿಂದಿನ ಬೃಹತ್‌ ಶಕ್ತಿ ಕೂಲಿ ಕಾರ್ಮಿಕರದು. ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆ ಯಡಿ ಕೆಲಸ ಪಡೆಯುವ ಜತೆಗೆ ಜಲ ಸಂರಕ್ಷಣೆ ಕಾಮಗಾರಿಯನ್ನು ನಿರ್ವಹಿಸಿ ಗ್ರಾಮೀಣ ಕೂಲಿಕಾರ್ಮಿಕರು ದೊಡ್ಡ ಕೊಡುಗೆ ನೀಡಿದ್ದಾರೆ.

– ಎಚ್‌.ಕೆ. ನಟರಾಜ

 

Advertisement

Udayavani is now on Telegram. Click here to join our channel and stay updated with the latest news.

Next