ಚಂಡೀಗಢ: ಮಸೀದಿಯೊಂದರ ಮೇಲೆ ದಾಳಿ ಮಾಡಿ, ನಮಾಜ್ ಮಾಡುತ್ತಿದ್ದವರ ಮೇಲೆ ಹಲ್ಲೆಗೈದಿರುವ ಘಟನೆ ಹರಿಯಾಣದ ಸೋನಿಪತ್‌ನ ಸ್ಯಾಂಡಲ್ ಕಲಾನ್ ಗ್ರಾಮದಲ್ಲಿ ಭಾನುವಾರ ( ಏ.9 ರಂದು) ನಡೆದಿದೆ.
ಗ್ರಾಮದಲ್ಲಿ ಸಣ್ಣದಾಗಿ ನಿರ್ಮಾಣ ಮಾಡಿರುವ ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ ವೇಳೆ 15-20 ಜನರ ಗುಂಪೊಂದು ಲಾಠಿ ಹಿಡಿದುಕೊಂಡು ಮಸೀದಿ ಮೇಲೆ ದಾಳಿ ಮಾಡಿದೆ. ಮಸೀದಿಯಲ್ಲಿನ ವಸ್ತುಗಳನ್ನು ಒಡೆದು ಹಾಕಿ ಹಾನಿ ಮಾಡಿದ್ದಾರೆ. ಇದಾದ ಬಳಿಕ ನಮಾಜ್ ಮಾಡುತ್ತಿದ್ದ ಜನರ ಮೇಲೆ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ: ರಾಮನವಮಿ ಧ್ವಜಕ್ಕೆ ಮಾಂಸ ಕಟ್ಟಿ ಅಪವಿತ್ರ: ಎರಡು ಗುಂಪುಗಳ ನಡುವೆ ಘರ್ಷಣೆ; Sec 144 ಜಾರಿ
ಘಟನೆಯಲ್ಲಿ ಇಸ್ತಾಕ್ ಅಲಿ, ಅಲಾಮಿರ್, ಸಬೀರ್ ಅಲಿ, ಫರ್ಯಾದ್, ಅನ್ಸರ್ ಅಲಿ, ಜುಲೇಖಾ, ಅಲಿ ತಾಬ್, ನರ್ಗೀಸ್ ಮತ್ತು ಜರೀನಾ ಎಂಬುವರು ಸೇರಿ ಒಟ್ಟು ಮಂದಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಘಟನೆಗೆ ಕಾರಣವೇನು ಎಂಬುದು ಇದುವರೆಗೆ ತಿಳಿದು ಬಂದಿಲ್ಲ. 19 ಮಂದಿಯ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಸೋನಿಪತ್ ಒಂದು ಪ್ರಮುಖ ಕೈಗಾರಿಕಾ ಪ್ರದೇಶವಾಗಿದ್ದು, ಸದ್ಯ ಘಟನಾ ಸ್ಥಳದ ಬಳಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.