Advertisement

ಗ್ರಾಪಂಗಳಲ್ಲಿ ತೆರಿಗೆ ವಸೂಲಿಗೆ “ಮೊಬೈಲ್‌ ಆ್ಯಪ್‌’ಅಭಿವೃದ್ಧಿ

06:15 AM Oct 22, 2018 | |

ಬೆಂಗಳೂರು: ಗ್ರಾಮ ಪಂಚಾಯಿತಿಗಳಲ್ಲಿ ಸಂಪನ್ಮೂಲ ಕ್ರೋಢೀಕರಣಕ್ಕೆ ಮಾಹಿತಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಗ್ರಾಮೀಣಾಭಿವೃದ್ಧಿ ಇಲಾಖೆಯು ತೆರಿಗೆ ವಸೂಲಾತಿಯಲ್ಲಿ ಸುಧಾರಣೆ ಮತ್ತು ಪಾರದರ್ಶಕತೆ ತರಲು ಇದೀಗ “ಮೊಬೈಲ್‌ ಆ್ಯಪ್‌’ ರೂಪಿಸಲು ಚಿಂತನೆ ನಡೆಸಿದೆ.

Advertisement

ರಾಜ್ಯದ ಗ್ರಾಪಂಗಳಲ್ಲಿ ತೆರಿಗೆ ಸಂಗ್ರಹಕ್ಕೆ ಆನ್‌ಲೈನ್‌ ವ್ಯವಸ್ಥೆ ಜಾರಿಗೆ ತರಬೇಕೆಂಬ ಯೋಜನೆಯ ಭಾಗವಾಗಿ ಮೊದಲ ಹಂತದಲ್ಲಿ ಮೊಬೈಲ್‌ ಆ್ಯಪ್‌ ಬಳಸಿಕೊಳ್ಳಲು ಇಲಾಖೆ ಮುಂದಾಗಿದೆ. ಈ ಸಂಬಂಧ ಇಲಾಖಾ ಮಟ್ಟದಲ್ಲಿ ಪ್ರಾಥಮಿಕ ಹಂತದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಶೀಘ್ರದಲ್ಲೇ ಅದಕ್ಕೊಂದು ಅಂತಿಮ ರೂಪ ಸಿಗಲಿದೆ.

ಗ್ರಾಪಂಗಳು “ಸ್ಥಳೀಯ ಸರ್ಕಾರ’ ಇದ್ದಂತೆ. ಈ ಸ್ಥಳೀಯ ಸರ್ಕಾರಗಳು ಯಶಸ್ವಿಯಾಗಬೇಕಾದರೆ, ಅವುಗಳು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಅದು ಆಗಬೇಕಾದರೆ ಸಂಪನ್ಮೂಲ ಕ್ರೋಢೀಕರಣ ಹೆಚ್ಚಾಗಬೇಕು, ಅದಕ್ಕಾಗಿ ತೆರಿಗೆ ವಸೂಲಾತಿಯಲ್ಲಿ ಸುಧಾರಣೆ ಮತ್ತು ಪಾರದರ್ಶಕತೆ ಅವಶ್ಯಕ. ಅದಕ್ಕಾಗಿ ತೆರಿಗೆ ಸಂಗ್ರಹಕ್ಕೆ ಸಾಧ್ಯವಿರುವ ಎಲ್ಲ ಅವಕಾಶ ಮತ್ತು ಸಾಧನಗಳನ್ನು ಇಲಾಖೆ ಬಳಸಿಕೊಳ್ಳುತ್ತದೆ. ಅದರ ಒಂದು ಭಾಗವೇ ಈ ಮೊಬೈಲ್‌ ಆ್ಯಪ್‌ ಆಗಿದೆ.

ಸಂಪನ್ಮೂಲ ಕ್ರೋಢೀಕರಣಕ್ಕೆ ಗ್ರಾಪಂಗಳಲ್ಲಿ ಯಥೇತ್ಛ ಅವಕಾಶಗಳಿವೆ. ಆದರೆ, ವ್ಯವಸ್ಥೆಯ ಕೆಲವೊಂದು ದೌರ್ಬಲ್ಯ ಮತ್ತು ದುರ್ಬಳಕೆಯ ಪರಿಣಾಮವಾಗಿ ತೆರಿಗೆ ಸಂಗ್ರಹದಲ್ಲಿ ನಿಗದಿತ ಯಶಸ್ಸು ಸಾಧ್ಯವಾಗುತ್ತಿಲ್ಲ. ತೆರಿಗೆಯ ಒಟ್ಟು ಬೇಡಿಕೆಯಲ್ಲಿ ಶೇ.50ರಷ್ಟೂ ಸಂಗ್ರಹವಾಗುತ್ತಿಲ್ಲ. ಹೀಗಾಗಿ ಗ್ರಾಪಂಗಳು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಾಧ್ಯವಾಗುತ್ತಿಲ್ಲ. ಇದು ಗ್ರಾಮೀಣ ಭಾಗದ ಅಭಿವೃದ್ಧಿಯ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಗ್ರಾಪಂಗಳು ಆರ್ಥಿಕವಾಗಿ ಸ್ವಾವಲಂಬಿ ಮತ್ತು ಸದೃಢವಾಗಲು ಪ್ರಮುಖ ಆಧಾರವೇ ತೆರಿಗೆ. ಹಾಗಾಗಿ, ತೆರಿಗೆ ವಸೂಲಾತಿಗೆ ವಿಶೇಷ ಒತ್ತು ಕೊಡಲಾಗುತ್ತಿದೆ. ಅದಕ್ಕಾಗಿ ಮೊಬೈಲ್‌ ಆ್ಯಪ್‌ ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಮೊಬೈಲ್‌ ಆ್ಯಪ್‌ ಬಳಕೆ ಹೇಗೆ?
ಬಿಲ್‌ ಕಲೆಕ್ಟರ್‌ಗಳು ರಸೀದಿ ಪುಸ್ತಕದ ಬದಲಿಗೆ ಸ್ಮಾರ್ಟ್‌ ಫೋನ್‌ ಬಳಸುತ್ತಾರೆ. ವಿಶೇಷ ಆ್ಯಪ್‌ ಸಿದ್ಧಪಡಿಸಿ ಅದರಲ್ಲಿ ತೆರಿಗೆ ವ್ಯಾಪ್ತಿಗೆ ಬರುವ ಎಲ್ಲ ಆಸ್ತಿ, ವಸ್ತು ಮತ್ತಿತರ ಅಂಶಗಳನ್ನು ಅಳವಡಿಸಲಾಗುತ್ತದೆ. ಜತೆಗೆ ಯಾವುದಕ್ಕೆ ಎಷ್ಟು ತೆರಿಗೆ, ಕಟ್ಟಬೇಕಾದ ತೆರಿಗೆ ಎಷ್ಟು, ಹಿಂಬಾಕಿ ಎಷ್ಟಿದೆ ಎಲ್ಲವೂ ಆ್ಯಪ್‌ನಲ್ಲಿ ಸಿಗಲಿದೆ. ಈ ಬಗ್ಗೆ ಬಿಲ್‌ ಕಲೆಕ್ಟರ್‌ಗಳಿಗೆ ಪ್ರತ್ಯೇಕ ತರಬೇತಿ ನೀಡಲಾಗುವುದು ಮತ್ತು ಅವಶ್ಯಕವಿರುವ ಸುಸಜ್ಜಿತ ಮೊಬೈಲ್‌ ಒದಗಿಸಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಇಲಾಖೆಯ ಇ-ಆಡಳಿತ ವಿಭಾಗದ ಅಧಿಕಾರಿಗಳು ವಿವರಿಸುತ್ತಾರೆ.

Advertisement

ಪಿಒಎಸ್‌ ಬಳಕೆ
ಮೊಬೈಲ್‌ ಆ್ಯಪ್‌ ಜತೆಗೆ ಆಸ್ತಿ ತೆರಿಗೆ ವಸೂಲು ಮಾಡಲು “ಪಾಯಿಂಟ್‌ ಆಫ್ ಸೇಲ್‌ ಡಿವೈಸ್‌’ಗಳನ್ನು (ಪಿಒಎಸ್‌) ಬ್ಯಾಂಕುಗಳಿಂದ ಬಾಡಿಗೆ ಪಡೆಯುವ ಬಗ್ಗೆಯೂ ಇಲಾಖೆ ಚಿಂತನೆ ನಡೆಸಿದೆ. ಈ ಸಂಬಂಧ ಬ್ಯಾಂಕುಗಳಿಂದ ಮಾತುಕತೆ ನಡೆದಿದೆ. ಪರಸ್ಪರ ಶರತ್ತುಗಳು ಒಪ್ಪಿಗೆಯಾದರೆ, ಒಪ್ಪಂದ ಮಾಡಿಕೊಂಡು ಪಿಒಎಸ್‌ ಬಾಡಿಗೆಗೆ ಪಡೆದುಕೊಳ್ಳಲು ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

5 ಸಾವಿರ ಗ್ರಾಪಂಗಳು ತೆರಿಗೆ ಪರಿಷ್ಕರಣೆ ಮಾಡಿಲ್ಲ
ತೆರಿಗೆ ದರ ಪರಿಷ್ಕರಣೆಗೆ 2015ರಲ್ಲೇ ತಿದ್ದುಪಡಿ ತಂದಿದ್ದರೂ ರಾಜ್ಯದ 6,024 ಗ್ರಾಪಂಗಳ ಪೈಕಿ ಕೇವಲ 1,400 ಗ್ರಾಪಂಗಳು ಮಾತ್ರ ತೆರಿಗೆ ದರ ಪರಿಷ್ಕರಣೆ ಮಾಡಿವೆ. ಗ್ರಾಮ ಪಂಚಾಯಿತಿಗಳ ಈ ಅಸಡ್ಡೆಯಿಂದಾಗಿ ಕೋಟಿಗಟ್ಟಲೇ ಆದಾಯ ಖೋತಾ ಆಗುತ್ತಿದೆ.  ತೆರಿಗೆ ದರ ಪರಿಷ್ಕರಣೆ ಮಾಡಲು ಕಾಯ್ದೆಯಲ್ಲಿ ಅವಕಾಶ ಮಾಡಿಕೊಟ್ಟಿದ್ದರೂ, ಈ ಸಂಬಂಧ ಗ್ರಾಮೀಣಾಭಿವೃದ್ಧಿ ಇಲಾಖೆ ಕಾಲ-ಕಾಲಕ್ಕೆ ಸುತ್ತೋಲೆಗಳನ್ನು ಹೊರಡಿಸಿ ನೆನಪಿಸುತ್ತಿದ್ದರೂ ಗ್ರಾಪಂಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ತಮ್ಮದೇ ಸ್ವಯಂಕೃತ ಅಪರಾಧದಿಂದಾಗಿ ಆದಾಯ ಹೆಚ್ಚಿಸಿಕೊಳ್ಳುವ ಅವಕಾಶಗಳನ್ನು ಕೈಚೆಲ್ಲುತ್ತಿವೆ. ಒಂದೆಡೆ 6,024 ಗ್ರಾಪಂಗಳಲ್ಲಿ ಸದ್ಯ 1 ಸಾವಿರ ಕೋಟಿಗೂ ಅಧಿಕ ತೆರಿಗೆ ಬಾಕಿ ಉಳಿದಿದ್ದರೆ, ಮತ್ತೂಂದು ಕಡೆ ಕಳೆದ ಮೂರು ವರ್ಷಗಳಿಂದ 5 ಸಾವಿರಕ್ಕೂ ಹೆಚ್ಚು ಗ್ರಾಪಂಗಳು ತೆರಿಗೆಯನ್ನೇ ಪರಿಷ್ಕರಿಸಿಲ್ಲ.

ಸಾವಿರ ಕೋಟಿ ತೆರಿಗೆ ಬಾಕಿ
ಗ್ರಾಮೀಣಾಭಿವೃದ್ಧಿ ಇಲಾಖೆಯ ಮಾಹಿತಿ ಪ್ರಕಾರ 2017-18ರಲ್ಲಿ ಹಿಂದಿನ ಬಾಕಿ ಸೇರಿ ಒಟ್ಟು 1,800 ಕೋಟಿ ತೆರಿಗೆಯ ಬೇಡಿಕೆ ಇತ್ತು. ಆದರೆ, ಅದರಲ್ಲಿ ಇಲ್ಲಿವರೆಗೆ ವಸೂಲು ಆಗಿದ್ದು ಮಾತ್ರ 800 ಕೋಟಿ ರೂ. ಬಾಕಿ ಉಳಿದಿರುವುದು 1,200 ಕೋಟಿ ರೂ. ಕಳೆದ 5 ವರ್ಷಗಳ ಸ್ಥಿತಿಯೂ ಇದೇ ಆಗಿದೆ. 2014-15ರಿಂದ 2017-18ನೇ ಸಾಲಿನವರೆಗೆ ವಾರ್ಷಿಕ ಗುರಿ ಅಥವಾ ಬೇಡಿಕೆಗೆ ಪ್ರತಿಯಾಗಿ ವಸೂಲಾತಿ ಆಗಿರುವುದು ಶೇ.30ರಿಂದ 40ರಷ್ಟು ಮಾತ್ರ.

ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ವಸೂಲಾತಿಯಲ್ಲಿ ಪಾರದರ್ಶಕತೆ ತರಲು ಮೊಬೈಲ್‌ ಆ್ಯಪ್‌ ಬಳಸಿಕೊಳ್ಳಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆ್ಯಪ್‌ ಸಿದ್ಧಗೊಂಡ ಬಳಿಕ ಸಿಬ್ಬಂದಿಗೆ ಅಗತ್ಯ ತರಬೇತಿ ಕೊಟ್ಟು ಎಲ್ಲ ಗ್ರಾಪಂಗಳಲ್ಲಿ ಏಕಕಾಲದಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗುವುದು.
– ಶ್ರೀನಿವಾಸ ಮಾರಂಗಪ್ಪನವರ್‌, ನಿರ್ದೇಶಕರು, (ಇ-ಆಡಳಿತ)

ತೆರಿಗೆ ಬಾಕಿ
ವರ್ಷ    ಬೇಡಿಕೆ        ವಸೂಲು    ಬಾಕಿ

2015-16    1,448 ಕೋಟಿ    297 ಕೋಟಿ    1,151 ಕೋಟಿ
2016-17    980 ಕೋಟಿ    223 ಕೋಟಿ    757 ಕೋಟಿ
2018-19    1,800 ಕೋಟಿ    800 ಕೋಟಿ    1 ಸಾವಿರ ಕೋಟಿ

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next