Advertisement
ಭಾರತದಲ್ಲಿ ಆರ್ಥಿಕತೆ ಮಂದಗತಿಯಲ್ಲಿದೆ ಎಂಬ ಈ ಸನ್ನಿವೇಶದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆ ಮಾತ್ರ ನಾಗಾಲೋಟದಿಂದ ಸಾಗಿದೆ! ಈ ವರ್ಷದ ಜುಲೈನಿಂದ ಸೆಪ್ಟೆಂಬರ್‌ವರೆಗಿನ ತ್ತೈಮಾಸಿಕದಲ್ಲಿ ಹಿಂದೆಂದಿಗಿಂತ ಅಧಿಕ ಸ್ಮಾರ್ಟ್ ಫೋನ್‌ಗಳು ಭಾರತದಲ್ಲಿ ಮಾರಾಟವಾಗಿವೆ! ಈ ಮೂರು ತಿಂಗಳ ಅವಧಿಯಲ್ಲಿ ಮಾರಾಟವಾಗಿರುವ ಮೊಬೈಲ್ ಫೋನ್‌ಗಳ ಸಂಖ್ಯೆ 46.6 ಮಿಲಿಯನ್ (ದಶಲಕ್ಷ)! ಅಂದರೆ 4.66 ಕೋಟಿ ಸ್ಮಾರ್ಟ್‌ಫೋನ್‌ಗಳನ್ನು ಭಾರತೀಯರು ಈ ಮೂರು ತಿಂಗಳಲ್ಲಿ ಖರೀದಿಸಿದ್ದಾರೆ! ಇದು ಕಳೆದ ವರ್ಷ ಇದೇ ತ್ತೈಮಾಸಿಕದಲ್ಲಿ ಮಾರಾಟವಾಗಿದ್ದ ಸ್ಮಾರ್ಟ್‌ಫೋನ್‌ಗಳಿಗಿಂತ ಶೇ. 9.3 ರಷ್ಟು ಹೆಚ್ಚಿದೆ. ಇದು ದಾಖಲೆ ಪ್ರಮಾಣದ ಮಾರಾಟವಾಗಿದೆ.
ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಚೀನಾದ ಶಿಯೋಮಿ ಕಂಪೆನಿ ತನ್ನ ಮೊದಲ ಸ್ಥಾನವನ್ನು ಕಾಪಾಡಿಕೊಂಡಿದೆ. ಶೇ. 27.1ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಈ ತ್ತೈಮಾಸಿಕದಲ್ಲಿ ಅದು ಕಳೆದ ಅವಧಿಗಿಂತ ಶೇ. 8.5ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಶಿಯೋಮಿ ಈ ತ್ತೈಮಾಸಿಕದಲ್ಲಿ 12.6 ದಶಲಕ್ಷ (1.26 ಕೋಟಿ) ಫೋನ್‌ಗಳನ್ನು ಮಾರಾಟ ಮಾಡಿದೆ.
Related Articles
Advertisement
ಮೂರನೇ ಸ್ಥಾನದಲ್ಲಿ ಚೀನಾದ ವಿವೋ ಕಂಪೆನಿಯಿದ್ದು, ಜುಲೈಯಿಂದ ಸೆಪ್ಟೆಂಬರ್‌ವರೆಗಿನ ತ್ತೈಮಾಸಿಕದಲ್ಲಿ 71 ಲಕ್ಷ ಫೋನ್‌ಗಳನ್ನು ಬಿಕರಿ ಮಾಡಿದೆ. ಅದರ ಮಾರುಕಟ್ಟೆ ಪಾಲು ಶೇ. 15.2 ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ ವಿವೋ 45 ಲಕ್ಷ ಫೋನ್‌ಗಳನ್ನು ಮಾರಿತ್ತು. ಈ ವರ್ಷ ಅದರ ಬೆಳವಣಿಗೆ ನಾಗಾಲೋಟದಿಂದ ಸಾಗಿದ್ದು, ಶೇ. 58.7ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷದ ತ್ತೈಮಾಸಿಕದಲ್ಲಿ ಅದರ ಮಾರುಕಟ್ಟೆ ಪಾಲು 10.5ರಷ್ಟಿತ್ತು.
ಅತಿ ಕಡಿಮೆ ಅವಧಿಯಲ್ಲಿ ಯಶಸ್ಸು ಕಂಡ ರಿಯಲ್ ಮಿ ಕಂಪೆನಿ ನಾಲ್ಕನೇ ಸ್ಥಾನ ಗಳಿಸುವ ಮೂಲಕ ಟಾಪ್ 5ರಲ್ಲಿರುವುದು ವಿಶೇಷ. ಈ ತ್ತೈಮಾಸಿಕದಲ್ಲಿ ಅದು 67 ಲಕ್ಷ ಫೋನ್‌ಗಳನ್ನು ಭಾರತದಲ್ಲಿ ಮಾರಾಟ ಮಾಡಿದೆ. ಅದರ ಮಾರುಕಟ್ಟೆ ಪಾಲು ಶೇ. 14.3. 2018ರ ಇದೇ ತ್ತೈಮಾಸಿಕದಲ್ಲಿ ಅದು ಭಾರತದಲ್ಲಿ ಕೇವಲ 13 ಲಕ್ಷ ಫೋನ್‌ಗಳನ್ನು ಮಾರಿತ್ತು. ಕೇವಲ ಶೇ. 3.1ರಷ್ಟು ಮಾರುಕಟ್ಟೆ ಪಾಲು ಇತ್ತು. ವಿವೋ ಕಳೆದ ವರ್ಷಕ್ಕಿಂತ ಈ ಅವಧಿಯಲ್ಲಿ ಶೇ. 401 ರಷ್ಟು ಬೆಳವಣಿಗೆ ದಾಖಲಿಸಿರುವುದು ವಿಶೇಷ.
ಐದನೇ ಸ್ಥಾನ ಗಳಿಸಿರುವ ಒಪ್ಪೋ 55 ಲಕ್ಷ ಫೋನ್‌ಗಳನ್ನು ಮಾರಾಟ ಮಾಡಿದೆ. ಭಾರತದಲ್ಲಿ ಅದರ ಮಾರುಕಟ್ಟೆ ಪಾಲು ಶೇ. 11.8. ಕಳೆದ ವರ್ಷ ಇದೇ ಅವಧಿಯಲ್ಲಿ 29 ಲಕ್ಷ ಫೋನ್‌ಗಳನ್ನು ಒಪ್ಪೋ ಮಾರಾಟ ಮಾಡಿತ್ತು. ಶೇ. 6.7 ರಷ್ಟು ಮಾರುಕಟ್ಟೆ ಪಾಲು ಹೊಂದಿತ್ತು. ಕಳೆದ ಅವಧಿಗಿಂತ ಶೇ. 92.3ರಷ್ಟು ಬೆಳವಣಿಗೆಯನ್ನು ಕಂಪೆನಿ ದಾಖಲಿಸಿದೆ.
ಮೇಲಿನ ಐದು ಕಂಪೆನಿಗಳನ್ನು ಹೊರತುಪಡಿಸಿ, ಇನ್ನುಳಿದ ಕಂಪೆನಿಗಳು ಭಾರತದಲ್ಲಿ ಒಟ್ಟಾರೆಯಾಗಿ 59 ಲಕ್ಷ ಫೋನ್‌ಗಳನ್ನು ಮಾರಾಟ ಮಾಡಿವೆ. ಶೇ. 12.7 ರಷ್ಟು ಮಾರುಕಟ್ಟೆ ಪಾಲು ಹೊಂದಿವೆ. ಕಳೆದ ವರ್ಷ ಇತರ ಕಂಪೆನಿಗಳು ಶೇ. 29.8 ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದವು. 1.26 ಕೋಟಿ ಫೋನ್‌ಗಳನ್ನು ಮಾರಿದ್ದವು. ಈ ವರ್ಷ ಇತರ ಕಂಪೆನಿಗಳು ಶೇ. 53.6ರಷ್ಟು ಕುಸಿತವನ್ನು ಮಾರಾಟದಲ್ಲಿ ಕಂಡಿವೆ.
ಒಂದೇ ಒಡೆತನದ ಕಂಪೆನಿಗಳು!ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಶಿಯೋಮಿ, ಸ್ಯಾಮ್‌ಸಂಗ್ ಹೊರತುಪಡಿಸಿ ಐದನೇ ರ್‍ಯಾಂಕಿಂಗ್‌ನೊಳಗೆ ಇರುವ ವಿವೋ, ಒಪ್ಪೋ, ರಿಯಲ್‌ಮಿ ಕಂಪೆನಿಗಳ ಒಡೆತನ ಒಂದೇ ಕಂಪೆನಿಯದ್ದು! ಮೂರೂ ಕಂಪೆನಿಗಳ ಮಾಲೀಕತ್ವವನ್ನು ಚೀನಾದ ಬಿಬಿಕೆ ಎಲೆಕ್ಟ್ರಾನಿಕ್ಸ್ ಎಂಬ ಕಂಪೆನಿ ಹೊಂದಿದೆ. ಭಾರತದಲ್ಲಿ ಮೊದಲ ಸ್ಥಾನದಲ್ಲಿರುವ ಶಿಯೋಮಿ ಶೇ. 27.1 ರಷ್ಟು ಹಾಗೂ ಎರಡನೇ ಸ್ಥಾನದಲ್ಲಿರುವ ಸ್ಯಾಮ್‌ಸಂಗ್ ಶೇ. 18.9ರಷ್ಟು ಮಾರುಕಟ್ಟೆ ಪಾಲು ಹೊಂದಿವೆ ನಿಜ. ಆದರೆ ವಿವೋ, ಒಪ್ಪೋ, ರಿಯಲ್‌ಮಿಗಳ ಮಾರುಕಟ್ಟೆ ಪಾಲನ್ನು ಒಟ್ಟು ಕೂಡಿದರೆ, ಬಿಬಿಕೆ ಎಲೆಕ್ಟ್ರಾನಿಕ್ಸ್ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಮೂರೂ ಬ್ರಾಂಡ್‌ಗಳ ಮಾರುಕಟ್ಟೆ ಪಾಲನ್ನು ಕೂಡಿದರೆ ಶೇ. 41.3 ರಷ್ಟಾಗುತ್ತದೆ. ಅಲ್ಲಿಗೆ ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಹೆಚ್ಚು ಕಡಿಮೆ ಅರ್ಧದಷ್ಟು ಪಾಲನ್ನು ಚೀನಾದ ಬಿಬಿಕೆ ಎಲೆಕ್ಟ್ರಾನಿಕ್ಸ್ ಹೊಂದಿದೆ! ಇನ್ನೊಂದು ಪ್ರಮುಖ ಅಂಶವೆಂದರೆ ಭಾರತದ ಪ್ರೀಮಿಯಂ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಪ್ರಮುಖ ಕಂಪೆನಿಯಾದ ಒನ್ ಪ್ಲಸ್ ಕಂಪೆನಿಯ ಒಡೆತನ ಸಹ ಬಿಬಿಕೆ ಎಲೆಕ್ಟ್ರಾನಿಕ್ಸ್‌ನದ್ದೇ! -ಕೆ.ಎಸ್. ಬನಶಂಕರ ಆರಾಧ್ಯ