Advertisement

ಬೆಂಗಳೂರು ಕೋವಿಡ್‌ 19 ತಡೆಗೆ ಮಾದರಿ

06:15 AM Jun 02, 2020 | Lakshmi GovindaRaj |

ಬೆಂಗಳೂರು: ಕೋವಿಡ್‌ 196 ನಿಯಂತ್ರಣದಲ್ಲಿ ತೆಗೆದುಕೊಂಡ ಕೆಲವು ಮುಂಜಾಗ್ರತಾ ಕ್ರಮಗಳ ಫ‌ಲವಾಗಿ ಬೆಂಗಳೂರು ಇಡೀ ದೇಶದಲ್ಲೇ ಮಾದರಿ ನಗರಗಳ ಪಟ್ಟಿಗೆ ಸೇರ್ಪಡೆಗೊಂಡಿದೆ. ಇದಕ್ಕೆ ಪಾಲಿಕೆ ತೆಗೆದುಕೊಂಡ ತುರ್ತು  ಕ್ರಮಗಳೂ ಕಾರಣವಾಗಿವೆ. ಉದಾಹರಣೆಗೆ ಚೆನ್ನೈನ ಕೊಯಂಬೀಡು ಮಾರುಕಟ್ಟೆ ಕೋವಿಡ್‌ 19 ಕೇಂದ್ರ ಬಿಂದುವಾಗುವ ಮೊದಲೇ ಬಿಬಿಎಂಪಿ ಕೆ.ಆರ್‌. ಮಾರುಕಟ್ಟೆ ಸೇರಿದಂತೆ ಇಲ್ಲಿನ ಹಲವು ಮಾರುಕಟ್ಟೆಗಳನ್ನು ಸ್ಥಗಿತಗೊಳಿಸಿತು.

Advertisement

ಪರಿಣಾಮ ಆಗಬಹುದಾದ ಅನಾಹುತ ತಪ್ಪಿತು. ನಗರದಲ್ಲಿ ಕೋವಿಡ್‌ 19 ವ್ಯಾಪಕವಾಗಿ ಹರಡುವ ಆತಂಕ ಎದುರಾಗುತ್ತಿದ್ದಂತೆ, ಪಾದರಾಯನಪುರ ಹಾಗೂ ಬಾಪುಜಿನಗರವನ್ನು ಪಾಲಿಕೆ ಸೀಲ್‌ಡೌನ್‌  ಮಾಡಿದ್ದೇ ನಗರದಲ್ಲಿ ಸೋಂಕು  ವ್ಯಾಪಕವಾಗಿ ಕಟ್ಟಿಹಾಕುವುದನ್ನು ತಡೆಯಲು ಕಾರಣವಾಯಿತು. ಇಲ್ಲಿನ ಮನೆಗಳ ವಿನ್ಯಾಸ ಹಾಗೂ ವ್ಯವಸ್ಥೆ ತಿಳಿದ ಮೇಲೆ ಸೀಲ್‌ಡೌನ್‌ ನಿರ್ಧಾರವನ್ನು ಪಾಲಿಕೆ ತೆಗೆದುಕೊಂಡಿತು. 2ನೇ ಹಂತದಲ್ಲಿ ಇಲ್ಲಿನ ದ್ವಿತೀಯ ಸಂಪರ್ಕಿತರನ್ನು  ಪತ್ತೆ ಮಾಡಿದ್ದೂ ಕಾರಣ ಎನ್ನುತ್ತಾರೆ ಪಶ್ಚಿಮ ವಲಯದ ಆರೋಗ್ಯಾಧಿಕಾರಿ ಡಾ. ಮನೋರಂಜನ್‌ ಹೆಗ್ಡೆ.

ಮಾರುಕಟ್ಟೆ ಬಂದ್‌: ಸಕಾಲದಲ್ಲಿ ಚಾಮರಾಜಪೇಟೆಯ ಕೃಷ್ಣರಾಜೇಂದ್ರ ಮಾರುಕಟ್ಟೆ ಹಾಗೂ ಶಿವಾಜಿನಗರದ ರೆಲಸ್‌ ಮಾರುಕಟ್ಟೆಗಳನ್ನು ಬಿಬಿಎಂಪಿ ಮುಚ್ಚಿಸಿದ ಹಿನ್ನೆಲೆಯಲ್ಲಿ ಸೋಂಕಿನ ಸರಪಳಿ ಕೊಂಡಿ ಕಳಚಿದಂತಾಗಿದ್ದು,  ಇದರಿಂದ ಅನಾನುಕೂಲದ ಜತೆಗೆ ಅಪಾಯವೂ ತಪ್ಪಿದೆ. ನಗರದಲ್ಲಿ ಲಾಕ್‌ಡೌನ್‌ ಪ್ರಾರಂಭವಾಗುವ ಹಂತದಲ್ಲೇ (ಏ.23) ಕೃಷ್ಣರಾಜೇಂದ್ರ ಮಾರುಕಟ್ಟೆಯನ್ನು ಬಂದ್‌ ಮಾಡಲಾಯಿತು.

ಇನ್ನು ಏ.4ರಿಂದ ಶಿವಾಜಿನಗರದ ರಸೆಲ್‌  ಮಾರುಕಟ್ಟೆಯನ್ನು ಮುಚ್ಚಿಸಲಾಯಿತು. ಈ ಎರಡು ನಗರದ ಪ್ರಮುಖ ಮಾರುಕಟ್ಟೆಗಳಾಗಿದ್ದು, ನಿತ್ಯ ಇಲ್ಲಿ ಸಾವಿರಾರು ಜನ ಸೇರುತ್ತಾರೆ. ಮುಖ್ಯವಾಗಿ ಕೃಷ್ಣರಾಜೇಂದ್ರ ಮಾರುಕಟ್ಟೆಗೆ ಸರಬರಾಜಾಗುವ ಮಲ್ಲಿಗೆ ಮೊಗ್ಗು ಹೂ  ತಮಿಳುನಾಡಿನ ಕೃಷ್ಣಗಿರಿಯಿಂದ ಬರುತ್ತದೆ. ಉಳಿದಂತೆ ಹೂವು ತರಕಾರಿಗಳು ಕನಕಪುರ, ಮಾಗಡಿ, ಚಿಕ್ಕ ಬಳ್ಳಾಪುರ, ಹೊಸಕೋಟೆ, ದೇವನಹಳ್ಳಿ, ಕೋಲಾರ  ದಿಂದ ಸರಬರಾಜಾಗುತ್ತದೆ. ಪ್ರತ್ಯಕ್ಷ- ಪರೋಕ್ಷವಾಗಿ ಸಾವಿರಾರು  ಮಂದಿ ಮಾರುಕಟ್ಟೆಯಲ್ಲಿ ವ್ಯವಹರಿಸುತ್ತಾರೆ.

ಚೆನ್ನೈನಲ್ಲಿ ಆಗಿದ್ದೇನು: ಚೆನ್ನೈನ ಕೊಯಂಬೀಡು ಮಾರುಕಟ್ಟೆಯು ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆಯ ರೀತಿಯಲ್ಲೇ ವಿಶಾಲವಾಗಿ ಮತ್ತು ಏಷ್ಯಾದ ಅತಿ ದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಈ ಮಾರುಕಟ್ಟೆಯಲ್ಲಿದ್ದ  ವ್ಯಾಪಾರಿಗಳು ಹಾಗೂ ಗ್ರಾಹಕರಲ್ಲಿ ಶೇ.95ರಷ್ಟು ಜನರಲ್ಲಿ ಕೋವಿಡ್‌ 19 ಸೋಂಕು ಇರುವುದು ದೃಢಪಡುತ್ತಿದೆ. ಈ ಮೂಲಕ ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವು ಜಿಲ್ಲೆಗಳಿಗೆ ಸೋಂಕು ವ್ಯಾಪಕವಾಗುತ್ತಿದೆ. ಅಷ್ಟೇ ಅಲ್ಲ, ಆಂಧ್ರ ಪ್ರದೇಶ, ಕೇರಳ ಹಾಗೂ ಕರ್ನಾಟಕದ ಕೆಲವು ಭಾಗಗಳಿಗೂ ಇಲ್ಲಿಂದಲೇ ತರಕಾರಿ, ಹಣ್ಣು ಸರಬರಾಜು ಆಗುತ್ತಿದ್ದು, ಆತಂಕ ಮೂಡಿಸಿದೆ.

Advertisement

ಕೆಲವು ನ್ಯೂನತೆಗಳು: ಈ ಮಾದರಿಗಳ ನಡುವೆಯೇ ಪಾಲಿಕೆಯ ಕೆಲವು ನ್ಯೂನತೆಗಳನ್ನೂ ಕಾಣಬಹುದು. ಅವುಗಳಲ್ಲಿ ಕ್ವಾರಂಟೈನ್‌ ಸಮಸ್ಯೆ, ವಲಸೆ ಕಾರ್ಮಿಕರಿಗೆ ಆಹಾರದ ಕಿಟ್‌ ಅವ್ಯವಹಾರ ಆರೋಪ ಹಾಗೂ ಪ್ರತಿ ವಾರ್ಡ್‌ಗಳಲ್ಲೂ ವಿಪತ್ತು ನಿರ್ವಹಣೆ ತಂಡ ರಚನೆ ಮಾಡಿ ಅದು ಸಕಾಲಕ್ಕೆ ಉಪಯೋಗವಾಗದೆ ಇರುವುದು ಇದರಲ್ಲಿ ಪಾಲಿಕೆಯ ಅಧಿಕಾರಿಗಳ ನಿರಾಸಕ್ತಿ, ವೈಫ‌ಲ್ಯವೂ ಇದೆ. ಈ ಅಪಸ್ವರಗಳ ನಡುವೆ ಇದುವರೆಗೆ ತುಸು ಉತ್ತಮ  ರೀತಿಯಲ್ಲಿ ನಿರ್ವಹಣೆ ಸಾಧ್ಯವಾಗಿದೆ.

ಸಡಿಲಿಕೆಯೊಂದಿಗೆ ಜಾಗೃತಿಯೂ ಮುಖ್ಯ: ನಗರದಲ್ಲಿ ಇನ್ನೂ ಒಂದು ತಿಂಗಳು ಕೋವಿಡ್‌ 19 ಪ್ರಕರಣಗಳು ಹೆಚ್ಚುವ ಸಾಧ್ಯತೆಯಿದೆ. ಆದರೆ, ಜನ ಆತಂಕಕ್ಕೆ ಒಳಗಾಗುವ ಅಗತ್ಯತೆ ಇಲ್ಲ ಎಂದು ಜಯದೇವ ಹೃದ್ರೋಗ ಸಂಶೋಧನಾ  ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌ ಮಂಜುನಾಥ್‌ ತಿಳಿಸಿದರು. ಬೆಂಗಳೂರು ಕೋವಿಡ್‌ 19 ತಡೆ ಮಾದರಿಯ ಹಿಂದಿನ ವಿಷಯಗಳ ಬಗ್ಗೆ “ಉದಯವಾಣಿಯೊಂದಿಗೆ ಮಾತನಾಡಿದ ಅವರು, “ಈ ಹಂತದಲ್ಲಿ ಸಡಿಲಿಕೆ ಅವಶ್ಯವಾಗಿದೆ. ಎಲ್ಲ  ಆಸ್ಪತ್ರೆಗಳೂ ಸೋಂಕಿಗೆ ಚಿಕಿತ್ಸೆ ನೀಡುವ ಹಂತದಲ್ಲಿ ಉಳಿದ ರೋಗಗಳನ್ನು ನಿಯಂತ್ರಿಸುವುದು ಸವಾಲಾಗಿ ಪರಿಣಮಿಸಲಿದೆ.

ಸಡಿಲಿಕೆ ಸಮಯದಲ್ಲಿ ಜನರು ಜಾಗೃತರಾಗಿರಬೇಕು. ಇನ್ನು ಬೆಂಗಳೂರು ಮಾದರಿ ನಗರ ಎಂದು  ಕರೆಸಿಕೊಳ್ಳಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದು, ಥರ್ಮಲ್‌ ಸ್ಕ್ರೀನಿಂಗ್‌ ಹಾಗೂ μàವರ್‌ ಕ್ಲಿನಿಕ್‌ ವ್ಯವಸ್ಥೆ ಮಹತ್ವದಾಗಿದೆ. ಸೋಂಕಿನ ಗಂಭೀರತೆಯನ್ನು ಸಾರ್ವಜನಿಕರಿಗೆ ತಿಳಿಸಿದ್ದೇ ಮೊದಲ ಹಂತದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗಿದೆ. ನಮ್ಮಲ್ಲಿ ಗಂಭೀರ ಪ್ರಕರಣಗಳು ಹೆಚ್ಚು ದಾಖಲಾಗುತ್ತಿಲ್ಲ, ಅಲ್ಲದೆ, ಚೇತರಿಕೆ ಪ್ರಮಾಣವೂ ಶೇ.50 ಸಮೀಪವಿದೆ ಹೀಗಾಗಿ ಆತಂಕವಿಲ್ಲ ಎಂದರು.

ಉತ್ತಮಗೊಳ್ಳಲು ಅವಕಾಶ: ಉಳಿದ ನಗರಗಳಿಗಿಂತ ರಾಜಧಾನಿಯಲ್ಲಿ ಸೋಂಕು ನಿಯಂತ್ರಣದಲ್ಲಿದ್ದು, ಉತ್ತಮ ನಗರಗಳ ಪಟ್ಟಿಯಲ್ಲಿದೆ ನಿಜ. ಆದರೆ, ಇರುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲಿಲ್ಲ ಎನ್ನುತ್ತಾರೆ  ಸಾಮಾಜಿಕ ಕಾರ್ಯಕರ್ತೆ ಕಾತ್ಯಾಯಿನಿ ಚಾಮರಾಜ್‌. ಬಿಬಿಎಂಪಿ ವಲಸೆ ಕಾರ್ಮಿಕರನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡಿಲ್ಲ. ಅಲ್ಲದೆ, ಬಿಬಿಎಂಪಿ ಪ್ರತಿ ವಾರ್ಡ್‌ ವ್ಯಾಪ್ತಿ ಪಾಲಿಕೆ ಸದಸ್ಯರ ನೇತೃತ್ವದಲ್ಲಿ ವಿಪತ್ತು ನಿರ್ವಹಣಾ ತಂಡ  ರಚನೆ ಮಾಡಿದೆ. ಆದರೆ, ಇದು ಕಾರ್ಯರೂಪಕ್ಕೆ ಬಂದಿಲ್ಲ. ಪಾಲಿಕೆಯ ಬಳಿ ಯಾವ ವಾರ್ಡ್‌ ಯಾವ ಸ್ಥಿತಿಯಲ್ಲಿದೆ? ಎಲ್ಲೆಲ್ಲೆ ಯಾವ ಸಮಸ್ಯೆ ಇದೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಿಲ್ಲ. ಸಮಗ್ರ ಮಾಹಿತಿಯಿಂದ ಕಾರ್ಯನಿರ್ವಹಿಸಿದರೆ ವಿಪತ್ತು ನಿರ್ವಹಣಾ ತಂಡಗಳು ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.

* ಹಿತೇಶ್‌ ವೈ.

Advertisement

Udayavani is now on Telegram. Click here to join our channel and stay updated with the latest news.

Next