ದಾವಣಗೆರೆ: ಆನ್‌ಲೈನ್ ಗೇಮ್ ಗೀಳಿಗೆ ಬಿದ್ದ ಶಾಲಾ ಮಕ್ಕಳು ಮನೆಯಿಂದ ಸಾವಿರಾರು ರೂ. ಕದ್ದಿರುವುದು ಬೆಳಕಿಗೆ ಬಂದಿದೆ.
ಇದರಲ್ಲಿ 14 ವರ್ಷದೊಳಗಿನ ಮಕ್ಕಳೇ ಹೆಚ್ಚಾಗಿದ್ದಾರೆ. ಮೊಬೈಲ್‌ನಲ್ಲಿ ವಿವಿಧ ಆನ್‌ಲೈನ್ ಗೇಮ್ ಆ್ಯಪ್‌ಗ್ಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳುವ ಮಕ್ಕಳು, ಆಟ ಕುತೂಹಲದ ಹಂತ ತಲುಪಿದಾಗ ಸಾವಿರಾರು ರೂ. ಪಾವತಿಸಿ ರೀಚಾರ್ಜ್ ಮಾಡಿಕೊಂಡು ಆಟ ಮುಂದುವರಿಸುತ್ತಿದ್ದಾರೆ. ಹೀಗೆ ಆಟ ಮುಂದುವರಿಸುವಾಗ ಬೇಕಾಗುವ ರಿಡೀಮ್ ಕೋಡ್‌ಗಾಗಿ 80ರಿಂದ 4 ಸಾ.ರೂ.ವರೆಗೂ ಪಾವತಿಸಬೇಕಾಗುತ್ತದೆ.
ಕೆಲವು ಮಕ್ಕಳು ಪಾಲಕರ ಮೊಬೈಲ್‌ನಲ್ಲಿರುವ ಗೂಗಲ್ ಪೇ, ಫೋನ್ ಪೇ ಮೂಲಕವೇ ರೀಚಾರ್ಜ್ ಮಾಡುತ್ತಿದ್ದರೆ, ಮತ್ತೆ ಕೆಲವರು ಮನೆಯಿಂದಲೇ ಹಣ ಕದ್ದು ಗೇಮ್ ಸೆಂಟರ್ ಹಾಗೂ ಇಂಟರ್‌ನೆಟ್ ಸೆಂಟರ್‌ಗಳಲ್ಲಿ ರೀಚಾರ್ಜ್ ಮಾಡುತ್ತಿದ್ದಾರೆ.
25 ಸಾ.ರೂ. ರೀಚಾರ್ಜ್! :
ನಗರದ ವಿವಿಧ ಭಾಗದ 7 ಬಾಲಕರು ಈ ರೀತಿ ಗೇಮ್‌ಗೆ ಹಣ ತುಂಬಿದ್ದಾರೆ. ಓರ್ವನು ತಂದೆಯ ಮೊಬೈಲ್ ಬ್ಯಾಂಕಿಂಗ್ ಮೂಲಕವೇ 25 ಸಾ. ರೂ. ರಿಚಾರ್ಜ್ ಮಾಡಿಸಿ ದ್ದಾನೆ. ಹಣ ಕಳೆದುಕೊಂಡಿರುವ ಬಗ್ಗೆ ತಂದೆ ಬ್ಯಾಂಕ್‌ನಲ್ಲಿ ವಿಚಾರಿಸಿದಾಗಲೇ ಮಗನ ಆನ್‌ಲೈನ್ ಗೇಮ್ ಹುಚ್ಚು ಬೆಳಕಿಗೆ ಬಂದುದು. 8 ವರ್ಷದ ಬಾಲಕನೋರ್ವ ತನ್ನಲ್ಲಿ ಮೊಬೈಲ್ ಇಲ್ಲದಿದ್ದರೂ ಸಹಪಾಠಿಗಳ ಮಾತಿಗೆ ಕಟ್ಟುಬಿದ್ದು ಮನೆಯಿಂದ 8.5 ಸಾ. ರೂ. ಕದ್ದಿದ್ದಾನೆ. ಮಕ್ಕಳು ವ್ಯಯಿಸಿದ ಮೊತ್ತ ಒಟ್ಟು 45,700 ರೂ. ಆಗಿದೆ.