Advertisement

ಎಂ.ಒ.4 ಭತ್ತದ ಬಿತ್ತನೆ ಬೀಜ ಕೊರತೆ : ರೈತ ಸಂಪರ್ಕ ಕೇಂದ್ರಕ್ಕೆ ಬಂದು ಬರಿಗೈಲಿ ವಾಪಸ್‌

11:09 AM Jun 12, 2020 | mahesh |

ಕುಂದಾಪುರ: ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಆರಂಭಗೊಂಡಿದೆ. ಆದರೆ ಹೆಚ್ಚು ಫಸಲು ಬರುವ ಹಾಗೂ ಕರಾವಳಿಯ ಮಣ್ಣಿಗೆ ಬಹುವಾಗಿ ಹೊಂದಿಕೆಯಾಗುವ ಎಂ.ಒ. 4 ಭತ್ತದ ಬಿತ್ತನೆ ಬೀಜ ಲಭ್ಯವಾಗುತ್ತಿಲ್ಲ. ಉಡುಪಿ ಜಿಲ್ಲೆಯ 9 ಹಾಗೂ ದ.ಕ. ಜಿಲ್ಲೆಯ 16 ಹೋಬಳಿಗಳಲ್ಲಿರುವ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿಯೂ ಎಂ.ಒ. 4 ಬಿತ್ತನೆ ಬೀಜ ಖಾಲಿಯಾಗಿದೆ.

Advertisement

ಬರಿಗೈಯಲ್ಲಿ ವಾಪಸ್‌
ಕಮಲಶಿಲೆ, ಹಳ್ಳಿಹೊಳೆ ಮೊದಲಾದ ದೂರ-ದೂರದ ರೈತರು ವಂಡ್ಸೆಗೆ ವಾಹನ ಬಾಡಿಗೆ ಮಾಡಿಕೊಂಡು ಬರುತ್ತಿದ್ದು, ಬರಿಗೈಯಲ್ಲಿ ವಾಪಸು ಹೋಗುತ್ತಿದ್ದಾರೆ. ಇದೇ ಪರಿಸ್ಥಿತಿ ಕರಾವಳಿಯ ಎಲ್ಲ ಹೋಬಳಿಗಳಲ್ಲೂ ಇದೆ. ನಗರ ಪ್ರದೇಶ, ಬೇರೆ ಊರುಗಳಲ್ಲಿ ಕೆಲಸ ಮಾಡಿಕೊಂಡಿದ್ದವರು ಲಾಕ್‌ಡೌನ್‌ ಪರಿಣಾಮ ತಮ್ಮ ಊರಿಗೆ ಮರಳಿದ್ದು, ಅಲ್ಲೇ ನೆಲೆಸಿ ಕೃಷಿಯತ್ತ ಆಸಕ್ತರಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಬೀಜಕ್ಕೆ ಬೇಡಿಕೆ ಬಂದಿದೆ.

ಹೆಚ್ಚಿನ ಬೇಡಿಕೆ
ಉಡುಪಿಯಲ್ಲಿ ಪ್ರತಿ ವರ್ಷ 1,800 ರಿಂದ 2 ಸಾವಿರ ಕ್ವಿಂಟಾಲ್‌ ವರೆಗೆ ಎಂ.ಒ.4 ಬಿತ್ತನೆ ಬೀಜ ರೈತ ಸಂಪರ್ಕ ಕೇಂದ್ರಗಳಲ್ಲಿ ಖರೀದಿಯಾಗುತ್ತಿತ್ತು; ಈ ಬಾರಿ ಈ ವರೆಗೆ 2,518 ಕ್ವಿಂಟಾಲ್‌ ವಿತರಣೆಯಾಗಿದೆ. ಹಿಂದಿನ ವರ್ಷಗಳಲ್ಲಿ 4,000ದಿಂದ 4,500 ಮಂದಿ ರೈತರಿಗೆ ವಿತರಿಸಲಾಗುತ್ತಿದ್ದರೆ ಈ ಬಾರಿ ಈವರೆಗೆ 5,780 ಮಂದಿ ರೈತರು ಪಡೆದುಕೊಂಡಿದ್ದಾರೆ. ದ.ಕ.ದಲ್ಲಿ ಕಳೆದ ವರ್ಷ ಒಟ್ಟಾರೆ 750 ಕ್ವಿಂಟಾಲ್‌ ವಿತರಣೆಯಾಗಿದ್ದರೆ ಈ ವರ್ಷ ಈವರೆಗೆ 650 ಕ್ವಿಂಟಾಲ್‌ ಬೀಜವನ್ನು 2,500ಕ್ಕೂ ಮಿಕ್ಕಿ ರೈತರು ಪಡೆದುಕೊಂಡಿದ್ದಾರೆ.

12 ಚೀಲ ಕೇಳಿದರೆ ಒಂದು ಚೀಲ ಸಿಕ್ಕಿತು!
ನಮಗೆ 25 ಕೆ.ಜಿ.ಯ 12 ಚೀಲ ಎಂ.ಒ. 4 ಬಿತ್ತನೆ ಬೀಜ ಬೇಕಿತ್ತು. ರೈತ ಸಂಪರ್ಕ ಕೇಂದ್ರಕ್ಕೆ ಬಂದು ಕೇಳಿದರೆ ಖಾಲಿಯಾಗಿದ್ದು, 1 ಚೀಲ ಮಾತ್ರ ಸಿಕ್ಕಿತು. ಇಲ್ಲಿ ಸಬ್ಸಿಡಿ ಸಹಿತ 1 ಚೀಲಕ್ಕೆ 600 ರೂ. ಇದ್ದರೆ, ಹೊರಗಡೆ 1 ಚೀಲಕ್ಕೆ 825 ರೂ. ಕೊಡಬೇಕು. ಉಮಾ, ಜ್ಯೋತಿ ತಳಿಯ ಬೀಜ ಲಭ್ಯವಿದ್ದರೂ ಈ ಭಾಗದಲ್ಲಿ ಮುಂಗಾರು ಹಂಗಾಮಿಗೆ ಹೊಂದಿಕೆಯಾಗುವುದು ಕಷ್ಟ ಎಂದು ಅಸೋಡು ಕೃಷಿಕ ಸುಜಿತ್‌ ಕುಮಾರ್‌ ತಿಳಿಸಿದ್ದಾರೆ.

ಕರ್ನಾಟಕ ಬೀಜ ನಿಗಮ ಪೂರೈಸಿದಷ್ಟನ್ನು ಈಗಾಗಲೇ ವಿತರಿಸಲಾಗಿದೆ. ಮುಂದಿನ ವರ್ಷಗಳಲ್ಲಿ ಹೆಚ್ಚಿನ ಬೇಡಿಕೆ ಸಲ್ಲಿಸಲಾಗುವುದು. ರೈತ ಸಂಪರ್ಕ ಕೇಂದ್ರಗಳಲ್ಲಿ ಸುಮಾರು 45 ಕ್ವಿಂಟಾಲ್‌ಗ‌ೂ ಅಧಿಕ ಉಮಾ ಹಾಗೂ ಜ್ಯೋತಿ ಬೀಜ ಲಭ್ಯವಿದೆ. ಈ ತಳಿಗಳನ್ನು ರೈತರು ಬಳಸುವುದೇ ಕಡಿಮೆ. ಬಳಸಿದರೆ ಖಂಡಿತ ಉತ್ತಮ ಫಸಲು ಬರುತ್ತದೆ.
– ಕೆಂಪೇಗೌಡ, ಜಂಟಿ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ಉಡುಪಿ

Advertisement

ದ.ಕ. ಜಿಲ್ಲೆಯಲ್ಲಿ ಬಿತ್ತನೆ ಬೀಜ ಕೊರತೆಯಾಗಿಲ್ಲ. ಆದರೆ ಈ ಬಾರಿ ಎಂ.ಒ. 4 ತಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಇನ್ನೂ 15 ಕ್ವಿಂಟಾಲ್‌ನಷ್ಟು ಅಗತ್ಯವಿತ್ತು. ಬದಲಿಯಾಗಿ ಜಯ ಹಾಗೂ ಜ್ಯೋತಿ ಬೀಜಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನಿದೆ.
– ಸೀತಾ, ಜಂಟಿ ಕೃಷಿ ನಿರ್ದೇಶಕರು, ಕೃಷಿ ಇಲಾಖೆ ದ.ಕ.

Advertisement

Udayavani is now on Telegram. Click here to join our channel and stay updated with the latest news.

Next