Advertisement

ಮೊಬೈಲ್‌, ಬೈಕ್‌ ಕಳ್ಳರು, ಡ್ರಗ್ಸ್‌ ಪೆಡ್ಲರ್‌ ಬಂಧನ

02:29 PM Aug 17, 2021 | Team Udayavani |

ಬೆಂಗಳೂರು: ಮಾದಕ ವಸ್ತು ಮಾರಾಟ, ಬೈಕ್‌, ಮೊಬೈಲ್‌ ಕಳವು ಮಾಡುತ್ತಿದ್ದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಪಶ್ಚಿಮ ವಿಭಾಗ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.

Advertisement

ಡ್ರಗ್ಸ್‌ ಪೆಡ್ಲರ್‌ ಬಂಧನ: ಉಪ್ಪಾರಪೇಟೆ ಪೊಲೀಸರ ಕಾರ್ಯಾಚರಣೆಯಲ್ಲಿ ಮಾದಕ ವಸ್ತು ಆಫೀಮು ಮಾರಾಟ ಮಾಡುತ್ತಿದ್ದ ಅರುಣಾಚಲ ಪ್ರದೇಶ ಮೂಲದ ಡ್ರಗ್ಸ್‌ ಪೆಡ್ಲರ್‌ನನ್ನು ಬಂಧಿಸಲಾಗಿದೆ. ಪ್ರಕಾಶ್‌ನಾಥ್‌ (27) ಬಂಧಿತ. ಆರೋಪಿಯಿಂದ 430 ಗ್ರಾಂ ತೂಕದ ಆಫೀಮು ವಶಕ್ಕೆ ಪಡೆಯಲಾಗಿದೆ.

ಆರೋಪಿ ಐದು ವರ್ಷಗಳ ಹಿಂದೆ ಅರುಣಾಚಲ ಪ್ರದೇಶದಿಂದ ಬೆಂಗಳೂರಿಗೆ ಬಂದು ಉಪ್ಪಾರಪೇಟೆ ಠಾಣಾ ವ್ಯಾಪ್ತಿಯ ಲಾಡ್ಜ್ವೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಜತೆಗೆ ರಾಜಸ್ತಾನ ಮೂಲದ ವ್ಯಕ್ತಿಯಿಂದ ಆಫೀಮು ತರಿಸಿಕೊಂಡು ಸಣ್ಣ-ಸಣ್ಣ ಪ್ಯಾಕೆಟ್‌ಗಳನ್ನಾಗಿ ಮಾಡಿಕೊಂಡು ರಾಜಸ್ತಾನ ಮೂಲದವರಿಗೆ ಮಾರಾಟ ಮಾಡುತ್ತಿದ್ದ. ಈ ಖಚಿತ ಮಾಹಿತಿ ಮೇರೆಗೆ ಆರೋಪಿ ಮೇಲೆ ದಾಳಿ ನಡೆಸಿ ಮಾಲು ಸಮೇತ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ:ಲಾಕ್‍ಡೌನ್‍ : ಗೋವಾದಲ್ಲಿ ಸಿಲುಕಿಕೊಂಡಿದ್ದಾರೆ 1200 ಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು

ಬೈಕ್‌ ಕಳ್ಳನ ಬಂಧನ: ಐಷಾರಾಮಿ ಜೀವನಕ್ಕಾಗಿ ಬೈಕ್‌ ಕಳವು ಮಾಡುತ್ತಿದ್ದ ಆರೋಪಿಯನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ವಿಜಯಕುಮಾರ್‌ ಅಲಿಯಾಸ್‌ ಮೇಕೆ(28) ಬಂಧಿತ. ಆತನಿಂದ ಒಂದು ಲಕ್ಷ ರೂ. ಮೌಲ್ಯದ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯ
ಲಾಗಿದೆ. ಆರೋಪಿ ಯಾವುದೇ ಕೆಲಸಕ್ಕೆ ಹೋಗದೆ ತನ್ನ ಮೋಜಿನ ಜೀವನಕ್ಕಾಗಿ ಮನೆ ಮುಂದೆ ನಿಂತಿದ್ದ ಬೈಕ್‌ ಕಳವು ಮಾಡುತ್ತಿದ್ದ. ಇತ್ತೀಚೆಗೆ ಕೆಂಗೇರಿ ಠಾಣಾ ವ್ಯಾಪ್ತಿಯ ಬೈಕ್‌ವೊಂದರ ಮೇಲೆ ಅನುಮಾನಾಸ್ಪದ ವಾಗಿ ಓಡಾಡುತ್ತಿರುವ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ
ಮೇರೆಗೆ ಆತನನ್ನು ಹಿಡಿದು ಪ್ರಶ್ನಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.

Advertisement

ಕದ್ದ ಬೈಕ್‌ನಲ್ಲಿ ಮೊಬೈಲ್‌ ಕಳ್ಳತನ: ಮೋಜಿನ ಜೀವನಕ್ಕಾಗಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಅದೇ ವಾಹನಗಳಲ್ಲಿ ಮೊಬೈಲ್‌ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರೋಪಿಗಳಿಂದ ಮೂರು ಲಕ್ಷ ರೂ.ಮೌಲ್ಯದ 13 ಮೊಬೈಲ್‌ ಹಾಗೂ ಕೃತ್ಯಕ್ಕೆ ಬಳಸಿದ್ದ 4 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ನಾಲ್ವರು ಆರೋಪಿಗಳು ಬೈಕ್‌ಗಳನ್ನು ಕಳವು ಮಾಡಿ ಅದೇ ಬೈಕ್‌ಗಳಲ್ಲಿ ವಾಯುವಿಹಾರ, ರಸ್ತೆಯಲ್ಲಿ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಹೋಗುವ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಮೊಬೈಲ್‌ ಕಳವು ಮಾಡುತ್ತಿದ್ದರು. ಆ.4ರಂದು ಸಾರ್ವಜನಿಕರೊಬ್ಬರು ಮೊಬೈಲ್‌ನಲ್ಲಿ ಮಾತನಾಡಿಕೊಂಡು ನಡೆದು ಹೋಗುತ್ತಿದ್ದಾಗ ನಾಲ್ವರು ಕಳ್ಳರು ಎರಡು ಬೈಕ್‌ಗಳಲ್ಲಿ ಹಿಂಬಾಲಿಸಿಕೊಂಡು ಬಂದು ಮೊಬೈಲ್‌ ಕಸಿದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಸ್ಥಳೀಯ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಬೈಕ್‌ ಕಳವು ಮಾಡಿ ಮೊಬೈಲ್‌ ದೋಚುತ್ತಿದ್ದೇವು. ಬಳಿಕ ನಕಲಿ ಬಿಲ್‌ಗ‌ಳನ್ನು ಸಿದ್ದಪಡಿಸಿ ಬೇರೆಯವರಿಗೆ ಮಾರಾಟ ಮಾಡುತ್ತಿದ್ದೇವು ಎಂದು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next