ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಜೂನ್ 13ರಂದು ನಡೆಯುವ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚಿಸಲು ರಾಜ್ಯದ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮೇ 26ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ.
ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ್, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್ ಸಹಿತ ಒಟ್ಟು 11 ಮಂದಿಯ ಸದಸ್ಯತ್ವದ ಅವಧಿ ಮುಂದಿನ ತಿಂಗಳು ಅಂತ್ಯಗೊಳ್ಳಲಿದೆ.
ಈ ಸ್ಥಾನಗಳಿಗೆ ಈಗಾಗಲೇ ಚುನಾವಣೆ ದಿನಾಂಕ ಘೋಷಣೆ ಆಗಿರುವುದರಿಂದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಬೇಕಿದೆ.ಹಿರಿತನ, ಪಕ್ಷ ನಿಷ್ಠೆ, ಜಾತಿ, ಪಕ್ಷ ಸೇರ್ಪಡೆಗೊಂಡವರಿಗೆ ನೀಡಿದ್ದ ಆಶ್ವಾಸನೆ ಈಡೇರಿಸುವುದು ಸಹಿತ ಹಲವು ಮಾನದಂಡಗಳನ್ನು ಇಟ್ಟುಕೊಂಡು ಅಭ್ಯರ್ಥಿಗಳ ಆಯ್ಕೆ ಆಗಬೇಕಿದೆ. ಈ ಹಿನ್ನೆಲೆಯಲ್ಲಿ ಸುಜೇìವಾಲ ಬೆಂಗಳೂರಿಗೆ ಆಗಮಿಸುತ್ತಿದ್ದು, ಅದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪರಸ್ಪರ ಕುಳಿತು ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವ ಸಾಧ್ಯತೆಗಳಿವೆ.
ಡಿಕೆಶಿ ಭೇಟಿಯಾದ ಎಂಸಿವಿ
ಈ ಮಧ್ಯೆ ಮೇಲ್ಮನೆ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿರುವ ಕೆಪಿಸಿಸಿ ಉಪಾಧ್ಯಕ್ಷ ಎಂ.ಸಿ.ವೇಣುಗೋಪಾಲ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಬುಧವಾರ ಅವರ ನಿವಾಸದಲ್ಲಿ ಭೇಟಿಯಾಗಿ ಮೇಲ್ಮನೆಗೆ ತಮ್ಮನ್ನು ಪರಿಗಣಿಸುವಂತೆ ಮನವಿ ಮಾಡಿದ್ದಾರೆ. ತನಗೆ ಮೊದಲು ನೀಡಿದ್ದ ಅವಕಾಶದಲ್ಲಿ ಕೇವಲ 20 ತಿಂಗಳು ಮಾತ್ರ ಮೇಲ್ಮನೆಯ ಸದಸ್ಯತ್ವದ ಅವಧಿ ಇತ್ತು. ಉಳಿದವರೆಲ್ಲರೂ 6 ವರ್ಷ ಪೂರ್ಣಾವಧಿ ಮುಗಿಸಿದ್ದರು. ಹೀಗಾಗಿ ಮತ್ತೂಮ್ಮೆ ಅವಕಾಶ ಕಲ್ಪಿಸಬೇಕೆಂದು ಕೋರಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗದ ಹಾಗೂ ಗೆಲ್ಲಲು ಸಾಧ್ಯವೇ ಇಲ್ಲದಂತಹ ಸಣ್ಣಪುಟ್ಟ ಸಮಾಜಗಳನ್ನು ಗುರುತಿಸಿ ಅವಕಾಶ ಕಲ್ಪಿಸಬೇಕೆಂದು ವೇಣುಗೋಪಾಲ್ ಮನವಿ ಮಾಡಿದ್ದಾರೆ.