ಬೆಂಗಳೂರು: “ಸಾರ್.. ಪ್ರಿನ್ಸ್ ಬರ್ತಿದ್ದಾರೆ. ಇಲ್ಲಿಂದ ಎದ್ದೇಳಿ. ಕುಳಿತಿದ್ದರೆ ಒಳ್ಳೇದಲ್ಲ’ ಎಂದು ಹೇಳಿ ಫರ್ಜಿ ಕೆಫೆಯಲ್ಲಿ ಕುಳಿತಿದ್ದ ವಿಧಾನ ಪರಿಷತ್ ಸದಸ್ಯರೊಬ್ಬರನ್ನು ಬೌನ್ಸರ್‌ಗಳು ಎಬ್ಬಿಸಿ ಕಳುಹಿಸಿದ್ದರು.
ಇದು ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಇದೀಗ ಜೈಲು ಪಾಲಾಗಿರುವ ಮೊಹಮ್ಮದ್ ನಲಪಾಡ್ ಕುರಿತು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದ ಕಥೆ. ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ವತ್ ಮೇಲೆ ಹಲ್ಲೆ ನಡೆಸಿದ ಬಳಿಕ ಮೊಹಮ್ಮದ್ ನಲಪಾಡ್ ಕೃತ್ಯಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ.
ಹಿಂದೆ ಮಹಿಳೆಯೊಬ್ಬರ ಜತೆ ಇದೇ ರೀತಿ ವರ್ತಿಸಿದ ಬಗ್ಗೆ ಆರೋಪ ಕೇಳಿಬಂದಿದೆ. ಆತನ ಗೂಂಡಾಗಿರಿಗೆ ಸಂಬಂಧಿಸಿದಂತೆ ಇಂತಹ 40-50 ಪ್ರಕರಣಗಳಿದ್ದು, ಹೆದರಿ ಯಾರೂ ಪೊಲೀಸರಿಗೆ ದೂರು ನೀಡಿಲ್ಲ. ದೂರು ನೀಡಿದರೂ ಪೊಲೀಸರು ಅದನ್ನು ದಾಖಲಿಸಿಕೊಳ್ಳುತ್ತಿರಲಿಲ್ಲ ಎಂದು ಹೇಳಿದರು.
ಫರ್ಜಿ ಕೆಫೆಯಲ್ಲಿ ಮೊಹಮ್ಮದ್ ನಲಪಾಡ್ ಮತ್ತು ಅತನ ಗ್ಯಾಂಗ್‌ಗೆ ವಿಶೇಷ ಆದ್ಯತೆ ಇರುತ್ತದೆ. ರಾತ್ರಿಯಾಗುತ್ತಿದ್ದಂತೆ ಕೆಲವು ಸೀಟುಗಳನ್ನು ಆತನಿಗೆಂದೇ ಕಾಯ್ದಿರಿಸಲಾಗುತ್ತದೆ. ಅಲ್ಲಿ ಯಾರೇ ಬಂದು ಕುಳಿತರೂ ಮುಲಾಜಿಲ್ಲದೆ ಎಬ್ಬಿಸಿ ಕಳುಹಿಸಲಾಗುತ್ತದೆ. ಈ ವಿಷಯ ಗೊತ್ತಿಲ್ಲದ ವಿಧಾನ ಪರಿಷತ್ ಸದಸ್ಯರೊಬ್ಬರು ಮೊಹಮ್ಮದ್ ನಲಪಾಡ್ ಮತ್ತು ಆತನ ಗ್ಯಾಂಗ್‌ಗೆ ಮೀಸಲಿಟ್ಟ ಜಾಗದಲ್ಲಿ ಕುಳಿತಿದ್ದರು.
ಅಷ್ಟರಲ್ಲಿ ಮೊಹಮ್ಮದ್ ನಲಪಾಡ್ ಅಲ್ಲಿಗೆ ಬಂದಿದ್ದ. ಆತನಿಗೆ ನಿಗದಿಪಡಿಸಿದ ಜಾಗದಲ್ಲಿ ವಿಧಾನ ಪರಿಷತ್ ಸದಸ್ಯ ಕುಳಿತಿರುವುದನ್ನು ಕಂಡ ಕೆಫೆಯ ಬೌನ್ಸರ್‌ಗಳು, ಸಾರ್… ಪ್ರಿನ್ಸ್ ಬರುತ್ತಿದ್ದಾರೆ ಎಂದು ಹೇಳಿ ಎಬ್ಬಿಸಿ ಕಳುಹಿಸಿದ್ದರು ಎಂದು ಜಗದೀಶ್ ಶೆಟ್ಟರ್ ಹೇಳಿದರು. ಆದರೆ, ಆ ವಿಧಾನ ಪರಿಷತ್ ಸದಸ್ಯ ಯಾರು? ಯಾವಾಗ ಘಟನೆ ನಡೆದಿದೆ ಎಂಬುದನ್ನು ಅವರು ಬಹಿರಂಗಪಡಿಸಲಿಲ್ಲ.