Advertisement

ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕೆ ದ.ಕ.ಮಾದರಿ: ಟಿ.ಎಸ್‌. ನಾಗಾಭರಣ

12:52 AM Apr 09, 2022 | Team Udayavani |

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಡಳಿತದಲ್ಲಿ ಕನ್ನಡ ಪರಿಣಾಮಕಾರಿಯಾಗಿ ಅನುಷ್ಠಾನ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳೂರನ್ನು ಮಾದರಿ ಯಾಗಿಟ್ಟುಕೊಂಡು ರಾಜ್ಯದ ಎಲ್ಲ ಜಿಲ್ಲೆ
ಗಳಲ್ಲೂ ಕನ್ನಡ ಕಲಿಕೆ ಮತ್ತು ಬಳಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್‌. ನಾಗಾಭರಣ ತಿಳಿಸಿದರು.

Advertisement

ಆಡಳಿತದಲ್ಲಿ ಕನ್ನಡ ಅನುಷ್ಠಾನ ಕುರಿತಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನ ಸಭೆ ನಡೆಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕೊರೊನಾ ಸಂದರ್ಭ ಕನ್ನಡ ಕಲಿಕೆಗೆ ವಿದೇಶದಲ್ಲಿ ಆನ್‌ಲೈನ್‌ ಮೂಲಕ ಅಭಿಯಾನ ನಡೆಸಲಾಗಿದೆ. 56 ದೇಶಗಳ ಅನಿವಾಸಿ ಕನ್ನಡಿಗರ ಮಕ್ಕಳಿಗೆ 18 ಕಾರ್ಯಾಗಾರಗಳನ್ನು ನಡೆಸಲಾಗಿದೆ. ಅಲ್ಲಿ ಸಾಧ್ಯವಾಗಿ ರುವುದು ಇಲ್ಲಿ ಯಾಕೆ ಅಸಾಧ್ಯ ಎಂದು ನಾಗಾಭರಣ ಪ್ರಶ್ನಿಸಿದರು.

ಕೇಂದ್ರಕ್ಕೆ ಮನವಿ
ಕೇಂದ್ರೀಯ ವಿದ್ಯಾಲಯಗಳಲ್ಲಿ ಕನ್ನಡ ಭಾಷೆ ಕಲಿಸುವ ಕುರಿತಂತೆ ಕೇಂದ್ರದಿಂದ ನಿಯಮ ಜಾರಿಗೆತರಬೇಕಾಗಿದೆ. ಈ ಬಗ್ಗೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಾಥಮಿಕ ಹಂತದಲ್ಲಿ ಮಾತೃ ಭಾಷೆ ಕಲಿಕೆಗೆ ಆದ್ಯತೆ ಇದೆ. ಆದರೆ ಪದವಿಯಲ್ಲಿ ಈ ಬಗ್ಗೆ ಪ್ರಸ್ತಾವವಿಲ್ಲ. ಇತ್ತೀಚೆಗೆ ಹೈಕೋರ್ಟ್‌ ಮಧ್ಯಾಂತರ ತೀರ್ಪಿನಲ್ಲೂ ಪದವಿ ತರಗತಿಗಳಲ್ಲಿ ಕನ್ನಡೇತರರಿಗೆ ಕನ್ನಡ ಕಲಿಕೆ ಕಡ್ಡಾಯವಲ್ಲ ಎಂದು ತಿಳಿಸಿದೆ. ಇದರಲ್ಲಿ ಪ್ರಾಧಿಕಾರ ಕೂಡ ನ್ಯಾಯಾಲಯದಲ್ಲಿ ಕನ್ನಡ ಪರವಾಗಿ ವಾದ ಮಂಡಿಸಲಿದೆ ಎಂದರು.

ಉದ್ಯೋಗ ಕಡ್ಡಾಯವಾಗಲಿ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಇತ್ತೀಚೆಗೆ 170 ಉದ್ಯೋಗಿಗಳನ್ನು ನೇಮಿಸುವಾಗ ಕೇವಲ 14 ಮಂದಿ ಕನ್ನಡಿಗರಿಗೆ ಮಾತ್ರ ಉದ್ಯೋಗ ಲಭಿಸಿದೆ. ಕರ್ನಾಟಕದ ನಾಲ್ಕು ಕಡೆ ಆಯ್ಕೆ ಪರೀಕ್ಷೆ ನಡೆಸಿದ್ದು, ಕನ್ನಡಿಗರು ಕಡಿಮೆ ಸಂಖ್ಯೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಕನ್ನಡಿಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ನೀಡಬೇಕಾದರೆ ಈ ಕುರಿತು ಕಾಯ್ದೆ ಜಾರಿಗೆ ತರ ಬೇಕಾಗಿದೆ ಎಂದರು.

Advertisement

ಕನ್ನಡ ತರಬೇತಿ
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನ್ನಡೇ ತರ ಅಧಿಕಾರಿಗಳಿಗೆ ಕನ್ನಡ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ನಾಗಾಭರಣ ವಿವರಿಸಿದರು.

ಎಂಆರ್‌ಪಿಎಲ್‌ಗೆ ನೋಟಿಸ್‌
ಕನ್ನಡ ಅನುಷ್ಠಾನ ನಡೆಸದೇ ಇರುವ ಕಾರಣಕ್ಕೆ ಎಂಆರ್‌ಪಿಎಲ್‌ಗೆ ಜಿಲ್ಲಾ ಕನ್ನಡ ಕಾವಲು ಸಮಿತಿಯಿಂದ ನೋಟಿಸ್‌ ಜಾರಿ ಮಾಡ‌ಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಾಜ್ಯ ನಾಲ್ಕು ಪ್ರಾದೇಶಿಕ ವಿಭಾಗಗಳಲ್ಲಿ ಕನ್ನಡ ಅನುಷ್ಠಾನ ಬಗ್ಗೆ ವಿಚಾರ ಸಂಕಿರಣ ಹಮ್ಮಿಕೊಳ್ಳುತ್ತಿದೆ. ಮೇ ತಿಂಗಳಲ್ಲಿ ಮಂಗಳೂರಿನಲ್ಲೂ ವಿಚಾರ ಸಂಕಿರಣ ನಡೆಯಲಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್‌ ಹಾನಗಲ್‌ ತಿಳಿಸಿದರು.

ಪ್ರಾಧಿಕಾರದ ಸದಸ್ಯ ರಮೇಶ್‌ ಗುಬ್ಬಿಗೂಡು ಮಾತನಾಡಿದರು. ಎಡಿಸಿ ಕೃಷ್ಣಮೂರ್ತಿ, ಜಿ.ಪಂ. ಸಿಇಒ ಡಾ| ಕುಮಾರ್‌, ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ಉಪಸ್ಥಿತರಿದ್ದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರು ಶುದ್ಧ ಕನ್ನಡ ಮಾತನಾಡುತ್ತಿದ್ದಾರೆ. ಮುದ್ರಣ ಮಾಧ್ಯಮಗಳು ಶುದ್ಧ ಕನ್ನಡಕ್ಕೆ ಆದ್ಯತೆ ನೀಡುತ್ತಿವೆ. ತರಂಗ ವಾರ ಪತ್ರಿಕೆ¿ಲ್ಲಿ ಬಳಸುವ ಭಾಷೆ ಶುದ್ಧ ಕನ್ನಡವಾಗಿದ್ದು, ಅದರಿಂದ ನಾನು ಪ್ರೇರಿತನಾಗಿದ್ದೇನೆ. ಹಲವಾರು ಹೊಸ ಶಬ್ದಗಳನ್ನು ನಾನು ಈ ಪತ್ರಿಕೆಯ ಮೂಲಕ ಕಲಿತಿದ್ದೇನೆ.
– ಟಿ.ಎಸ್‌. ನಾಗಾಭರಣ

Advertisement

Udayavani is now on Telegram. Click here to join our channel and stay updated with the latest news.

Next