Advertisement

ಚುನಾಯಿತ ಪ್ರತಿನಿಧಿಗಳ ಧ್ವನಿಯಾಗುವ ಮಹದಾಸೆ

12:55 AM Dec 08, 2021 | Team Udayavani |

ಮಂಗಳೂರು: ಚುನಾಯಿತ ಪ್ರತಿನಿಧಿಗಳ ಧ್ವನಿಯಾಗಬೇಕೆಂಬುದು ನನ್ನ ಮಹದಾಸೆ. ಇದುವೇ ನಾನು ಈ ಚುನಾವಣೆಯಲ್ಲಿ ಸ್ಪರ್ಧಿಸು ತ್ತಿರುವುದರ ಮುಖ್ಯ ಉದ್ದೇಶ ಎಂದು ವಿಧಾನ ಪರಿಷತ್ತಿಗೆ ದಕ್ಷಿಣ ಕನ್ನಡ ಸ್ಥಳೀಯಾಡಳಿತ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್‌ ಅಭ್ಯರ್ಥಿ ಮಂಜುನಾಥ ಭಂಡಾರಿ ಅವರು ಹೇಳಿದ್ದಾರೆ.

Advertisement

ಪರಿಷತ್‌ ಚುನಾವಣೆಯ ಹಿನ್ನೆಲೆಯಲ್ಲಿ ಅವರು ಉದಯವಾಣಿ ಜತೆ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಪ್ರ: ತಾವು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಹಿನ್ನೆಲೆ ಏನು?
· ಪಂಚಾಯತ್‌ ರಾಜ್‌ ನನ್ನ ನೆಚ್ಚಿನ ವಿಷಯ. ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದಾಗ ಪಂಚಾಯತ್‌ರಾಜ್‌ ಕಾನೂನಿಗೆ ಸಾಂವಿಧಾನಿಕ ತಿದ್ದುಪಡಿ ತರುವುದಾಗಿ ಹೇಳಿದಾಗ ನಾನು ದಿಲ್ಲಿಯಲ್ಲಿದ್ದೆ. ಆಸ್ಕರ್‌ ಫೆರ್ನಾಂಡಿಸ್‌ ಜತೆ ಹಲವಾರು ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದೆನು. ಪಂಚಾಯತ್‌ ರಾಜ್‌ ವಿಷಯದಲ್ಲಿ ವೈಯಕ್ತಿಕವಾಗಿ ಅಭಿರುಚಿ ಹುಟ್ಟಿಕೊಂಡು ಅಕಾಡೆಮಿಕ್‌ ಆಗಿ ಆಧ್ಯಯನ ಆರಂಭಿಸಿದೆ. ಹಾಗೆ ಈ ವಿಷಯದಲ್ಲಿ ಎಂಫಿಲ್‌ ಮತ್ತು ಪಿಎಚ್‌ಡಿಯನ್ನೂ ಮಾಡಿದ್ದೇನೆ. ಈ ಸಂದರ್ಭದಲ್ಲಿ ಮಾಹಿತಿ ಸಂಗ್ರಹಿಸಲು ರಾಜ್ಯದ 7-8 ಜಿಲ್ಲೆಗಳಲ್ಲಿ ಚುನಾಯಿತ ಪ್ರತಿನಿಧಿಗಳನ್ನು ಅದರಲ್ಲೂ ಮುಖ್ಯವಾಗಿ ಮಹಿಳೆಯರನ್ನು ಭೇಟಿ ಮಾಡಿದಾಗ ಅವರು ಸ್ವ ಇಚ್ಛೆಯಿಂದ ತೆಗೆದುಕೊಳ್ಳುವ ನಿರ್ಧಾರ ಬೇರೆ ಹಾಗೂ ಒತ್ತಡಗಳಿಗೆ ಮಣಿದು ತೆಗೆದುಕೊಳ್ಳುವ ನಿರ್ಧಾರಗಳು ಬೇರೆ ಎನ್ನುವುದು ತಿಳಿದು ಬಂತು. ಎಲ್ಲೋ ಕೆಲವು ಕಾಣದ ಕೈಗಳು ಅವರನ್ನು ಕಟ್ಟಿ ಹಾಕುತ್ತವೆ ಎಂಬುದನ್ನು ಕಂಡುಕೊಂಡೆ. ಇದು ಒಂದು ಕಡೆಯಾದರೆ ಇನ್ನೊಂದು ಕಡೆ ಮಹಾತ್ಮಾ ಗಾಂಧಿ ಅವರ ಗ್ರಾಮ ಸ್ವರಾಜ್ಯದ ಕನಸು ಹಾಗೂ ಪ್ರಸ್ತುತ ಇರುವ ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ತುಲನೆ ಮಾಡಿದಾಗ ಪಂಚಾಯತ್‌ರಾಜ್‌ ಕಾನೂನಿನಲ್ಲಿ ಬದಲಾವಣೆ ತರಬೇಕೆಂದು 10-12 ವರ್ಷಗಳಿಂದ ಯೋಚನೆ ಮಾಡುತ್ತಾ ಇದ್ದೆ. ಅದರ ಅನುಷ್ಠಾನದ ಬಗ್ಗೆ ಪಂಚಾಯತ್‌ ರಾಜ್‌ ಸಚಿವರಿಗೆ ಸಲಹೆ ಕೊಡು ತ್ತಿದ್ದೆ. ಸೂಕ್ತವೆನಿಸಿದ ಕೆಲವು ಸಲಹೆಗಳನ್ನು ಸಚಿವರು ಜಾರಿಗೆ ತರುತ್ತಿದ್ದರು. ಹಾಗೆ ಈ ಬಾರಿ ವಿಧಾನ ಪರಿಷತ್‌ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಅವರು ತಾನು ಸ್ಪರ್ಧಿಸುವುದಿಲ್ಲ ಎಂದು ಹೇಳಿದಾಗ ನನ್ನ ಹಲವಾರು ಹಿತೈಷಿಗಳು ನೀವ್ಯಾಕೆ ಸ್ಪರ್ಧಿಸ ಬಾರದೆಂದು ಕೇಳಿದರು. ನಾನು ಅದಕ್ಕೆ ಸಮ್ಮತಿಸಿ ಈ ಬಗ್ಗೆ ಪ್ರತಾಪ್‌ಚಂದ್ರ ಶೆಟ್ಟರನ್ನು ಭೇಟಿ ಮಾಡಿದಾಗ ಸಹಮತ ಸೂಚಿಸಿದರು. ಪಕ್ಷದ ಜಿಲ್ಲಾ ಮತ್ತು ರಾಜ್ಯ ಮಟ್ಟದ ನಾಯಕರೂ ನನ್ನನ್ನು ಸೂಕ್ತ ಅಭ್ಯರ್ಥಿ ಎಂದು ಪರಿಗಣಿಸಿದರು.

ಪ್ರ: ನಿಮ್ಮ ರಾಜಕೀಯ ಜೀವನದ ಬಗ್ಗೆ ವಿವರಿಸುವಿರಾ?
· 42 ವರ್ಷಗಳಿಂದ ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. 1978 ರಲ್ಲಿ ವಿದ್ಯಾರ್ಥಿಯಾಗಿದ್ದಾಗ ಆರಂಭ ವಾದ ರಾಜಕೀಯ ಜೀವನ ಹಂತ ಹಂತವಾಗಿ ಪಕ್ಷ ಸಂಘಟನೆ ಯಲ್ಲಿ ತೊಡಗಿಸಿಕೊಂಡು ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹಾಗೂ ಕೆಪಿಸಿಸಿ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸಿರುತ್ತೇನೆ. ಪ್ರಸ್ತುತ ಎಐಸಿಸಿ ಸದಸ್ಯನಾಗಿರುತ್ತೇನೆ.

ಪ್ರ: ರಾಜಕೀಯ ಬದುಕಿನಲ್ಲಿ ಸಮಾ ಜಕ್ಕೆ ನೀಡಿದ ಕೊಡುಗೆಗಳೇನು ?
· 2004ರಲ್ಲಿ ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರಕ್ಕೆ ಬಂದಾಗ ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ವಿಷಯ ಚುನಾವಣಾ ಪ್ರಣಾಳಿಕೆಯಲ್ಲಿತ್ತು. ಈ ಪ್ರಣಾಳಿಕೆಯಲ್ಲಿ ರಾಜೀವ್‌ ವಿಕಾಸ ಕೇಂದ್ರ ಎಂಬ ಯೋಜನೆಯ ಪ್ರಸ್ತಾವವನ್ನು ಆಸ್ಕರ್‌ ಫೆರ್ನಾಂಡಿಸ್‌ ಮತ್ತು ಸೋನಿಯಾ ಗಾಂಧಿ ಅವರ ಮೂಲಕ ಆಗಿನ ಪ್ರಧಾನಿ ಡಾ| ಮನಮೋಹನ್‌ ಸಿಂಗ್‌ ಅವರಿಗೆ ನೀಡಿದ್ದೆ. ಹಳ್ಳಿಗಳಲ್ಲಿ ಉದ್ಯೋಗ‌ ಸೃಷ್ಟಿ ಹೇಗೆ ಮಾಡ ಬಹುದೆಂದು ಅದರಲ್ಲಿ ವಿವರಿಸಿದ್ದೆ. 2006ರಲ್ಲಿ ಅಂದಿನ ಕೇಂದ್ರ ಸಂಪುಟವು ಇದಕ್ಕೆ ಅನುಮೋದನೆ ನೀಡಿತ್ತು. ಆದರೆ ಆಗ ಪೂರ್ಣ ಪ್ರಮಾಣದ ಸರಕಾರ ಇಲ್ಲದ ಕಾರಣ ಈ ಯೋಜನೆಯನ್ನು ಸೆಂಟರ್‌ ಆಫ್‌ ಸರ್ವೀಸ್‌ ಎಂಬುದಾಗಿ ಬದಲಾಯಿಸಿತ್ತು. ಈಗಿರುವ ಆಧಾರ್‌ ಕಾರ್ಡ್‌, ಡಿಜಿಟಲ್‌ ಇಂಡಿಯಾದ ಪರಿಕಲ್ಪನೆ ನಾನು ಆಂದು ಸಲ್ಲಿಸಿದ್ದ ಪ್ರಸ್ತಾವನೆಯಲ್ಲಿ ಅಡಕವಾಗಿತ್ತು.

Advertisement

ಇಷ್ಟೇ ಅಲ್ಲದೆ ಮುಂದೆ ರಾಜ್ಯದಲ್ಲಿ ಎಸ್‌.ಎಂ. ಕೃಷ್ಣ ಸರಕಾರ ಇದ್ದಾಗ ಬಡತನ ರೇಖೆಗಿಂತ ಕೆಳಗಿನವರಿಗೆ ಗ್ಯಾಸ್‌ ಸಂಪರ್ಕ ಒದಗಿಸುವ ಇಂದಿರಾ ಜ್ಯೋತಿ ಪರಿಕಲ್ಪನೆಯನ್ನು ನಾನು ನೀಡಿದ್ದೆ. ಅದನ್ನು ಅಂದಿನ ಸರಕಾರ ಅಳವಡಿಸಿಕೊಂಡಿತ್ತು.

ಪ್ರ: ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶವೇನು?
· ಚುನಾಯಿತ ಪ್ರತಿನಿಧಿಗಳ ಧ್ವನಿ ಆಗ ಬೇಕೆಂಬುದು ನನ್ನ ಮಹದಾಸೆ. ಇದುವೇ ನಾನು ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದರ ಮುಖ್ಯ ಉದ್ದೇಶ. ಚುನಾಯಿತ ಪ್ರತಿನಿಧಿಗಳನ್ನು ಭೇಟಿ ಮಾಡಿದಾಗ ಅವರು ತಮ್ಮ ಹಲವಾರು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಮುಖ್ಯವಾಗಿ ಅನುದಾನ ಹೆಚ್ಚಳ, ಅಧಿಕಾರ ಮೊಟಕುಗೊಳಿಸ ಬಾರದು ಇತ್ಯಾದಿ. ಇಂತಹ ವಿಷಯಗಳ ಬಗ್ಗೆ ಚರ್ಚಿಸುವ ಮೂಲಕ ಅವರ ಧ್ವನಿಯಾಗುತ್ತೇನೆ.

ಪ್ರ: ಸಿದ್ಧತೆಗಳು ಹೇಗಿವೆ? ಸ್ಪರ್ಧಿಸುತ್ತಿರುವ ಹಿನ್ನೆಲೆ ಏನು?
· ಈಗಾಗಲೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರತ್ಯೇಕ ವಾದ ಪಕ್ಷದ ಮುಖಂಡರ ಸಭೆ ನಡೆಸಲಾಗಿದೆ. ಎಲ್ಲ 13 ಶಾಸಕ ಕ್ಷೇತ್ರಗಳ 26 ಬ್ಲಾಕ್‌ಗಳಲ್ಲಿ 24 ಸಭೆ ಗಳನ್ನು ನಡೆಸಲಾಗಿದೆ. ಚುನಾಯಿತ ಪ್ರತಿನಿಧಿಗಳು ಮತ್ತು ಅವರಿಗೆ ಸಹಕರಿಸಿದ ನಾಯಕರ ಸಭೆ ನಡೆಸಿ ವೈಯಕ್ತಿಕ ಸಂಪರ್ಕ ಸಾಧಿಸಲಾಗಿದೆ.

ರಾಜಕೀಯ ಹೊರತಾದ ನಿಮ್ಮ ಬದುಕಿನ ಬಗ್ಗೆ ಹೇಳುವಿರಾ?
ಉದ್ಯಮಿಯಾಗಿರುವ ನಾನು ಶಿಕ್ಷಣ ತಜ್ಞನೂ ಆಗಿದ್ದು, 2002ರಲ್ಲಿ ಭಂಡಾರಿ ಫೌಂಡೇಶನ್‌ ಸ್ಥಾಪಿಸಿ ಸಹ್ಯಾದ್ರಿ ಎಂಜಿನಿಯರಿಂಗ್‌ ಮತ್ತು ಮ್ಯಾನೇಜ್‌ಮೆಂಟ್‌ ಕಾಲೇಜು ಮತ್ತಿತರ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದೇನೆ. ಇದರ ಹೊರತಾಗಿ 2001ರಲ್ಲಿ ಅಮೆರಿಕನ್‌ ಕೌನ್ಸಿಲ್‌ ಆಫ್‌ ಯಂಗ್‌ ಪೊಲಿಟಿಕಲ್‌ ಲೀಡರ್‌ ವಿಚಾರ ವಿನಿಮಯದಲ್ಲಿ, 2002ರಲ್ಲಿ ಭಾರತ ಸರಕಾರದ ನಿಯೋಗದಲ್ಲಿ ಬಾರ್ಸಿಲೋನಾದಲ್ಲಿ ವಿಶ್ವ ಏಡ್ಸ್‌ ಸಮಾವೇಶದಲ್ಲಿ, 2003ರಲ್ಲಿ ಭಾರತದ ಯುವಜನರ ಉನ್ನತ ಮಟ್ಟದ ನಿಯೋಗದೊಂದಿಗೆ ಇಸ್ರೆಲ್‌ನಲ್ಲಿ ಪ್ರಧಾನಿ ಶೆರೋನ್‌ ಜತೆ ಸಭೆಯಲ್ಲಿ ಭಾಗವಹಿಸಿದ್ದೆ. 2005ರಲ್ಲಿ ವೆನಿಜುವೆಲಾದಲ್ಲಿ ನಡೆದ ವಿಶ್ವ ಯುವಜನೋತ್ಸವದಲ್ಲಿ, 2006 ರಲ್ಲಿ ನ್ಯೂಯಾರ್ಕ್‌ ನಲ್ಲಿ ಭಾರತೀಯ ಸ್ವಾತಂತ್ರ್ಯೋತ್ಸವ ಪರೇಡ್‌ ನಲ್ಲೂ ಭಾಗವಹಿಸಿದ್ದೆ. 2004ರಲ್ಲಿ ವಿಶ್ವ ಮಟ್ಟ ದಲ್ಲಿ ಐಸೆನ್‌ ಹೋವರ್‌ ಫೆಲೋಶಿಪ್‌ ಪ್ರಶಸ್ತಿ ನನಗೆ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next