Advertisement

ಆಸ್ತಿ ತೆರಿಗೆ ಪಾವತಿಸದಿದ್ದರೆ ಕ್ರಮ

09:38 PM Apr 03, 2019 | Team Udayavani |

ಚಿಂತಾಮಣಿ: ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವವರು ಒಂದು ವಾರ ಅಥವಾ 10 ದಿನಗಳೊಳಗೆ ಆಸ್ತಿ, ನೀರು ಮತ್ತು ಒಳಚರಂಡಿ ಅಳವಡಿಕೆ ತೆರಿಗೆ ಪಾವತಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತ ಹರೀಶ್‌ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.

Advertisement

ಜಿಲ್ಲಾಧಿಕಾರಿ ಆದೇಶದ ಮೇರೆಗೆ ನಗರದಲ್ಲಿ ಏ.1 ರಿಂದ 30 ರ ತನಕ 30 ದಿನಗಳ ಕಾಲ ಹಮ್ಮಿಕೊಂಡಿರುವ ಆಸ್ತಿ ತೆರಿಗೆ ವಸೂಲಾತಿ ಆಂದೋಲನಕ್ಕೆ ನಗರದ ಸಾರಿಗೆ ಘಟಕದ ಬಳಿ ಚಾಲನೆ ನೀಡಿ ಮಾತನಾಡಿದ ಅವರು, ಅನೇಕ ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾಲೀಕರು ಈ ಕೂಡಲೇ ತೆರಿಗೆ ಪಾವತಿಸಬೇಕು ಎಂದು ತಾಕೀತು ಮಾಡಿದ್ದಾರೆ.

ತೆರಿಗೆ ವಸೂಲಿಗೆ ರಾಜಿಯಿಲ್ಲ: ನಗರಸಭೆಯ ಆದಾಯದ ಮೂಲವಾಗಿರುವ ತೆರಿಗೆ ಹಣ ನಿವೇಶನ, ನೀರು, ವಾಣಿಜ್ಯ ಸಂಕೀರ್ಣಗಳು ಸೇರಿದಂತೆ ವಿವಿಧ ರೀತಿಯ ಎಲ್ಲಾ ತೆರಿಗೆಗಳನ್ನು ವಸೂಲಿ ಮಾಡಲಾಗುವುದು. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದರು.

ಪರವಾನಗಿ ರದ್ದು ಎಚ್ಚರಿಕೆ: ನಗರದ ಹಲವು ಅಂಗಡಿ, ಖಾಸಗಿ ಆಸ್ಪತ್ರೆ, ಶಾಲಾ ಕಟ್ಟಡಗಳು, ಹೋಟೆಲ್‌ ಸೇರಿದಂತೆ ಕಲ್ಯಾಣ ಮಂಟಪಗಳ ಮಾಲೀಕರು ವರ್ಷಗಳಿಂದ ಸಾವಿರಾರು ರೂ. ತೆರಿಗೆ ಬಾಕಿ ಹೊಂದಿದ್ದು, 30 ದಿನಗಳೊಳಗೆ ತೆರಿಗೆ ಪಾವತಿಸದಿದ್ದರೆ ಪರವಾನಗಿ ರದ್ದು ಮಾಡಲಾಗುವುದು ಎಂದು ಎಚ್ಚರಿಸಿದರು.

ತೆರಿಗೆ ವಸೂಲಾತಿಗಾಗಿಯೇ ಕಂದಾಯ ಸಪ್ತಾಹ ನಡೆಸುತ್ತಿದ್ದು, ಆಸ್ತಿ ತೆರಿಗೆ ಪಾವತಿಸದ ಆಸ್ತಿ ಮಾಲೀಕರ ವಿರುದ್ಧ ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಕಾಲಂ 142(3) ಹಾಗೂ 150 ರಂತೆ ಹಾಗೂ ನೀರಿನ ತೆರಿಗೆ ಪಾವತಿಸದಿದ್ದರೆ ಕರ್ನಾಟಕ ಪೌರಸಭೆಗಳ ಅಧಿನಿಯಮ ಮತ್ತು ಬಜೆಟ್‌ ನಿಯಮಗಳು 2006 ರ ಕಾಲಂ 59 ಮತ್ತು 60 ರಂತೆ ವಸೂಲಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Advertisement

ಯಾವುದೇ ಮುನ್ಸೂಚನೆ ಇಲ್ಲದೆ ನೀರಿನ ಸಂಪರ್ಕ ಸ್ಥಗಿತಗೊಳಿಸಲಾಗುವುದು ಮತ್ತು ಒಳಚರಂಡಿ ಸಂಪರ್ಕ ಹೊಂದಿರುವವರು ತೆರಿಗೆ ಪಾವತಿಸದಿದ್ದಲ್ಲಿ ಯುಜಿಡಿ ಸಂಪರ್ಕ ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಕಂದಾಯ ಅಧಿಕಾರಿ ಸಿ.ಕೆ.ಬಾಬು, ಸಿಬ್ಬಂದಿ ಗಿರೀಶ್‌, ಕರವಸೂಲಿಗಾರರಾದ ನರಸಿಂಹರೆಡ್ಡಿ, ಲಕ್ಷಿಕಾಂತರಾಜು, ಸೇರಿದಂತೆ ಇತರೆ ಸಿಬ್ಬಂದಿ ವರ್ಗದವರು ಇದ್ದರು.

5 ಹಂತಗಳಲ್ಲಿ ಆಂದೋಲನ: ಆಸ್ತಿ ತೆರಿಗೆ ವಸೂಲಾತಿ ಆಂದೋಲನವನ್ನು ಐದು ಹಂತಗಳಲ್ಲಿ ನಡೆಸುತ್ತಿದ್ದು ಮೊದಲನೇ ಹಂತ‌ ಏ.1 ರಿಂದ 5 ರವರೆಗೆ ವಾರ್ಡ್‌ ನಂ. 5,6,7, ಗಳಿಗೆ ಸಂಬಂಧಿಸಿದಂತೆ ನಗರದ ಸಾರಿಗೆ ಘಟಕದ ಮುಂಭಾಗ ಗಣಪತಿ ದೇವಾಲಯದ ಬಳಿ ನಡೆಸಲಾಗುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಎರಡನೇ ಹಂತವಾಗಿ ಏ.8 ರಿಂದ 12 ರ ವರೆಗೂ ವಾರ್ಡ್‌ ನಂ. 9,10,11, 12,13,14 ವಾರ್ಡ್‌ಗಳಿಗೆ ಸಂಬಂಧಪಟ್ಟಂತೆ ನಗರದ ಬ್ರಹ್ಮಚೈತನ್ಯ ಶ್ರೀರಾಮ ಕಲ್ಯಾಣ ಮಂದಿರ ಎನ್‌.ಆರ್‌ ಬಡಾವಣೆ. ಮೂರನೇ ಹಂತ ಏ.15 ರಿಂದ 20 ವರೆಗೆ ವಾರ್ಡ್‌ ನಂ 15, 16, 17, 18,19, 20ರಲ್ಲಿ ಎಂಜಿ ರಸ್ತೆಯ ಕೆ.ಎಸ್‌.ಸುಬ್ಬರಾಯಪ್ಪ ಹಾರ್ಡ್‌ವೇರ್‌ ಸ್ಟೋರ್ ಪಕ್ಕ ಮತ್ತು ನಾಲ್ಕನೇ ಹಂತ ಏ.22 ರಿಂದ 25ರ ವರೆಗೆ ವಾರ್ಡ್‌ ನಂ. 21,22,23,24, 29, 30 ಗಳಿಗೆ ಸಂಬಂಧಪಟ್ಟಂತೆ ಆಜಾದ್‌ ಚೌಡಕದ ಹರಿಹರೇಶ್ವರ ದೇವಾಲಯದ ಬಳಿ ನಡೆಯಲಿದೆ.

ಕೊನೆಯ ಹಂತ ಏ.26 ರಿಂದ 30ರ ವರೆಗೆ ವಾರ್ಡ್‌ ನಂ 1,2,3,4,25,26,27,28 ಗಳಿಗೆ ಸಂಬಂಧಿಸಿದಂತೆ ವಾಲ್ಮೀಕಿ ವೃತ್ತದ ಸಂಕಷ್ಟಹರ ಗಣಪತಿ ದೇವಾಲಯದ ಬಳಿ ಆಸ್ತಿ ತೆರಿಗೆ ವಸೂಲಾತಿ ಆಂದೋಲನ ನಡೆಯಲಿದ್ದು, ಸಾರ್ವಜನಿಕರು ಆಸ್ತಿ, ನೀರು ಮತ್ತು ಒಳಚರಂಡಿ ಸೇರಿದಂತೆ ಮತ್ತಿತರ ತೆರಿಗೆಗಳನ್ನು ಪಾವತಿಸಬೇಕೆಂದು ಕೋರಿದ್ದಾರೆ. ಏ.1 ರಿಂದ 30 ರೊಳಗೆ ಆಸ್ತಿ ತೆರಿಗೆ ಪಾವತಿಸಿದಲ್ಲಿ ಆಸ್ತಿ ತೆರಿಗೆಯ ಮೊತ್ತಕ್ಕೆ ಶೇ.5 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next