ಮೈಸೂರು: ದೇವರಾಜ ಅರಸು ಅವರ ಕಾಲದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಶಿಕ್ಷಣ ಸಂಸ್ಥೆಗಳು ಪ್ರಾರಂಭಗೊಂಡಿತು. ಹೀಗಾಗಿ ಹಲವರು ವಿದ್ಯಾಭ್ಯಾಸ ಪಡೆಯಲು ಸಹಕಾರಿಯಾಯಿತು. ಅವರಂತೆ ರಾಜ್ಯ ಸರ್ಕಾರ ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಿ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಮಾನ್ಯ ಜನರ ಅರಸ ದೇವರಾಜ ಅರಸು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತಂದರು. ಅತ್ಯಂತ ಸಣ್ಣ ಸಮುದಾಯಗಳಿಗೂ ರಾಜಕೀಯ ಅಧಿಕಾರ ನೀಡಿದರು. 21 ಲಕ್ಷ ಎಕರೆ ಭೂಮಿಯನ್ನು ಉಳುವವರಿಗೆ ನೀಡಿದರು. ಇಂತಹ ಉತ್ತಮ ಕಾಂಗ್ರೆಸ್ ಚರಿತ್ರೆಯನ್ನು ಜನರ ಬಳಿಗೆ ಕೊಂಡೊಯ್ಯುವ ಕಾರ್ಯ ಆಗಬೇಕು. ಶಿಕ್ಷಣ ಮತ್ತು ಆರೋಗ್ಯ ಸೇವೆ ಜನರಿಗೆ ಉಚಿತವಾಗಿ ದೊರೆಯುವಂತೆ ಮಾಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಡಿ. ತಿಮ್ಮಯ್ಯ ಮಾತನಾಡಿ, ಸಮಾಜದಲ್ಲಿ ನೊಂದವರು ಹಾಗೂ ಶೋಷಿತರಿಗೆ ಏನಾದರು ಸಹಾಯ ಮಾಡಬೇಕು ಎಂಬ ತುಡಿತ ದೇವರಾಜ ಅರಸು ಅವರಲ್ಲಿ ಇತ್ತು. ಈ ಕಾರಣಕ್ಕೆ ಅರಸು ನಮ್ಮಿಂದ ಅಗಲಿ 40 ವರ್ಷಗಳು ಕಳೆದರೂ ಅವರನ್ನು ಜನರು ಇಂದಿಗೂ ಸ್ಮರಿಸಿಕೊಳ್ಳುತ್ತಾರೆ ಎಂದರು.
ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ದೇವರಾಜ ಅರಸು ನಾಡುಕಂಡ ಧೀಮಂತ ನಾಯಕ. ಅವರ ಗುಣಗಳನ್ನು ಹಾಗೂ ಅವರು ಮಾಡಿದ ಕೆಲಸ ಕಾರ್ಯಗಳನ್ನು ಸ್ಮರಿಸಿಕೊಳ್ಳಬೇಕು. ಅವರ ಕೊಡುಗೆ ರಾಜ್ಯಕ್ಕೆ ಅಪಾರವಾದದ್ದು. ಉಳುವವನೇ ಭೂಮಿಯ ಒಡೆಯ ಕಾನೂನು ಜಾರಿ ದೊಡ್ಡ ಸವಾಲಾಗಿತ್ತು. ಆದರೆ, ಯಶಸ್ವಿಯಾಗಿ ಉಳುವವರಿಗೆ ಭೂಮಿಯನ್ನು ಒದಗಿಸಿದರು ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಮೈಲ್ಯಾಕ್ ಮಾಜಿ ಅಧ್ಯಕ್ಷ ವೆಂಕಟೇಶ್ ಇದ್ದರು.