Advertisement

14 ತುಂಬುವವರೆಗೆ ಮೊಬೈಲ್‌ ನಿಷೇಧ; ಇದು ಗೇಟ್ಸ್‌ ನಿಯಮ

03:45 AM Apr 23, 2017 | Harsha Rao |

ವಾಷಿಂಗ್ಟನ್‌: “ಊಹೂಂ, 14 ವರ್ಷ ತುಂಬದೇ ಮಕ್ಕಳ ಕೈಗೆ ಮೊಬೈಲ್‌ ಫೋನ್‌ ಕೊಡುವುದೇ ಇಲ್ಲ. ಹೋಂ ವರ್ಕ್‌ ಮಾಡೋ ಸಮಯದಲ್ಲಿ ಅದನ್ನು ಬಿಟ್ಟು ಬೇರೇನೂ ಮಾಡುವ ಹಾಗಿಲ್ಲ. ಶ್ರೀಮಂತಿಕೆಯ ಅಹಂ ಹತ್ತಿರ ಸುಳಿಯಬಾರದು. ಎಲ್ಲರ ಜೊತೆಯೂ ಸಾಮಾನ್ಯರಂತೆ ಬೆರೆಯಬೇಕು…’

Advertisement

ವೈಭೋಗದ ಜೀವನದ ಮೂಲಕ ಶ್ರೀಮಂತಿಕೆಯ ಪ್ರದರ್ಶನ ಮಾಡುವ ಕುಬೇರರೇ ತುಂಬಿರುವಂಥ ಈ ಜಗತ್ತಿನಲ್ಲಿ “ವಿಶ್ವದ ಅತಿ ಶ್ರೀಮಂತ ವ್ಯಕ್ತಿ’ ಎಂದು ಹೆಸರು ಗಳಿಸಿರುವ ಮೈಕ್ರೋಸಾಫ್ಟ್ ಸ್ಥಾಪಕ ಬಿಲ್‌ ಗೇಟ್ಸ್‌ ಅವರು ಪಾಲಿಸಿಕೊಂಡು ಬಂದಿರುವ ನೀತಿಯಿದು.

ಈ ಡಿಜಿಟಲ್‌ ಯುಗದ ತಂತ್ರಜ್ಞಾನ ಕ್ರಾಂತಿಯಲ್ಲಿ ಮಹತ್ವದ ಪಾತ್ರ ವಹಿಸಿರುವ ಗೇಟ್ಸ್‌ ಅವರು ತಮ್ಮ ಮಕ್ಕಳಿಗೆ 14 ವರ್ಷ ತುಂಬುವವರೆಗೂ ಸ್ಮಾರ್ಟ್‌ಫೋನ್‌ ಸಂಪರ್ಕಕ್ಕೆ ಬಾರದಂತೆ ನೋಡಿಕೊಂಡಿದ್ದಾರೆ. ಬ್ರಿಟನ್‌ನ ಪತ್ರಿಕೆ “ದಿ ಮಿರರ್‌’ಗೆ ನೀಡಿದ ಸಂದರ್ಶನದಲ್ಲಿ ಅವರೇ ಈ ಕುರಿತು ಹೇಳಿಕೊಂಡಿದ್ದಾರೆ. 

ಮೊಬೈಲ್‌ ಬಳಕೆಗೆ ಮಿತಿ: “ನಮ್ಮ ಮಕ್ಕಳಾದ ಜೆನಿಫ‌ರ್‌(20), ರೋರಿ(17) ಮತ್ತು ಫೋಬೆ(14)ಗೆ ಹಲವು ಮಿತಿಗಳನ್ನು ಹೇರಿದ್ದೇವೆ. ಸಹಪಾಠಿಗಳೆಲ್ಲ ಮೊಬೈಲ್‌ ಹೊಂದಿದ್ದಾರೆ ಎಂದು ಎಷ್ಟು ಹಠ ಹಿಡಿದರೂ ಅವರಿಗೆ 14 ವರ್ಷ ತುಂಬುವವರೆಗೂ ಸ್ಮಾರ್ಟ್‌ಫೋನ್‌ ಕೊಡಿಸಿರಲಿಲ್ಲ. ಡಿನ್ನರ್‌ ಟೇಬಲ್‌ ಬಳಿಯಂತೂ ಮೊಬೈಲನ್ನು ತರುವ ಹಾಗಿಲ್ಲ.
 ರಾತ್ರಿ ಮಲಗುವ ಸಮಯದಲ್ಲಿ ಅದು ಹತ್ತಿರ ಸುಳಿಯಲೂ ಕೂಡದು. ಸಾಮಾನ್ಯರಂತೆ ಇತರರೊಂದಿಗೆ ಬೆರೆಯಬೇಕು. ಹೋಂ ವರ್ಕ್‌ ಮಾಡಬೇಕು. ಹೆಚ್ಚು ಪಾಕೆಟ್‌ ಮನಿ ನೀಡುವುದಿಲ್ಲ. ಅವರನ್ನು ಸಾಮಾನ್ಯರ ಮಕ್ಕಳಂತೆ ಬೆಳೆಸಬೇಕೆಂಬುದು ನಮ್ಮ ಆಸೆ,’ ಎಂದಿದ್ದಾರೆ ಗೇಟ್ಸ್‌. ಇದೇ ವೇಳೆ,  ಮ್ಯಾಕ್‌ಡೊನಾಲ್ಡ್‌, ಬರ್ಗರ್‌ ಕಿಂಗ್‌ ತಮ್ಮ ಫೇವರಿಟ್‌ ಎಂಬುದನ್ನು ಹೇಳಲು ಗೇಟ್ಸ್‌ ಮರೆಯಲಿಲ್ಲ. 

10 ಡಾಲರ್‌ನ ವಾಚ್‌: ವಿಶೇಷವವೆಂದರೆ, ಸುಮಾರು 87 ಶತಕೋಟಿ ಡಾಲರ್‌(5.62 ಲಕ್ಷ ಕೋಟಿ ರೂ.) ಆಸ್ತಿ ಹೊಂದಿರುವ ಗೇಟ್ಸ್‌ ಅವರು ಸಂದರ್ಶನದ ಸಮಯದಲ್ಲೂ 10 ಡಾಲರ್‌(650 ರೂ.)ನ ಕ್ಯಾಸಿಯೋ ವಾಚ್‌ ಧರಿಸಿದ್ದರು ಎಂದು ದಿ ಮಿರರ್‌ ವರದಿ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next