ದಾವಣಗೆರೆ: ಮಹಿಳೆಯನ್ನು ಆಕೆಯ ಪತಿ ಹಾಗೂ ಸಂಬಂಧಿಕರು ಒತ್ತಾಯ ಪೂರ್ವಕವಾಗಿ ಕಾರಿನಲ್ಲಿ ಕರೆದುಕೊಂಡು ಹೋಗಿರುವ ಘಟನೆ ಹೊನ್ನಾಳಿ ತಾಲೂಕಿನ ದಿಡಗೂರು ಗ್ರಾಮದಲ್ಲಿ ರವಿವಾರ (ಜ.12) ನಡೆದಿದೆ.
ದಿಡಗೂರು ಗ್ರಾಮದ ಅನುಂದ್ರತಿ ಎಂಬುವವರನ್ನು ಅವರ ಪತಿ ಕಾರ್ತಿಕ್ ಹಾಗೂ ಆತನ ಸಂಬಂಧಿಗಳು ಮನೆಯಿಂದ ಹೊರಗೆಳೆದು ಕಾರಿನೊಳಗೆ ನೂಕಿ ಕರೆದುಕೊಂಡು ಹೊಗಿದ್ದಾರೆ ಎಂದು ಅನುಂದ್ರತಿ ಸಂಬಂಧಿ ಭಾನುಮತಿ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ದಿಡಗೂರು ಗ್ರಾಮದ ಭಾನುಮತಿ ಸಹೋದರ ಅಕ್ಷಯ ಅವರ ಮಗಳಾದ ಅನುಂದ್ರತಿಯನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ನರಸಿಪುರ ಗ್ರಾಮದ ಕಾರ್ತಿಕ್ ಎಂಬುವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ನಾಲ್ಕು ವರ್ಷದ ಪುತ್ರನಿದ್ದು, ಇಬ್ಬರಿಗೂ ಹೊಂದಾಣಿಕೆ ಬಾರದ ಹಿನ್ನೆಲೆಯಲ್ಲಿ ತಾಯಿ, ಮಗುವನ್ನು ಹೊರ ಹಾಕಿದ್ದರಿಂದ ತವರು ಮನೆಯಾದ ದಿಡಗೂರು ಗ್ರಾಮಕ್ಕೆ ಬಂದು ವಾಸವಾಗಿದ್ದರು. ಕೆಲ ದಿನಗಳ ಹಿಂದೆ ಪತಿ ಕಾರ್ತಿಕ್ ಮಗನನ್ನು ಪುಸಲಾಯಿಸಿ ಕರೆದುಕೊಂಡು ಹೋಗಿದ್ದರು.
ಪತಿ ಕಾರ್ತಿಕ್, ಆತನ ತಮ್ಮ ಗಿರೀಶ್ ತಂಗಿ ಕಾತ್ಯಾಯಿನಿ ಮತ್ತು ತಂದೆ ಕೃಷ್ಣಸ್ವಾಮಿ ಏಕಾಎಕಿ ದಿಡಗೂರು ಗ್ರಾಮಕ್ಕೆ ಬಂದು ಪತ್ನಿ ಅನುಂದ್ರತಿಗೆ ಬೈಯ್ದು ಎಳೆದಾಡಿ ಬಲವಂತದಿಂದ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.
ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.