ಉಡುಪಿ: ಶ್ರೀ ಕೃಷ್ಣಾಪುರ ಪರ್ಯಾಯೋತ್ಸವ ಪ್ರಯುಕ್ತ ನಗರಕ್ಕೆ ಹೊರ ಜಿಲ್ಲೆ, ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ನಗರಸಭೆ ಮೂಲ ಸೌಕರ್ಯಗಳನ್ನು ಸಿದ್ಧಪಡಿಸಿದೆ.
ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಭಕ್ತರು, ಪ್ರವಾಸಿಗರ ಅನುಕೂಲಕ್ಕಾಗಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಮೊಬೈಲ್ ಶೌಚಾಲಯವನ್ನು ಅಲ್ಲಲ್ಲಿ ಇರಿಸಲಾಗಿದೆ.
ಗೋವಿಂದ ಕಲ್ಯಾಣ ಮಂಟಪ ಪಾರ್ಕ್ ಬಳಿ, ಕಿನ್ನಿಮುಲ್ಕಿ ದಾನ್ರೊ ಫರ್ನಿಚರ್, ತ್ರಿವೇಣಿ ಸರ್ಕಲ್ ಅಂಚೆ ಕಚೇರಿ ಸಮೀಪ, ಚಿತ್ತರಂಜನ್ ಸರ್ಕಲ್, ಕಲ್ಸಂಕ ಜಂಕ್ಷನ್‌ನಲ್ಲಿ ಸಿಂಗಲ್‌ಸೀಟ್‌ನ ಮೊಬೈಲ್ ಶೌಚಾಲಯ ಮತ್ತು 4 ಸೀಟರ್‌ನ ಎರಡು ಶೌಚಾಲಯವನ್ನು ಪಾಕಶಾಲೆ ಮತ್ತು ವಿದ್ಯೋದಯ ಶಾಲೆ ಬಳಿ ಇರಿಸಲಾಗಿದೆ.
ಶೌಚಾಲಯದಲ್ಲಿ ನೀರಿನ ಸೌಕರ್ಯವೂ ಇದೆ. ಪ್ರವಾಸಿಗರು, ಭಕ್ತರು ಸ್ವಚ್ಛತೆ ಗಮನದಲ್ಲಿರಿಸಿಕೊಂಡು ಮುಕ್ತವಾಗಿ ಬಳಕೆ ಮಾಡಬಹುದು.
100 ಮಂದಿ ಪೌರಕಾರ್ಮಿಕರ ತಂಡ ದಿಂದ ಎರಡು ಪಾಳಿಯಲ್ಲಿ ನಗರದ ಸ್ವಚ್ಛತಾ ಕಾರ್ಯ ಸಂಪೂರ್ಣ ಗೊಂಡಿದೆ. ಪರ್ಯಾಯ ಉತ್ಸವ ವೇಳೆ ಪೌರ ಕಾರ್ಮಿಕರ ತಂಡ ರಥಬೀದಿ ಮತ್ತು ರಥಬೀದಿ ಸಂಪರ್ಕಿಸುವ ರಸ್ತೆಗಳು, ಪರ್ಯಾಯ ಮೆರವಣಿಗೆ ರಸ್ತೆಯಲ್ಲಿ ಸ್ವಚ್ಛತ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ಪರ್ಯಾಯ ಉತ್ಸವದಲ್ಲಿ ಕೋವಿಡ್ ಜಾಗೃತಿ ಮೂಡಿಸುವ ಸಲುವಾಗಿ ನಗರಸಭೆ ಮಾಹಿತಿ ಕೇಂದ್ರವನ್ನು ತೆರೆಯಲಿದೆ.