Advertisement
ನಾಡದಿಂದ ತ್ರಾಸಿಗೆ ಸಂಪರ್ಕಿಸುವ ಮೊವಾಡಿ ಬಳಿ ಸೌಪರ್ಣಿಕಾ ನದಿಗೆ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ದಿಂದ ಮಂಜೂರಾದ 9.28 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆ ಇದಾಗಿದೆ. ಕಾಮಗಾರಿಗೆ 2018ರಲ್ಲಿ ಶಿಲಾನ್ಯಾಸ ನೆರವೇರಿಸಲಾಗಿದ್ದರೂ ಕಾಮಗಾರಿ ಆರಂಭವಾಗಿದ್ದು 2019ರ ಮಾರ್ಚ್‌ನಲ್ಲಿ. 2020ರ ಮೇಯೊಳಗೆ ಕಾಮಗಾರಿ ಪೂರ್ಣಕ್ಕೆ ಗಡುವು ನೀಡಲಾಗಿತ್ತು. ಈಗ ಸೇತುವೆಯ ಕಾಮಗಾರಿ ಬಹುತೇಕ ಮುಗಿದಿದೆ. ಆದರೆ ರಸ್ತೆಗೆ ಬೇಕಾದ ಭೂಸ್ವಾಧೀನ ಪ್ರಕ್ರಿಯೆ ಇನ್ನು ಆಗಬೇಕಾಗಿದೆ.
ಸೌಪರ್ಣಿಕಾ ನದಿಗೆ ಅಡ್ಡಲಾಗಿ ನಿರ್ಮಾಣ ಗೊಂಡಿರುವ ಈ ಸೇತುವೆಯು 150 ಮೀಟರ್ ಉದ್ದವಿದ್ದು, 8.5 ಮೀ. ಅಗಲವಿದೆ. ಫುಟ್‌ಪಾತ್ ಸೇರಿಸಿದರೆ ಒಟ್ಟು 10.5 ಮೀ. ಅಗಲವಿದೆ. ಉಡುಪಿ, ಕಾರ್ಕಳ, ಮೊವಾಡಿ – ನಾಡ ಸೇತುವೆ, ಭಟ್ಕಳದಲ್ಲಿ ಒಟ್ಟು 9 ಸೇತುವೆಗಳಿಗೆ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ 42.57 ಕೋ. ರೂ. ಮಂಜೂರಾಗಿತ್ತು. ಇದರಲ್ಲಿ ಈ ಸೇತುವೆಯು 9.28 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಈ ಸೇತುವೆ ಕಾಮಗಾರಿಯು ಈಗಾಗಲೇ ಮುಗಿದಿದ್ದು, ಆದರೆ ಸೇತುವೆಯನ್ನು ಸಂಪರ್ಕಿ ಸುವ ರಸ್ತೆಗಳು ಹದಗೆಟ್ಟು ಹೋಗಿದೆ. ಅದನ್ನು ಕೂಡ ದುರಸ್ತಿ ಮಾಡಿದರೆ ಅನುಕೂಲವಾಗಲಿದೆ. ಇದಲ್ಲದೆ ಕೆಲವೆಡೆ ಜಾಗದ ಸಮಸ್ಯೆ ಇರುವುದರಿಂದ ಡಾಮರು ಕಾಮಗಾರಿಯಾಗದೆ ತೊಂದರೆ ಯಾಗಿದೆ. ಸಂಪರ್ಕ ರಸ್ತೆಗೆ ಕೂಡ ಆದಷ್ಟು ಬೇಗ ಡಾಮರು ಕಾಮಗಾರಿ ನಡೆಸಲಿ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
Related Articles
ರಸ್ತೆಗೆ ಅಗತ್ಯವಿರುವ ಭೂಸ್ವಾಧೀನ ಕುರಿತಂತೆ ಉಪ ನೋಂದಣಾಧಿಕಾರಿಗಳು ಅಂಕಿ- ಅಂಶ ಹಾಗೂ ಮಾರ್ಗಸೂಚಿ ದರಪಟ್ಟಿಯನ್ನು ಕುಂದಾ ಪುರದ ಸಹಾಯಕ ಆಯುಕ್ತರಿಗೆ ಸಲ್ಲಿಸಿದ್ದು, ಅದನ್ನು ಅವರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಅ. 10ರಂದು ಡಿಸಿ ನೇತೃತ್ವದಲ್ಲಿ ದರ ನಿರ್ಧರಣ ಸಲಹಾ ಸಮಿತಿ ಸಭೆ ನಡೆಸಿ, ಜಾಗಕ್ಕೆ ದರ ನಿಗದಿಪಡಿಸಲಾಗಿದೆ. ಅದಕ್ಕೂ ಮುನ್ನ ತಹಶೀಲ್ದಾರ್ ಅವರಿಂದ ಮತ್ತೂಮ್ಮೆ ಜಂಟಿ ಸರ್ವೇ ನಡೆಯಬೇಕು ಎಂದು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ನಾಡ ಗ್ರಾಮ ವ್ಯಾಪ್ತಿಯಲ್ಲಿ 6 ಮಂದಿಯ ಒಟ್ಟು 39 ಸೆಂಟ್ಸ್ ಹಾಗೂ ತ್ರಾಸಿ ಗ್ರಾಮದ 12 ಮಂದಿಯ 59 ಸೆಂಟ್ಸ್ ಜಾಗ ರಸ್ತೆಗಾಗಿ ಒತ್ತುವರಿಯಾಗಲಿದೆ.
Advertisement
ಬಹು ವರ್ಷಗಳ ಬೇಡಿಕೆನಾಡ, ಹಡವು, ಮೊವಾಡಿಯ ಜನರಿಗೆ ತ್ರಾಸಿಗೆ ಬಂದು ಕುಂದಾಪುರಕ್ಕೆ ತೆರಳಲು ಈ ಸೇತುವೆಯಾದರೆ ಬಹಳಷ್ಟು ಅನುಕೂಲವಾಗಲಿದೆ. ಇದಲ್ಲದೆ ಮೊವಾಡಿಯ ನಿವಾಸಿಗಳಿಗೆ ತ್ರಾಸಿ ಅಥವಾ ಮುಳ್ಳಿಕಟ್ಟೆ ಪೇಟೆಗೆ ಬರ ಬೇಕಾದರೆ ಕನಿಷ್ಠ 3 ಕಿ.ಮೀ. ದೂರವಿದೆ. ಆದರೆ ಸೇತುವೆಯಾದರೆ ನಾಡ ಪೇಟೆಗಿರುವ ಅಂತರ ಕೇವಲ 1 ಕಿ.ಮೀ. ಮಾತ್ರ. ಮೊವಾಡಿಯಲ್ಲಿ ಕ್ರಿಶ್ಚಿಯನ್ ಸಮುದಾಯದವರು ಹೆಚ್ಚಿರುವುದರಿಂದ ಪಡುಕೋಣೆ ಇಗರ್ಜಿಗೆ ಹೋಗಲು ಕೂಡ ಇದು ಹತ್ತಿರದ ಮಾರ್ಗವಾಗಿದೆ. ಸೇತುವೆಯ ಆಸುಪಾಸಿನಲ್ಲೇ ಸುಮಾರು 300ಕ್ಕೂ ಅಧಿಕ ಮನೆಗಳಿದ್ದು, ಈ ಸೇತುವೆ ನಿರ್ಮಾಣದಿಂದ ಸಾವಿರಾರು ಮಂದಿಗೆ ಅನುಕೂಲವಾಗಲಿದೆ. ಭೂಸ್ವಾಧೀನ ಪ್ರಕ್ರಿಯೆ ಬಾಕಿ
ಸೇತುವೆ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಆದರೆ ಸೇತುವೆಯನ್ನು ಸಂಪರ್ಕಿಸುವ ಜಾಗದ ಭೂಸ್ವಾಧೀನ ಪ್ರಕ್ರಿಯೆ ಬಾಕಿಯಿದೆ. ಈಗಾಗಲೇ ಭೂಸ್ವಾಧೀನ ಮಾಡುವ ರೈತರಿಗೆ ಎಷ್ಟು ಪರಿಹಾರ ಕೊಡಬೇಕು ಎನ್ನುವ ಬಗ್ಗೆ ಅಕ್ಟೋಬರ್‌ನಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆದಿದ್ದು, ಅದರಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಜಾಗದ ಸಂತ್ರಸ್ತರಿಗೆ ಪರಿಹಾರ ಹಂಚಿಕೆಯಾದ ಕೂಡಲೇ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ.
– ಮಂಜೇಶ್, ಎಂಜಿನಿಯರ್, ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ 9.28 ಕೋ.ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ
2018 ರಲ್ಲಿ ಸೇತುವೆಗೆ ಶಿಲಾನ್ಯಾಸ
300 ಕ್ಕೂ ಅಧಿಕ ಮನೆಯವರಿಗೆ ಅನುಕೂಲ ಪ್ರಶಾಂತ್ ಪಾದೆ