ಹುಬ್ಬಳ್ಳಿ: ಮಹಾನಗರ ಪಾಲಿಕೆ ಸಾಮಾನ್ಯ ಸಭೆ, ಆಯ-ವ್ಯಯ ಸಭೆಗೆ ಸಮವಸ್ತ್ರಧಾರಿ ಪೊಲೀಸರಾಗಲಿ, ಅಂಗರಕ್ಷಕ(ಗನ್‌ಮ್ಯಾನ್)ಗಳಾಗಲಿ ಸದನ ಒಳಗೆ ಪ್ರವೇಶಿಸುವಂತಿಲ್ಲ. ಆದರೆ, ಸೋಮವಾರ ನಡೆದ ಆಯ-ವ್ಯಯ ಮಂಡನೆ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ ಅವರ ಗನ್‌ಮ್ಯಾನ್ ಸದನದೊಳಗೆ ಅದು ಮಹಾಪೌರರ ವೇದಿಕೆ ಮೇಲೆ ನಿಂತು ಮೊಬೈಲ್‌ನಲ್ಲಿ ಫೋಟೋ ತೆಗೆದದ್ದು ಕಂಡು ಬಂತು.
ಪ್ರದೀಪ ಶೆಟ್ಟರ ಅವರ ಅಂಗರಕ್ಷಕ ಆಯ-ವ್ಯಯ ಮಂಡನೆ ಆರಂಭ ಸಮಯದಲ್ಲಿ ಸದನ ಒಳಗೆ ಬಂದಿದ್ದು ಅಲ್ಲದೆ, ಮಹಾಪೌರರ ಪೀಠದ ಹಿಂದೆಯೇ ನಿಂತು ಪ್ರದೀಪ ಶೆಟ್ಟರ ಅವರ ಚಿತ್ರವನ್ನು ಮೊಬೈಲ್‌ನಲ್ಲಿ ಕ್ಲಿಕ್ಕಿಸುತ್ತಿದ್ದುದು ಕಂಡು ಹಿರಿಯ ಸದಸ್ಯ ಡಾ| ಪಾಂಡುರಂಗ ಪಾಟೀಲ ಅವರು ಪ್ರದೀಪ ಶೆಟ್ಟರ ಅವರ ಬಳಿ ಹೋಗಿ ನಿಮ್ಮ ಅಂಗರಕ್ಷಕ ಒಳ ಬಂದಿದ್ದಾರೆ ಅವರು ಬರುವಂತಿಲ್ಲ.
ಅವರಿಗೆ ಹೇಳಿ ಎಂದು ತಿಳಿಸಿ ಬಂದರು. ಆಗ ಅಂಗರಕ್ಷಕ ಹೊರ ನಡೆದರು. ಸ್ವಲ್ಪ ವೇಳೆ ಬಿಟ್ಟು ಇಡೀ ಸದನ ಆಯ-ವ್ಯಯ ಮಂಡನೆಯಲ್ಲಿ ತಲ್ಲೀನವಾಗಿದ್ದಾಗ ಮತ್ತೂಮ್ಮೆ ಸದನ ಪ್ರವೇಶಿಸಿದ ಅಂಗರಕ್ಷಕ ಮೊಬೈಲ್‌ನಿಂದ ಫೋಟೋ ತೆಗೆದಿದ್ದು ಕಂಡು ಬಂತು.
ಜೆಡಿಎಸ್ ಕಾರ್ಯಕರ್ತರು ಪ್ರವೇಶ: ಡಿಎಸ್ ಕಾರ್ಯಕರ್ತರು ಸಹ ನಾವೇನು ಕಡಿಮೆ ಎನ್ನುವಂತೆ ಒಂದಿಬ್ಬರು ಕಾರ್ಯಕರ್ತರು ಆಯ-ವ್ಯಯ ಮಂಡನೆ ಮಾಡುವ ಸಂದರ್ಭದಲ್ಲೇ ಒಳ ಪ್ರವೇಶಿಸಿದ್ದು ಕಂಡು ಬಂತು. ಪಾಲಿಕೆ ಜೆಡಿಎಸ್ ಸದಸ್ಯ ರಾಜಣ್ಣಾ ಕೊರವಿ ಅವರ ಭೇಟಿಗೆ ಬಂದ ಜೆಡಿಎಸ್‌ನ ಇಬ್ಬರು ಕಾರ್ಯಕರ್ತ ಒಂದೆರಡು ನಿಮಿಷ ಅವರೊಂದಿಗೆ ಮಾತನಾಡಿದರು, ಅವರಿಗೆ ಏನೋ ಪತ್ರ ನೀಡಿದರು.
ಇಷ್ಟಾದರೂ ಯಾರೊಬ್ಬರು ಗಮನಿಸಲೇ ಇಲ್ಲ. ಪ್ರಶ್ನಿಸಲೂ ಇಲ್ಲ. ಪಾಲಿಕೆ ಸದನ ಎಂಬುದು ಒಂದು ರೀತಿ ಮಾರುಕಟ್ಟೆ ಎಂಬುವಂತಾಗಿದ್ದು, ಯಾರಾದರೂ ಬರಬಹುದು ಯಾರಾದರೂ ಹೋಗಬಹುದು ಎನ್ನುವಂತಾಗಿದೆ. ಇತ್ತೀಚೆಗೆ ನಡೆದ ಮಹಾಪೌರರ ಆಯ್ಕೆ ಸಂದರ್ಭದಲ್ಲೂ ವಿವಿಧ ಜನಪ್ರತಿನಿಧಿಗಳು, ಗನ್‌ಮ್ಯಾನ್‌ಗಳು, ಸಮವಸ್ತ್ರಧಾರಿ ಪೊಲೀಸ್ ಅಧಿಕಾರಿಗಳು ಸದನ ಒಳಗೆ ಪ್ರವೇಶಿಸಿದ್ದರು.
ಆಸನ ಕೊರತೆ ಪ್ರಸ್ತಾಪ: ಪಾಲಿಕೆ ಸಭಾಭವನ ನವೀಕರಣದ ಅನಂತರ ಆಸನಗಳನ್ನು ಬದಲಾಯಿಸಲಾಗಿದೆ. ಮಾಧ್ಯಮವರಿಗೆ ಇದ್ದ ಆಸನಗಳನ್ನು ಬದಲಾಯಿಸಿ ಕೇವಲ 10 ಆಸನಗಳನ್ನು ಮಾತ್ರ ನಿಗದಿಪಡಿಸಲಾಗಿತ್ತು. ಆಯ-ವ್ಯಯ ಮಂಡನೆಗೂ ಮುನ್ನ ಹಿರಿಯ ಸದಸ್ಯ ಡಾ|ಪಾಂಡುರಂಗ ಪಾಟೀಲ ವಿಷಯ ಪ್ರಸ್ತಾಪಿಸಿ, ಮಾಧ್ಯಮವರಿಗೆ ಆಸನ ವ್ಯವಸ್ಥೆಯೇ ಇಲ್ಲ. ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು.
ಇದಕ್ಕೆ ಸದಸ್ಯರಾದ ಗಣೇಶ ಟಗರಗುಂಟಿ, ದಶರಥ ವಾಲಿ ಇನ್ನಿತರರು ಧ್ವನಿಗೂಡಿಸಿದರು. ಮಹಾಪೌರ ಡಿ.ಕೆ. ಚವ್ಹಾಣ ಮುಂದಿನ ಬಾರಿ ಸರಿಪಡಿಸುವ ಭರವಸೆ ನೀಡಿದರು. ಆಸನ ವ್ಯವಸ್ಥೆ ಇಲ್ಲದ್ದರಿಂದ ಅನೇಕ ಮಾಧ್ಯಮದವರು ಸಾರ್ವಜನಿಕರಿಗಿದ್ದ ಆಸನಗಳಲ್ಲಿ ಕುಳಿತಿದ್ದರು. ಆಯ-ವ್ಯಯ ಪ್ರತಿಗಳನ್ನು ಮಾಧ್ಯಮವರಿಗೆ ನೀಡುವ ಸಂದರ್ಭದಲ್ಲಿ ಅನೇಕ ಸಾರ್ವಜನಿಕರಿಗೂ ಸಹ ಅವುಗಳನ್ನು ನೀಡಿದ್ದು ಕಂಡು ಬಂತು.