ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ ವಿಧಾನ ಪರಿಷತ್ ಪದವೀಧರ ಕ್ಷೇತ್ರದ ಮೂರು ಮತ್ತು ಶಿಕ್ಷಕರ ಕ್ಷೇತ್ರದ ಮೂರು ಸ್ಥಾನಗಳಿಗೆ ಚುನಾವಣೆ ದಿನಾಂಕ ಘೋಷಣೆಯಾಗಿದೆ.
ಚುನಾವಣಾ ಆಯೋಗ ಶನಿವಾರ ಚುನಾವಣಾ ದಿನಾಂಕ ಪ್ರಕಟಿಸಿದ್ದು, ಜೂ.8ರಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ.
ಜೂ. 12ರಂದು ಮತ ಎಣಿಕೆ ನಡೆಯಲಿದೆ. ಚುನಾವಣೆಗೆ ಮೇ 15ರಂದು ಅಧಿಸೂಚನೆ ಹೊರಡಿಸಲಾಗುತ್ತಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಲಿದೆ. ಮೇ 22 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಮೇ 23ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.
ನಾಮಪತ್ರ ಹಿಂಪಡೆಯಲು ಮೇ 22 ಅಂತಿಮ ದಿನವಾಗಿದೆ. ಚುನಾವಣೆ: ಆಗ್ನೇಯ ಶಿಕ್ಷಕರ ಕ್ಷೇತ್ರದ ರಮೇಶ್ಬಾಬು (ಜೆಡಿಎಸ್),ಕರ್ನಾಟಕ ದಕ್ಷಿಣ ಶಿಕ್ಷಣ ಕ್ಷೇತ್ರದ ಮರಿತಿಬ್ಬೇಗೌಡ (ಜೆಡಿಎಸ್), ನೈರುತ್ಯ ಶಿಕ್ಷಕರ ಕ್ಷೇತ್ರದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ (ಬಿಜೆಪಿ), ನೈರುತ್ಯ ಪದವೀಧರ ಕ್ಷೇತ್ರದ ಡಿ.ಎಚ್.ಶಂಕರಮೂರ್ತಿ (ಬಿಜೆಪಿ ಸಭಾಪತಿ),
ಬೆಂಗಳೂರು ಪದವೀಧರ ಕ್ಷೇತ್ರದ ರಾಮಚಂದ್ರಗೌಡ (ಬಿಜೆಪಿ) ಹಾಗೂ ಈಶಾನ್ಯ ಪದವೀಧರ ಕ್ಷೇತ್ರದ ಅಮರನಾಥ ಪಾಟೀಲ್ (ಬಿಜೆಪಿ) ಅವರ ಅವಧಿ ಜೂನ್ ತಿಂಗಳಲ್ಲಿ ಕೊನೆಗೊಳ್ಳಲಿದ್ದು, ಈ ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ.