Advertisement

ಮೊಬೈಲ್‌ ವೇದನೆ ಗಿಡಗಳ ಸಂವೇದನೆ

12:37 PM Dec 04, 2017 | Team Udayavani |

ಬೆಂಗಳೂರು: ಮೊಬೈಲ್‌ ಜತೆಗಿನ ಮಾತು ವೇದನೆ ಅನಿಸಿದರೆ, ಗಿಡಗಳ ಜತೆಗಿನ ಮಾತು ಸಂವೇದನೆ ಅನಿಸಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಅನಂತ್‌ಕುಮಾರ್‌ ಬಣ್ಣಿಸಿದರು. ಅದಮ್ಯ ಚೇತನ ಟ್ರಸ್ಟ್‌, 101ನೇ ಹಸಿರು ಭಾನುವಾರದ ಅಂಗವಾಗಿ ಭಾನುವಾರ ನಗರದ ನಾಗರಭಾವಿಯ ಐಎಸ್‌ಇಸಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸಸ್ಯಾಗ್ರಹ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಅವರು ಮಾತನಾಡಿದರು.

Advertisement

ಇತ್ತೀಚಿನ ದಿನಗಳಲ್ಲಿ ನಮ್ಮ ಮಾತು ಮೊಬೈಲ್‌ ಜೊತೆಗಷ್ಟೇ ಅನ್ನುವಂತಾಗಿದೆ.ಇದನ್ನು ಬಿಟ್ಟು ಗಿಡಗಳೊಂದಿಗೆ ನಾವು ಮಾತನಾಡಬೇಕು ಆಗ ಮೊಬೈಲ್‌ ಮಾತು ವೇದನೆ ಅನಿಸಿ, ಗಿಡಗಳ ಮಾತು ಸಂವೇದನೆ ಎನಿಸಲಿದೆ. ಅದಮ್ಯ ಚೇತನ ಟ್ರಸ್ಟ್‌, ಬೆಂಗಳೂರನ್ನು ಹಸಿರಾಗಿಸುವ ಪಣ ತೊಟ್ಟಿದ್ದು, ಈ ನಿಟ್ಟಿನಲ್ಲಿ ಯಶಸ್ವಿ ಹೆಜ್ಜೆ ಇರಿಸಿದೆ. ಈಗಗಾಲೇ ನಗರದ ಹಲವೆಡೆ ಸಸ್ಯಾಗ್ರಹ ಕಾರ್ಯಕ್ರಮ ನಡೆದಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ.

ಮುಂದೆ ಇದು ಜನಾಂದೋಲನವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು. ಬೆಂಗಳೂರಿಗರಿಗೆ ಶುದ್ಧವಾದ ಗಾಳಿ ಸಿಗಬೇಕು ಎಂಬ ಆಶಯದೊಂದಿಗೆ ಸಸ್ಯಾಗ್ರಹ ನಡೆಸುತ್ತಿದ್ದು, ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಪ್ರಗತಿ ಪರ ಚಿಂತಕರು, ಸಿನಿಮಾ ತಾರೆಯರು ಮತ್ತು ವೈದ್ಯರು ಕಾರ್ಯಕ್ರಮದೊಂದಿಗೆ ಕೈ ಜೋಡಿಸಿದ್ದಾರೆ ಎಂದರು.

ಅದ್ಯಮ ಚೇತನ ಸಂಸ್ಥೆ ಅಧ್ಯಕ್ಷೆ ತೇಜಸ್ವಿನಿ ಅನಂತ್‌ ಕುಮಾರ್‌ ಮಾತನಾಡಿ, ಹೀಗೇ ಕಾಡು ನಾಶ ಮಾಡುತ್ತಾ ಹೋದರೆ ನಮ್ಮ ಮುಂದಿನ ಪೀಳಿಗೆ ಶುದ್ಧ ಗಾಳಿಗಾಗಿ ಪರಿತಪಿಸುವ ಸ್ಥಿತಿ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಭವಿಷ್ಯದ ಬಗ್ಗೆ ಎಚ್ಚೆತ್ತುಕೊಂಡು ಹಸಿರು ಸಂರಕ್ಷಣೆಯಲ್ಲಿ ತೊಡಗುವಂತೆ ಮನವಿ ಮಾಡಿದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಮತ್ತು ವೈದ್ಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next