Advertisement

ಹೊಸ ಆಲೋಚನೆಗಳಿಂದ ಚಲನಶೀಲತೆ; ಪ್ರೊ.ಆರ್‌. ಶಿವಪ್ಪ

06:20 PM May 10, 2022 | Team Udayavani |

ಮೈಸೂರು: ಹೊಸ ಆಲೋಚನೆಗಳಿದ್ದಲ್ಲಿ ಮಾತ್ರ ಬದುಕಿನಲ್ಲಿ ಚಲನಶೀಲತೆ ಕಾಣಲು ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾಲಯ ಕುಲಸಚಿವ ಪ್ರೊ.ಆರ್‌. ಶಿವಪ್ಪ ಅಭಿಪ್ರಾಯಪಟ್ಟರು.

Advertisement

ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್‌ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆದ ಸ್ನಾತಕೋತ್ತರ ವಿಭಾಗದ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಕಾಲೇಜಿನ ದಿನಗಳು ಅಮೌಲ್ಯವಾದವು. ಮೌಲ್ಯಯುತವಾದ ಶಿಕ್ಷಣವನ್ನು ಪಡೆಯುವುದರ ಜತೆಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿಯೂ ತೊಡಗಿಸಿಕೊಳ್ಳಬೇಕಾಗಿರುವುದು ಬಹಳ ಮುಖ್ಯ ಎಂದರು.

ಉತ್ತಮ ಗುರಿ, ಆತ್ಮವಿಶ್ವಾಸ ಇರಬೇಕು: ಭಾರತದಲ್ಲಿ ಶೇ.3ರಷ್ಟು ಮಾತ್ರ ಯುವ ಸಮುದಾಯ ಸ್ನಾತಕೋತ್ತರ ಶಿಕ್ಷಣದಲ್ಲಿದ್ದಾರೆ. ಇದರಲ್ಲಿ ನೀವು ಈಗ ಭಾಗಿಯಾಗಿರುವುದು ಸಂತೋಷದ ಸಂಗತಿ. ಈ ಹಂತದಲ್ಲಿಯೇ ವಿದ್ಯಾರ್ಥಿಗಳೆಲ್ಲರೂ ದೊಡ್ಡ ಕನಸನ್ನು ಕಂಡು, ಗುರು ಹಿರಿಯರು ತಂದೆ ತಾಯಿ ಮತ್ತು ಸಮಾಜ ಮೆಚ್ಚುವಂತೆ ಬೆಳೆಯಬೇಕು.

ಇಂದಿನ ಸಮಾಜದಲ್ಲಿ ಅವರವರ ಸವಾಲು ಸಮಸ್ಯೆಗಳನ್ನು ಅವರವರೇ ಎದುರಿಸಬೇಕಾದ ಅನಿವಾರ್ಯತೆ ಇದೆ. ಇದನ್ನು ಎದುರಿಸಲು ವಿದ್ಯಾರ್ಥಿಗಳಲ್ಲಿ ಛಲ, ಶ್ರಮ, ಉತ್ತಮ ಗುರಿ,  ಆತ್ಮವಿಶ್ವಾಸ ಇರಬೇಕು ಎಂದು ಹೇಳಿದರು.

ಹಿರಿಯರು ನಮಗೆ ದಾರಿದೀಪ: ನಮ್ಮ ಹಿರಿಯರು ಬದುಕಿನ ಹಲವು ಮೌಲ್ಯ ಪರಂಪರೆಯನ್ನು ಕಟ್ಟಿ, ನೋವು ನಲಿವುಗಳ ಬಗ್ಗೆ ತಿಳಿಸಿ ನಮಗೆ
ದಾರಿದೀಪವಾಗಿದ್ದಾರೆ. ಇನ್ನು ಮುಂದೆ ಇದನ್ನು ಬೆಳೆಸುವ ಜವಾಬ್ದಾರಿಯನ್ನು ನಾವು ಅರಿಯಬೇಕು. ಈ ನಿಟ್ಟಿನಲ್ಲಿ ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆಗಳು ಭಾರತೀಯ ಶಿಕ್ಷಣ ಮತ್ತು ಮೌಲ್ಯ ಪರಂಪರೆಯನ್ನು ಜಾಗೃತವಾಗಿ ಬೆಳೆಸುತ್ತಿವೆ ಎಂದರು.

Advertisement

ಸಾಂಸ್ಕೃತಿಕ ಆಯಾಮವೂ ಅತ್ಯಗತ್ಯ: ಮಹಾರಾಣಿ ವಾಣಿಜ್ಯ ಕಾಲೇಜಿನ ಕನ್ನಡ ಅಧ್ಯಾಪಕ ಮೈಸೂರು ಕೃಷ್ಣಮೂರ್ತಿ ಮಾತನಾಡಿ, ಶಿಕ್ಷಣಕ್ಕೆ ಔದ್ಯೋಗಿಕ ಮತ್ತು ಔದ್ಯಮಿಕ ಆಯಾಮಗಳು ಇರುವಂತೆ ವಿದ್ಯಾರ್ಥಿಗಳಲ್ಲಿ ಗೆಲುವು, ಚೈತನ್ಯ, ಆತ್ಮವಿಶ್ವಾಸ, ಜೀವಪರ ಕಾಳಜಿ ಮತ್ತು ಆಶಾದಾಯಕ ಬದುಕನ್ನು ಕಾಣಲು ಸಾಂಸ್ಕೃತಿಕ ಆಯಾಮವೂ ಅತ್ಯಗತ್ಯ. ಸಾಂಸ್ಕೃತಿಕ ಚಟುವಟಿಕೆ ಮತ್ತು ಕಲೆ ವಿದ್ಯಾರ್ಥಿಗಳಲ್ಲಿ ಶಕ್ತಿ ತುಂಬುವುದರಲ್ಲಿ ವಿಶೇಷ ಪಾತ್ರವಹಿಸಿವೆ.

ಇದನ್ನು ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಸಮಾನವಾಗಿ ಕೊಡಬೇಕು. ಮನುಷ್ಯನನ್ನು ನಿರಹಂಕಾರದಿಂದ ಬದುಕುವಂತೆ ಮಾಡುವುದು ಶಿಕ್ಷಣದ ಕೆಲಸ. ಅದಕ್ಕೆ ಪೂರಕವಾದದ್ದು ಕಲೆ. ಈ ಕಲೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಯುವಂತೆ ಶಿಕ್ಷಣ ಸಂಸ್ಥೆಗಳು ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜೆಎಸ್‌ಎಸ್‌ ಕಾಲೇಜು ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಆದ್ಯತೆ ನೀಡುತ್ತಾ ಬಂದಿದೆ ಎಂದು ತಿಳಿಸಿದರು.ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಪ್ರಾಂಶುಪಾಲ ಪ್ರೊ. ಎಂ.ಪಿ.ವಿಜಯೇಂದ್ರ ಕುಮಾರ್‌, ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಡಾ.ಎಂ.ಪಿ. ಸೋಮಶೇಖರ್‌, ಕ್ರೀಡಾ ವೇದಿಕೆಯ ಸಂಚಾಲಕ ಎಂ.ಕಾರ್ತಿಕ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next