ಬೆಂಗಳೂರು: ಎಂಟು ತಿಂಗಳ ಹಿಂದೆ ನಿಗೂಢವಾಗಿ ವೃದ್ಧೆಯೊಬ್ಬರು ನಾಪತ್ತೆಯಾಗಿದ್ದ ಪ್ರಕರಣವನ್ನು ಭೇದಿಸಿರುವ ಮಡಿವಾಳ ಠಾಣೆ ಪೊಲೀಸರು, ಚಿನ್ನಾಭರಣದ ಆಸೆಗೆ ವೃದ್ಧೆಯನ್ನು ಅಪಹರಿಸಿ ಕೊಲೆಗೈದಿದ್ದ ದಂಪತಿ ಸೇರಿ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಕ್ಯಾಬ್ ಚಾಲಕ
ತಿಪ್ಪೇಶ್ (30) ಆತನ ಪತ್ನಿ ರಕ್ಷಿತಾ, ಪ್ರಸನ್ನ, ಮಧುಸೂದನ್, ಮಾದೇಶ್, ಭಾಗ್ಯ ಬಂಧಿತರು.
ಕಳೆದ ವರ್ಷ ಅಕ್ಟೋಬರ್ 24ರಂದು ಹೇಮಾವತಿ ನಾಪತ್ತೆಯಾಗಿದ್ದರು. ಈ ಕುರಿತು ಅವರ ಪುತ್ರಿ ನೀಡಿದ ದೂರಿನ ಅನ್ವಯ ಪ್ರಕರಣದ ತನಿಖೆ ಚುರುಕುಗೊಳಿಸಿದ್ದ ಇನ್ಸ್‌ಪೆಕ್ಟರ್ ಬಿ.ಭರತ್ ನೇತೃತ್ವದ ತಂಡ, ಹೇಮಾವತಿ ಅವರು ಮೊಬೈಲ್ ಬಳಸುತ್ತಿದ್ದ ಬಗ್ಗೆ ದೊರೆತ ಸಣ್ಣ ಸುಳಿವು ಆಧರಿಸಿ ಕೊಲೆ ರಹಸ್ಯ ಬಯಲಿಗೆಳೆದಿದೆ. ಜತೆಗೆ, ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಮಂದಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮೊಬೈಲ್ ನೀಡಿತ್ತು ಸುಳಿವು: ಮೂರು ತಿಂಗಳ ಹಿಂದೆ ಹೇಮಾವತಿ ಅವರು ಬಳಸುತ್ತಿದ್ದ ಮೊಬೈಲ್ ಅನ್ನು ಚಾಮರಾಜನಗರದಲ್ಲಿ ವ್ಯಕ್ತಿಯೊಬ್ಬ ಬಳಸುತ್ತಿರುವುದು ತನಿಖಾ ತಂಡಕ್ಕೆ ಗೊತ್ತಾಗಿತ್ತು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಿಪ್ಪೇಶ್ ಮೂಲಕ ಮೊಬೈಲ್ ಸಿಕ್ಕಿರುವುದು ಗೊತ್ತಾಗಿತ್ತು. ಬಳಿಕ ತಿಪ್ಪೇಶ್ ಸೇರಿ ಇತರೆ ಆರೋಪಿಗಳನ್ನು ಬಂಧಿಸಿದಾಗ ಹೇಮಾವತಿ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಜ್ಯೂಸ್‌ನಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಲೆ ಹೇಮಾವತಿ, ಸಾಯಿಬಾಬಾ ಆರಾಧಕರು ಎಂದು ಅರಿತಿದ್ದ ತಿಪ್ಪೇಶ್, ನಗರದಲ್ಲಿ ಅತಿ ದೊಡ್ಡ ಸಾಯಿಬಾಬ ದೇವಾಲಯವಿದ್ದು, ಅಲ್ಲಿಗೆ ಕರೆದೊಯ್ಯುವುದಾಗಿ ಹೇಳಿದ್ದ. ಆತನ ಮಾತು ನಂಬಿದ್ದ ಹೇಮಾವತಿ, ಅ.24ರಂದು ಕಾರಿನಲ್ಲಿ ಹೋಗುವಾಗ ಆರೋಪಿ, ಜ್ಯೂಸ್‌ನಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಟ್ಟಿದ್ದ. ಅದನ್ನು ಕುಡಿದ ಹೇಮಾವತಿ ಮೃತಪಪಟ್ಟಿದ್ದರು. ನಂತರ ಅವರ ಮೈಮೇಲಿದ್ದ ಚಿನ್ನಾಭರಣ ದೋಚಿದ್ದ ಆರೋಪಿ, ತನ್ನ ಪತ್ನಿ ಹಾಗೂ ಇತರರ ನೆರವಿನಿಂದ ಶವವನ್ನು ನೊಣವಿನಕೆರೆ ನಾಲೆಯಲ್ಲಿ ಎಸೆದಿದ್ದ. ಕೆಲ ದಿನಗಳ ಬಳಿಕ ಶವ 33 ಕಿ.ಮೀ ಕೊಚ್ಚಿಕೊಂಡು ಹೋಗಿದ್ದು, ಅಲ್ಲಿನ ಪೊಲೀಸರು ಅಸಹಜ ಸಾವು ಕೇಸ್ ದಾಖಲಿಸಿಕೊಂಡಿದ್ದರು.