Advertisement

ಮಾದರಿ ನೀತಿ ಸಂಹಿತೆ ತೆರವು

09:30 PM Sep 28, 2019 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಈ ಹಿಂದೆ ಚುನಾವಣಾ ಆಯೋಗ ಅ.21ಕ್ಕೆ ಘೋಷಿಸಿದ್ದ ಉಪ ಚುನಾವಣೆಗೆ ಅನರ್ಹ ಶಾಸಕರ ಅರ್ಜಿ ವಿಚಾರಣೆ ಬಾಕಿ ಇರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದ ಬಳಿಕ ಡಿ.5ಕ್ಕೆ ಚುನಾವಣೆ ನಡೆಸಲು ಆಯೋಗ ಮರು ದಿನಾಂಕ ನಿಗದಿಗೊಳಿಸಿದೆ.

Advertisement

ಈ ಹಿನ್ನೆಲೆಯಲ್ಲಿ ಜಾರಿಯಲ್ಲಿದ್ದ ಮಾದರಿ ನೀತಿ ಸಂಹಿತೆಯನ್ನು ಸೆ.27ರ ಮಧ್ಯರಾತ್ರಿಯಿಂದಲೇ ತೆರವುಗೊಳಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿ ಎ.ಎನ್‌.ರಘುನಂದನ್‌ ತಿಳಿಸಿದರು.

ನಗರದ ತಾಲೂಕು ಕಚೇರಿಯಲ್ಲಿ ಶನಿವಾರ ದಿಢೀರ್‌ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಚುನಾವಣಾ ಆಯೋಗದ ಘೋಷಣೆಯಂತೆ ಅ.21ಕ್ಕೆ ಉಪ ಚುನಾವಣೆ ನಿಗದಿಯಾಗಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿತ್ತು. ಆದರೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ನೀಡಿರುವುದರಿಂದ ಉಪ ಚುನಾವಣೆಗೆ ಮರು ದಿನಾಂಕ ನಿಗದಿಗೊಳಿಸಿದೆ ಎಂದರು.

ಡಿ.5ಕ್ಕೆ ಉಪ ಚುನಾವಣೆ: ಮರು ದಿನಾಂಕ ನಿಗದಿಯಂತೆ ನ.11 ರಿಂದ ಉಪ ಚುನಾವಣೆಗೆ ನಾಮಪತ್ರಗಳ ಸ್ವೀಕಾರ ಆರಂಭ, 18 ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. 19 ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದ್ದು, 21 ರಂದು ಸಲ್ಲಿಕೆಯಾದ ನಾಮಪತ್ರಗಳ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ಡಿ.5ರಂದು ಉಪ ಚುನಾವಣೆಯ ಮತದಾನ ನಡೆಯಲಿದ್ದು, ಡಿ.9ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಚುನಾವಣಾ ಅಧಿಕಾರಿ ಎ.ಎನ್‌.ರಘುನಂದನ್‌ ತಿಳಿಸಿದರು.

ಒಂದು ನಾಮಪತ್ರ ಸಲ್ಲಿಕೆ: ಈ ಹಿಂದೆ ಅ.21ಕ್ಕೆ ನಿಗದಿಯಾಗಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದ ಉಪ ಚುನಾವಣೆಗೆ ಕೆ.ಎನ್‌.ಕೇಶವರೆಡ್ಡಿ ಎಂಬುವರು ಮಾತ್ರ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. ಆ ನಾಮಪತ್ರವನ್ನು ಮುಂದಿನ ಉಪ ಚುನಾವಣೆಗೆ ಮರು ನಿಗದಿಯಾಗಿರುವ ದಿನಾಂಕಕ್ಕೆ ಪರಿಗಣಿಸಲಾಗುವುದು. ಆದ್ದರಿಂದ ಮತ್ತೂಮ್ಮೆ ಅವರು ನಾಮಪತ್ರ ಸಲ್ಲಿಸಬೇಕಿಲ್ಲ ಎಂದು ತಿಳಿಸಿದರು.

Advertisement

ನ.11ರಿಂದ ನೀತಿ ಸಂಹಿತೆ ಜಾರಿ: ಕೇಂದ್ರ ಚುನಾವಣೆ ಆಯೋಗ ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ 15 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಮಾಡಿ ಮರು ದಿನಾಂಕ ನಿಗದಿಪಡಿಸಿದ್ದು, ಅದರಂತೆ ಜಿಲ್ಲೆಯಲ್ಲಿ ನ.11 ರಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಕಳೆದ ಬಾರಿ ಘೋಷಣೆಯಾಗಿ ಜಾರಿಯಲ್ಲಿದ್ದ ಉಪ ಚುನಾವಣೆ ನೀತಿ ಸಂಹಿತೆಯನ್ನು ಜಿಲ್ಲಾದ್ಯಂತ ಕಳೆದ ಸೆ.27ರ ಮಧ್ಯರಾತ್ರಿಯಿಂದಲೇ ತೆರವುಗೊಳಿಸಲಾಗಿದೆ ಎಂದು ಕ್ಷೇತ್ರದ ಚುನಾವಣಾ ಅಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿ ಎ.ಎನ್‌.ರಘುನಂದನ್‌ ತಿಳಿಸಿದರು.

10 ಚೆಕ್‌ ಪೋಸ್ಟ್‌ಗಳಲ್ಲಿ 7 ಲಕ್ಷ ನಗದು ವಶ: ಜಿಲ್ಲೆಯ ಉಪ ಚುನಾವಣೆಗೆ 10 ಚೆಕ್‌ ಪೋಸ್ಟ್‌ಗಳನ್ನು ತೆರೆಯಲಾಗಿತ್ತು. ಆ ಪೈಕಿ ಸೆ.27ರ ವರೆಗೂ ಜಿಲ್ಲೆಯಲ್ಲಿ ಒಟ್ಟು 7.05 ಲಕ್ಷ ರೂ. ಹಣ ವಶಪಡಿಸಿಕೊಳ್ಳಲಾಗಿತ್ತು. ಆದರೆ ವಶಕ್ಕೆ ಪಡೆದ ಹಣಕ್ಕೆ ಸೂಕ್ತ ದಾಖಲೆಗಳು ನೀಡಿದ ಹಿನ್ನೆಲೆಯಲ್ಲಿ ಹಣವನ್ನು ಸಂಬಂಧಪಟ್ಟವರಿಗೆ ವಾಪಸು ನೀಡಲಾಗಿದೆ.

ಆದರೆ 3 ಲಕ್ಷ ರೂ. ಮೌಲ್ಯದ ಬಟ್ಟೆಗಳನ್ನು ವಶಕ್ಕೆ ಪಡೆದಿದ್ದು, ಸೂಕ್ತ ದಾಖಲೆಗಳು ಸಲ್ಲಿಸದ ಕಾರಣ ಅವುಗಳನ್ನು ವಾಪಸು ನೀಡಿಲ್ಲ. ಉಳಿದಂತೆ ಚುನಾವಣಾ ನೀತಿ ಸಂಹಿತೆ ತಡೆಗೆ ಸ್ಥಾಪಿಸಿದ್ದ ಚೆಕ್‌ ಪೋಸ್ಟ್‌ನಲ್ಲಿ 101 ಕೆ.ಜಿ. ಶ್ರೀಗಂಧ ತುಂಡುಗಳು ತಪಾಸಣೆ ವೇಳೆ ಸಿಕ್ಕಿದ್ದು ಅವುಗಳನ್ನು ಆ ವ್ಯಾಪ್ತಿಯ ಪೊಲೀಸರಿಗೆ ಒಪ್ಪಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಎ.ಎನ್‌.ರಘುನಂದನ್‌ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next