ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ನ 25 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ತಾ.ಪಂ., ಜಿ.ಪಂ. ಹಾಗೂ 56 ನಗರ ಸ್ಥಳೀಯ ಸಂಸ್ಥೆಗಳಿಂದ ಸುಮಾರು 6 ಸಾವಿರ ಮತನಷ್ಟ ಉಂಟಾಗಲಿದೆ. ಇದಕ್ಕೆ ಕಾರಣ ಅವಧಿ ಮುಗಿದ ನಗರ ಸ್ಥಳೀಯ ಸಂಸ್ಥೆಗಳಿಗೆ, ತಾ.ಪಂ, ಜಿ.ಪಂ.ಗಳಿಗೆ ಚುನಾವಣೆ ನಡೆಯದೆ ಇರುವುದು.
ಹೀಗಾಗಿ ಕಳೆದ ಬಾರಿ ಹೆಚ್ಚು ಸದಸ್ಯರನ್ನು ಹೊಂದಿದ್ದ ಕರಾವಳಿಯಲ್ಲಿ ಬಿಜೆಪಿಗೆ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕಾಂಗ್ರೆಸ್‌ಗೆ ಮತ್ತು ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ಗೆಈ ಬಾರಿ “ಮತನಷ್ಟ’ ಆಗಲಿದೆ. ಒಟ್ಟಾರೆಯಾಗಿ ಜೆಡಿಎಸ್‌ಗೆ ಹೆಚ್ಚಿನ ಮತನಷ್ಟ ಆಗಲಿದೆ.
ಸುಮಾರು 6 ಸಾವಿರಕ್ಕೂ ಹೆಚ್ಚು ಮತದಾರರ “ಅನುಪಸ್ಥಿತಿ’ಯಲ್ಲಿ ವಿಧಾನಪರಿಷತ್ತಿನ ಚುನಾವಣೆ ನಡೆಯಲಿದ್ದು, 6 ಸಾವಿರಕ್ಕೂ ಹೆಚ್ಚು ಗ್ರಾ.ಪಂ. ಮತ್ತು 200ಕ್ಕೂ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಮೇಲ್ಮನೆ ಆಕಾಂಕ್ಷಿಗಳಿಗೆ “ಬಂಡವಾಳ’ವಾಗಿದ್ದಾರೆ.
ರಾಜ್ಯದ 31 ಜಿ.ಪಂ. ಹಾಗೂ 233 ತಾ.ಪಂ.ಗಳ ಚುನಾಯಿತ ಸದಸ್ಯರ ಅವಧಿ ಮುಗಿದಿದೆ. ಹೀಗಾಗಿ ಜಿ.ಪಂ., ತಾಪಂ.ನಲ್ಲಿ ಸದ್ಯ ಮತದಾರರು ಇಲ್ಲ. 2016ರ ಸಾರ್ವತ್ರಿಕ ಚುನಾವಣೆಯಲ್ಲಿ 1,083 ಜಿ.ಪಂ. ಹಾಗೂ 3,884 ತಾ.ಪಂ. ಸೇರಿ ಒಟ್ಟು 4,967 ಸದಸ್ಯರು ಗೆದ್ದಿದ್ದರು. ಈ ಲೆಕ್ಕದಂತೆ ಈ ಬಾರಿಯ ವಿಧಾನಪರಿಷತ್ ಚುನಾವಣೆಗೆ ಜಿ.ಪಂ.-ತಾ.ಪಂ.ಗಳ 4,967 ಮತಗಳು ಸಿಗುವುದಿಲ್ಲ.
273 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 56ಕ್ಕೂ ಹೆಚ್ಚು ಕಡೆ ಚುನಾವಣೆ ನಡೆಯ ಬೇಕಿರುವುದರಿಂದ ಇಲ್ಲಿ 1,100ಕ್ಕೂ ಹೆಚ್ಚು ಮತಗಳು ಸಿಗುವುದಿಲ್ಲ. ಜತೆಗೆ ಬಿಬಿಎಂಪಿಯ 198 ವಾರ್ಡ್ ಸದಸ್ಯರ ಮತಗಳು ಈ ಬಾರಿ ಇಲ್ಲ. ಹೀಗಾಗಿ ಒಟ್ಟು 6 ಸಾವಿರಕ್ಕೂ ಹೆಚ್ಚು ಮತಗಳು ಸಿಗುವುದಿಲ್ಲ. ಈ ಮತಗಳ ಕೊರತೆಯನ್ನು ಗ್ರಾ.ಪಂ., ನಗರ ಸ್ಥಳೀಯ ಸಂಸ್ಥೆಗಳಿಂದ ಸರಿದೂಗಿಸಿಕೊಳ್ಳುವ ಅನಿವಾರ್ಯದಲ್ಲಿ ಪಕ್ಷಗಳು ಸಿಲುಕಿವೆ.